ಚಿಕ್ಕಬಳ್ಳಾಪುರ: ದೇಶದ ಮೊಟ್ಟಮೊದಲ ಡಿಜಿಟಲ್ ಜನಗಣತಿಗೆ ಏಪ್ರಿಲ್ 1 ರಂದು ಜಿಲ್ಲೆಯಲ್ಲಿ ಚಾಲನೆಯಾಗಲಿದೆ, ಜೆಲ್ಲೆಯ ಸಾರ್ವಜನಿಕರು ಈ ಗಣತಿ ಕಾರ್ಯಕ್ಕೆ ಸಹಕಾರ ನೀಡುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಜಿ.ಪ್ರಭು(District Collector G.Prabhu)ಮನವಿ ಮಾಡಿದರು.
"ಭಾರತ ಜನಗಣತಿ 2027"ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
2026-27ನೇ ಸಾಲಿನ ಜನಗಣತಿ ಕಾರ್ಯವು ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಆರಂಭವಾಗಿ ಮೇ 15 ರವರೆಗೆ ನಡೆಯಲಿದೆ. ಜನಗಣತಿ ಕಾರ್ಯಕ್ಕೆ 2,533 ಜನಗಣತಿದಾರರನ್ನು 422 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. 150 ರಿಂದ 200 ಮನೆಗಳನ್ನು ಒಳಗೊಳ್ಳುವಂತೆ ಒಟ್ಟು ಜಿಲ್ಲೆಯಲ್ಲಿ 3,121 ಬ್ಲಾಕ್ ಗಳನ್ನು ಮಾಡಲಾಗಿದೆ. ಒಂದು ಬ್ಲಾಕ್ ನಲ್ಲಿ 700 ರಿಂದ 800 ಜನರು ಇರಲಿದ್ದಾರೆ ಎಂದರು.
ಜನಗಣತಿಗಾಗಿ ಒಟ್ಟು ಜಿಲ್ಲೆಯಲ್ಲಿ 16 ಚಾರ್ಜ್ ಗಳನ್ನು ಮಾಡಿ 16 ಅಧಿಕಾರಿಗಳನ್ನು ನೇಮಿಸ ಲಾಗಿದೆ. ಜನಗಣತಿಗೆ ನಿಯೋಜನೆ ಆಗಿರುವ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು, ಉಪನ್ಯಾಸಕರನ್ನು ಜನಗಣತಿ ಕಾರ್ಯಕ್ಕೆ ಹಾಗೂ ಮೇಲ್ವಿಚಾರಣೆ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದರು.
2 ಮಾಸ್ಟರ್ ತರಬೇತುದಾರರನ್ನು ಜನಗಣತಿ ನಿರ್ದೇಶನಾಲಯದಿಂದ ನೇಮಕ ಮಾಡಲಾಗಿರುತ್ತದೆ ಹಾಗೂ ಜಿಲ್ಲೆಯಲ್ಲಿ 50 Field Trainer ಗಳನ್ನು ನೇಮಕ ಮಾಡಲಾಗಿರುತ್ತದೆ. ಸದರಿಯವರುಗಳಿಗೆ ಜನಗಣತಿ ನಿರ್ದೇಶನಾಲಯದ ಅಧಿಕಾರಿಗಳಿಂದ ತರಬೇತಿಯನ್ನು ಮಾ.17 ರಿಂದ 20 ರವರೆಗೆ ನೀಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಸ್ವ ಜನಗಣತಿ
ಜನಗಣತಿ ಕಾರ್ಯದ ಮೊದಲನೇ ಹಂತವಾಗಿ ಸ್ವಯಂ ಜನಗಣತಿ ಕಾರ್ಯವು 1ನೇ ಏಪ್ರಿಲ್ 2026 ರಿಂದ 15ನೇ ಏಪ್ರಿಲ್ 2026 ರವರೆಗೆ ನಡೆಯಲಿದೆ. ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ನೇರವಾಗಿ ಜನಗಣತಿ ನಿರ್ದೇಶನಾಲಯದ ಸ್ವ ಗಣತಿ ಪೋರ್ಟಲ್ (https://se.census.gov.in) ಮುಖಾಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿ ತಮ್ಮ ಹಾಗೂ ಕುಟುಂಬದ ಮಾಹಿತಿಯನ್ನು ದೋಷರಹಿತವಾಗಿ ನಮೂದಿಸಬಹುದಾಗಿರುತ್ತದೆ.
ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಐಡಿ (SE ID) ಸೃಜನೆಯಾಗಲಿದ್ದು, ಸದರಿ ಐಡಿ ಯನ್ನು ಗಣತಿದಾರರು ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗೆ ಏಪ್ರಿಲ್ 16 ರಿಂದ ಮೇ 15 ರವರೆಗೆ ಭೇಟಿ ನೀಡಲಿದ್ದು, ಸದರಿ ಗಣತಿದಾರು ಭೇಟಿ ನೀಡಿದ ಸಂದರ್ಭದಲ್ಲಿ ಐಡಿ ಯನ್ನು ಮುಂದಿನ ಪ್ರಕ್ರಿಯೆಗೆ ಗಣತಿದಾರಿಗೆ ನೀಡುವುದು.
ಜನಗಣತಿಯ ಮೊದಲನೇ ಹಂತವು ಪ್ರತಿಯೊಂದು ಕುಟುಂಬ ರಚನೆ ಮತ್ತು ಮ್ಯಾಪ್ ಅನ್ನು ಒಳಗೊಂಡಿರುತ್ತದೆ. ಸರ್ಕಾರ ಸೂಚಿಸಿರುವಂತೆ ವಸತಿ ಗುಣಮಟ್ಟ, ಸೌಕರ್ಯಗಳು, ನೀರು, ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆ ಸೇರಿದಂತೆ ಇನ್ನಿತರ 34 ಪ್ರಶ್ನೆಗಳ ಮೂಲಕ ಮಾಹಿತಿ ಯನ್ನು ಸಂಗ್ರಹಿಸಲಾಗುತ್ತದೆ. ಇದು ಫೆಬ್ರವರಿ 2027 ರಿಂದ ನಡೆಯುವ ಎರಡನೇ ಹಂತದ ಜನಸಂಖ್ಯಾ ಗಣತಿಗೆ ಅಡಿಪಾಯವಾಗಿರುತ್ತದೆ ಎಂದರು.
ಜನಸಂಖ್ಯೆಯ ಮಾಹಿತಿಯನ್ನು ನಿರ್ದಿಷ್ಟವಾಗಿ ಗಣತಿ ಮಾಡುವುದರಿಂದ ಗುಣಮಟ್ಟದ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗುವ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಆದ್ದರಿಂದ ನೈಜ ಹಾಗೂ ನಿಖರ ಮಾಹಿತಿಯನ್ನು ನಾಗರಿಕರು ನೀಡಿ ಜನಗಣತಿ ಕಾರ್ಯಕ್ಕೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಕೋರಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಇದ್ದರು.