ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

American Red Globe grapes: ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಗಮನ ಸೆಳೆದ ಚಿಕ್ಕಬಳ್ಳಾಪುರ ರೈತ

ಕೆ.ಆರ್.ರೆಡ್ಡಿ ಅವರು ಆಧುನಿಕ ಕೃಷಿ ತಂತ್ರಜ್ಞಾನ, ಹನಿ ನೀರಾವರಿ ವ್ಯವಸ್ಥೆ, ಸಮರ್ಪಕ ಗೊಬ್ಬರ ನಿರ್ವಹಣೆ ಹಾಗೂ ವೈಜ್ಞಾನಿಕ ಕಟಾವು ಪದ್ಧತಿಗಳನ್ನು ಅಳವಡಿಸಿಕೊಂಡು ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಇದರ ಫಲವಾಗಿ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಗೊಂಚಲುಗಳು ಉತ್ತಮ ಗಾತ್ರ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ ರೈತನ ಅಮೆರಿಕನ್ ದ್ರಾಕ್ಷಿ ಪ್ರಯೋಗ ಯಶಸ್ವಿ ಬೆಳೆಗೆ ತಕ್ಕ ಬೆಲೆ
ಉತ್ತಮ ಇಳುವರಿಯೊಂದಿಗೆ ಕೈಹಿಡಿದ ಕೆಂಪು ಕೆಂಪಾದ ರೆಡ್‌ಗ್ಲೋಬ್ ಗೋಲಿ

ಚಿಕ್ಕಬಳ್ಳಾಪುರ: ದ್ರಾಕ್ಷಿ ಬೆಳೆಗಾರರ ಜಿಲ್ಲೆಯೆಂದೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರದಲ್ಲಿ ಸಾಂಪ್ರದಾಯಿಕ ತಳಿಗಳ ನಡುವೆ ಅಮೆರಿಕನ್ ಮೂಲದ ರೆಡ್ ಗ್ಲೋಬ್ ದ್ರಾಕ್ಷಿ(American Red Globe grapes) ಬೆಳೆದು ಯಶಸ್ಸು ಸಾಧಿಸಿರುವ ರೈತರೊಬ್ಬರು ಗಮನ ಸೆಳೆದಿದ್ದಾರೆ. ಜಿಲ್ಲೆಯ ಅಜ್ಜವಾರ ಗ್ರಾಮದ ಪ್ರಗತಿಪರ ರೈತ ಕೆ.ಆರ್.ರೆಡ್ಡಿ ಅವರು ತಮ್ಮ ತೋಟದಲ್ಲಿ ಕಳೆದ 12 ವರ್ಷಗಳಿಂದ ರೆಡ್ ಗ್ಲೋಬ್ ದ್ರಾಕ್ಷಿಯನ್ನು ಬೆಳೆದು ಉತ್ತಮ ಗುಣಮಟ್ಟದ ಫಸಲು ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ದೊಡ್ಡ ಗಾತ್ರದ, ಆಕರ್ಷಕ ಕೆಂಪು ಬಣ್ಣದ ಹಾಗೂ ಸಿಹಿ ರುಚಿಯ ಹಣ್ಣುಗಳನ್ನು ಹೊಂದಿರುವ ರೆಡ್ ಗ್ಲೋಬ್ ದ್ರಾಕ್ಷಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಯಿದೆ. ಹೀಗಾಗಿ ಈ ತಳಿಯ ಬೆಳೆ ರೈತರಿಗೆ ಹೆಚ್ಚಿನ ಆದಾಯ ತಂದುಕೊಡುವ ಸಾಮರ್ಥ್ಯ ಹೊಂದಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: Chikkaballapur News: ರಸಗೊಬ್ಬರ ಕೊರತೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ರೈತರ ಆಕ್ರೋಶ

ಕೆ.ಆರ್.ರೆಡ್ಡಿ ಅವರು ಆಧುನಿಕ ಕೃಷಿ ತಂತ್ರಜ್ಞಾನ, ಹನಿ ನೀರಾವರಿ ವ್ಯವಸ್ಥೆ, ಸಮರ್ಪಕ ಗೊಬ್ಬರ ನಿರ್ವಹಣೆ ಹಾಗೂ ವೈಜ್ಞಾನಿಕ ಕಟಾವು ಪದ್ಧತಿಗಳನ್ನು ಅಳವಡಿಸಿಕೊಂಡು ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಇದರ ಫಲವಾಗಿ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಗೊಂಚಲುಗಳು ಉತ್ತಮ ಗಾತ್ರ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ. ಒಂದೊಂದು ಗೊನೆ 2 ಕೆ.ಜಿಯಷ್ಟು ತೂಗುತ್ತಿದೆ.ನೋಡಲು ಆಫಲ್‌ನಂತೆ ಬಣ್ಣವುಳ್ಳ ರೆಡ್‌ಗ್ಲೋಬ್ ಗೊಂಚಲಿನ ತೋಟವು ಅಮೆರಿಕಾದ ತೋಟದಂತೆ ಕಂಗೊಳಿಸಿದೆ. ನೋಡಿದರೆ ನೋಡುತ್ತಲೇ ಇರುವಂತೆ ಮಾಡುವ ಸಮ್ಮೋಹಿ ಈ ರೆಡ್‌ಗ್ಲೋಬ್ ದ್ರಾಕ್ಷಿಯಾಗಿದೆ.

ರೆಡ್‌ಗ್ಲೋಬ್ ದ್ರಾಕ್ಷಿ ಬೆಳೆ ಎನ್ನುವುದೇ ರೈತರಿಗೆ ಸವಾಲು.ಯಾಕೆಂದರೆ ಇದು ಅಷ್ಟು ಸುಭವಾಗಿ ಬೆಳೆಯುವ ಬೆಳೆ ಅಲ್ಲ.ಗಿಡ ಭೂಮಿಗೆ ಹಾಕಿದಾಗಿನಿಂದ 2 ವರ್ಷದ ತನಕ ಮಗುವನ್ನು ನೋಡಿ ಕೊಂಡಂತೆ ನೋಡಬೇಕು. ಗ್ರಾಫ್ಟಿಂಗ್ ಮಾಡಿದಾಗ ಅದರ ಸಕ್ಸಸ್ ಇರಬಹುದು, ಜಾಯಿಂಟ್ ಕೂಡುವುದು ಇರಬಹುದು ತುಂಬಾ ಕಷ್ಟಯಿದೆ. ಪಾಪ ಎಲ್ಲಾ ರೈತರು ಈ ಬೆಳೆ ಹಾಕಿರುತ್ತಾರೆ. ಆದರೆ ಸಕ್ಸಸ್ ರೇಟ್ ತುಂಬಾ ಕಡಿಮೆ. ಒಮ್ಮೆ ಯಶಸ್ವಿಯಾಗಿ ಗಿಡ ಬೆಳೆಯಿತೆಂದರೆ ವರ್ಷವರ್ಷೇ ಫಸಲು ಕಾಣಬಹುದು ಎನ್ನುವುದು ರೈತರ ವಾದ.

cbpm1i

ಅಮೆರಿಕನ್ ತಳಿಯಾದ ರೆಡ್‌ಗ್ಲೋಬ್ ಬೇರೆ ದ್ರಾಕ್ಷಿಯ ತರ ಅಲ್ಲ. ಥಿನ್ನಿಂಗ್ ಹಂತದಲ್ಲಿ ಎಚ್ಚರಿಕೆ ಅಗತ್ಯ. ಯಾರೇ ಆಗಲಿ ಬೆಳಗ್ಗೆ 9 ಗಂಟೆಯ ತನಕ ದ್ರಾಕ್ಷಿ ಗೊಂಚಲನ್ನು ಅಪ್ಪಿ ತಪ್ಪಿಯೂ ಮುಟ್ಟುವಂತೆ ಇಲ್ಲ. ಒಂದು ವೇಳೆ ಮುಟ್ಟಿದರೆ ಸಾಕು ಇಡೀ ಗೊಂಚಲು ಸುಟ್ಟುಹೋಗುತ್ತದೆ. ಈ ಕೆಲಸ ಮಾಡುವ ಕಾರ್ಮಿಕರು ಮಹಾರಾಷ್ಟ್ರ ರಾಜ್ಯದಿಂದ ಬರುತ್ತಾರೆ. ಕೃಷಿ ಕಾರ್ಮಿಕರಿಗೆ ಬೆಳಿಗ್ಗೆ ಕೆಲಸವಿರುತ್ತದೆ ಆದರೆ ಇವರಿಗೆ 10 ಗಂಟೆಯ ನಂತರವೇ ಈ ಕೆಲಸ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮತ್ತೆ ಕೆಲಸ ನಿಲ್ಲುತ್ತದೆ. ಈ ರೀತಿ ಐಸಿಯುನಲ್ಲಿರುವ ರೋಗಿಯ ಆರೋಗ್ಯದ ಕಾಳಜಿವಹಿಸುವಂತೆ ವೈಜ್ಞಾನಿಕವಾಗಿ ನಿಯಮಬದ್ದವಾಗಿ ಕೆಲಸ ಮಾಡಿದಾಗ ಮಾತ್ರ ಲಾಭ ಕಾಣಲು ಸಾಧ್ಯ ಎಂದರು.

ತಾಳ್ಮೆ ಪರೀಕ್ಷೆ ಬೇಡುವ ಈ ಬೆಳೆಯನ್ನು ಆರೈಕೆ ಮಾಡಲಾಗದೆ, ಲಾಭವಿರಲಿ ಅಸಲೂ ಕಾಣಲಾ ಗದೆ ಎಷ್ಟೋ ರೈತರು ರೆಡ್ ಗ್ಲೋಬ್ ಬೆಳೆಯಿಂದ ನಷ್ಟವೊಂದಿ ಗಿಡಗಳನ್ನೇ ಕಿತ್ತುಹಾಕಿದವರಿದ್ದಾರೆ. ಒಂದು ವರ್ಷ ಕಡಿಮೆ ಲಾಭ ಬರಬಹುದು, ಮತ್ತೊಂದು ವರ್ಷ ಹೆಚ್ಚಿನ ಲಾಭ ತಂದುಕೊಡ ಬಹುದು. ಕಡಿಮೆ ಬಂದಾಗಲೂ ಅಷ್ಟೇ ಸಂಪನ್ಮೂಲಗಳನ್ನು ಗಿಡಕ್ಕೆ ಒದಗಿಸಬೇಕು, ಲಾಭ ಬಂದಾಗಲೂ ಎಂದಿನAತೆ ಕೊಡುವಷ್ಟೇ ಕೊಡಬೇಕು.ಲಾಭ ನಷ್ಟ ಇವೆರಡನ್ನೂ ಸರಿದೂಗಿಸಿ ಕೊಂಡು ಹೋದವರೇ ಯಶಸ್ವೀ ಕೃಷಿಕರಾಗುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.
*

ರೈತರಿಗೆ ಹೇಳುವುದಿಷ್ಟೇ 6 ತಿಂಗಳ ಬೆಳೆಯಾದ ಈ ರೆಡ್ ಗ್ಲೋಬ್ ಸಹಜವಾಗಿ ಬೆಳೆದಾಗ ಮಾತ್ರ ಇಳುವರಿ ಉತ್ತಮವಾಗಿ ಬಂದು ಬೆಲೆಯೂ ರೈತರ ಕೈಹಿಡಿಯುತ್ತದೆ.ನ್ಯಾಚುರಲ್ ಆಗಿ ಬೆಳೆಯಲು ಆಗದಿದ್ದಾಗ ಪರ್ಯಾಯವಾಗಿ ಏನೇನೋ ಮಾಡಿಕೊಂಡಿದ್ದಾರೆ.ಕ್ರಾಪ್ಸ್ ಇಲ್ಲ ಎಂದಾಗ ಪ್ರಯೋಗ ಮಾಡುತ್ತಾರೆ..ಇದೊಂಥರ 9 ತಿಂಗಳ ಮಗುವಿಗೆ ಬದಲಾಗಿ 6 ತಿಂಗಳಿಗೇ ಮಕ್ಕಳ ಹೆರಿಗೆ ಮಾಡಿಸಿ ದಂತೆ ಆಗಲಿದೆ. 6 ತಿಂಗಳ ಬೆಳೆಯನ್ನು 3 ತಿಂಗಳಲ್ಲಿ ಪಡೆಯುವ ಹರಸಾಹಸ ಮಾಡುವುದು ತಪ್ಪು. ಕಡ್ಡಿಯ ಗುಣಧರ್ಮಕ್ಕನುಗುಣವಾಗಿ ಬೆಳೆಯನ್ನು ಸಹಜವಾಗಿ ತೆಗೆಯಲು ಹೋದಾಗ ಮಾತ್ರ ಬಣ್ಣ, ಹಣ್ಣಿನ ಗಾತ್ರ, ಗುಣಮಟ್ಟ ಉತ್ತಮವಾಗಿರಲಿದೆ, ಮಾರುಕಟ್ಟೆಯಲ್ಲಿಯೂ ಕೂಡ ಬೆಳೆ ಬೆಳೆದ ರೈತರ ಹೆಸರು ಹಸಿರಾಗಿರಲಿದೆ ಎನ್ನುವುದು ರೈತ ರಾಜಬಾಬು ಮಾತು.

cbpm1a1

ರೋಗಬಾಧೆ ತಡೆ
ರೆಡ್‌ಗ್ಲೋಬ್ ದ್ರಾಕ್ಷಿಗೆ ಡೌನಿರೋಗವೂ ಬರುತ್ತದೆ.ಇದಕ್ಕಿಂತ ಆಂತ್ರಾಕ್ಸ್ ಮತ್ತು ತುಕ್ಕುರೋಗ ಬರುತ್ತದೆ. ಇದು ಎಲೆಗೆ ಬಂದರೆ ಎಲೆಗಳೆಲ್ಲಾ ಸುಟ್ಟು ಹೋಗುತ್ತವೆ. ಎಲೆ ಹಾಳಾಯಿತು ಎಂದರೆ ಹಣ್ಣು ಕಲರ್ ಬರಲ್ಲ. ಹೀಗಾಗಿ ಎಲೆಯನ್ನೂ ಉಳಿಸಿಕೊಳ್ಳಬೇಕು. ಕಾಯಿಯನ್ನು ಡೌನಿ, ಪೌಡರಿ ಯಿಂದ ಉಳಿಸಿಕೊಳ್ಳಬೇಕು. ಎಲೆ ಮಂದ ಬಂದರೆ ಪೌಡರಿ ರೋಗ ಬರುತ್ತದೆ.ಇದರ ಜತೆಗೆ ಎಲ್ಲಾ ತೋಟಗಳಲ್ಲಿ ಮಿಲಿಬಗ್ ಸಾಮಾನ್ಯವಾಗಿಬಿಟ್ಟಿದೆ.ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ರೋಗಬಾಧೆಯಿಲ್ಲದೆ ಹಣ್ಣು ಸಮೃದ್ದವಾಗಿ ಬೆಳೆಯಲಿದೆ.ಮಿಲಿಬಗ್ ಬಂದರೆ ಆ ಹಣ್ಣನ್ನು ಯಾರೂ ಕಟಾವು ಮಾಡುವುದಿಲ್ಲ.ರೆಡ್‌ಗ್ಲೋಬ್‌ಗೆ ರೋಗಗಳು ಬಂದರೂ ಸಮಯ ಸಂದರ್ಭ ನೋಡಿಕೊಂಡು ಔಷದೋಪಚಾರ ಮಾಡಿಕೊಂಡಲ್ಲಿ ಲಾಭ ನೋಡಬಹುದು.

ಸಂತೋಷವಾಗುತ್ತಿದೆ !!
2014ರಿಂದ ನಾವು ರೆಡ್‌ಗ್ಲೋಬ್ ಬೆಳೆಯನ್ನು ಬೆಳೆಯುತ್ತಿದ್ದೇವೆ. ಎಂದೂ ಕೂಡ ನಮಗೆ ನಷ್ಟದ ಪ್ರಸಂಗ ಬಂದಿಲ್ಲ.ನಮ್ಮದು ಮೂಲತ: ಅವಿಭಕ್ತ ಕೃಷಿಕುಟುಂಬ.ಯಾವುದೇ ಬೆಳೆಯಿರಲಿ ವಿಜ್ಞಾನಿ ಗಳ ಮಾರ್ಗದರ್ಶನದಲ್ಲಿ ಅನುಭವದ ನೆರಳಲ್ಲಿ ನಿಷ್ಟೆಯಿಂದ ಮಾಡುತ್ತಿರುವುದರಿಂದ ವರ್ಷ ದಿಂದ ವರ್ಷಕ್ಕೆ ಉತ್ತಮ ಇಳುವರಿಯ ಜತೆಗೆ ಲಾಭವೂ ಕೈಹಿಡಿದಿದೆ. 3 ಎಕರೆ ಪ್ರದೇಶದಲ್ಲಿ ಈ ಬೆಳೆಯಿದ್ದು ಸರಾಸರಿ ಎಕರೆಗೆ 50 ಟನ್ ಇಳುವರಿ ಬಂದಿದೆ. ತೋಟದಲ್ಲಿಯೇ ಪ್ರತಿ ಕೆ.ಜಿಗೆ 152 ರಂತೆ ಮಾರಾಟವಾಗಿರುವುದು ಸಂತೋಷ ತಂದಿದೆ ಎನ್ನುವುದು ಕೆ.ಆರ್.ರೆಡ್ಡಿ ಮಾತು.
*

ಕೆ.ಆರ್.ರೆಡ್ಡಿ ಮಾತನಾಡಿ, ಮನುಷ್ಯ ಜೀವನದಲ್ಲಿ ಏನಾದರು ವಿಶೇಷವಾದ ಸಾಧನೆ ಮಾಡ ಬೇಕೆಂಬ ಹಂಬಲವಿತ್ತು. 2014 ರಷ್ಟೊತ್ತಿಗೆ ಅನಾಬಿಷ ಕೈಕೊಟ್ಟಿತ್ತು. ದಿಲ್‌ಖುಷ್ ಕೂಡ ರೈತರಿಗೆ ನಷ್ಟದ ಹಾದಿ ತೋರಿತ್ತು.ಇಂತಹ ಹೊತ್ತಿನಲ್ಲಿ ಹೆಸರಘಟ್ಟದ ಐಆರ್‌ಹೆಚ್‌ನಲ್ಲಿ ಕೃಷಿವಿಜ್ಞಾನಿ ಆಗಿದ್ದ ಡಾ.ಪ್ರಕಾಶ್ದ್ ಅವರ ಬಳಿ ಸಂಕಷ್ಟ ತೋಡಿಕೊಂಡಾಗ ಅವರು ಅಮೆರಿಕನ್ ತಳಿಯಾದ ರೆಡ್ ಗ್ಲೋಬ್ ಬೆಳೆಯ ಬಗ್ಗೆ ಮಾಹಿತಿ ನೀಡಿದರು. ನಾನು ಈ ಬೆಳೆಯ ಮಾಹಿತಿ ಪಡೆಯುವ ಕಾಲಕ್ಕೆ ಒಬ್ಬ ದ್ರಾಕ್ಷಿ ಬೆಳೆ ವ್ಯಾಪಾರಿ ರೆಡ್‌ಗ್ಲೋಬ್ ತಳಿಯನ್ನು 200 ಕೆ.ಜಿಯಷ್ಟನ್ನು ಮಾತ್ರ ಕಟಾವು ಮಾಡುತ್ತಿದ್ದರು. ಆಗ ಈ ಬೆಳೆಗೆ ಮಾರುಕಟ್ಟೆಯೇ ಇರಲಿಲ್ಲ. ಆಗ ಅವರ ನನಗೆ ಧೈರ್ಯ ತುಂಬಿ ಈ ಬೆಳೆಯನ್ನು ಮಾಡಿ ನಿಮಗೆ ಒಳ್ಳೆಯದಾಗಲಿದೆ ಎಂದು ಹಾರೈಸಿದರು. ಬಿಜ್ಜವಾರದ ರೈತರಿಂದ ನಾನು ಕಡ್ಡಿ ಪಡೆದು ಬೆಳೆಯಿಟ್ಟಿದ್ದೇನೆ. ಅವರ ಹರಕೆ ಹಾರೈಕೆ, ನನ್ನ ತಮ್ಮಂದಿರ ಕೃಷಿ ಮೇಲಿನ ಪ್ರೀತಿ ಮತ್ತು ಶ್ರಮ ಇಂದು ಪ್ರಗತಿಪರ ರೈತರ ಪಟ್ಟವನ್ನು ತಂದುಕೊಟ್ಟಿದೆ ಎಂದರು.

ಅಮೆರಿಕಾ, ಇಸ್ರೇಲ್, ಚೀನಾಕಡೆ ಬೆಳೆಯುವ ಈರೆಡ್ ಗ್ಲೋಬ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಥಮಬಾರಿಗೆ ನಾವು ಬೆಳೆದೆವು.ಎಂತಹುದೇ ಸಂದರ್ಭ ಎದುರಾದರೂ 14 ವರ್ಷದಿಂದ ಕೆ.ಜಿ.ಗೆ 100ಕ್ಕಿಂತ ಕಡಿಮೆಗೆ ಕಟಾವು ಮಾಡಿಯೇ ಇಲ್ಲ. ಕಳೆದ ವರ್ಷ 140 ರೂನಂತೆ ಮಾರಾಟವಾಗಿತ್ತು. ಈ ವರ್ಷ 152ರಂತೆ ಬಿಕರಿಯಾಗಿದೆ ಎನ್ನುತ್ತಾರೆ. ನಮ್ಮ ಬೆಳೆಯನ್ನು 20 ದಿನಗಳ ಕಾಲ ಹಾಳಾಗದಂತೆ ಇಡುವಷ್ಟು ಗುಣಮಟ್ಟದಿಂದ ಕೂಡಿದೆ. ಒಂದು ಎಕರೆಯಲ್ಲಿ ಈ ಬೆಳೆಯಿಡಬೇಕಾದರೆ 1.5 ಲಕ್ಷದಿಂದ 2 ಲಕ್ಷದವರೆಗೆ ಖರ್ಚಾಗಲಿದೆ. ಮೊದಲು ಹೀಗಿರಲಿಲ್ಲ ಒಂದು ಎಕರೆಗೆ 60 80 ಸಾವಿರ ಇದ್ದರೆ ಸಾಕಾಗಿತ್ತು. ಆದರೀಗ ಒಂದು ಲೋಡ್ ಕೊಟ್ಟಿಗೆ ಗೊಬ್ಬರ 40 ಸಾವಿರಕ್ಕೇರಿದೆ. ಇದರ ಜತೆಗೆ ಕೀಟನಾಶಕ, ಕ್ರಿಮಿನಾಶಕಗಳ ಬೆಲೆ, ಕೂಲಿಗಳ ಬೆಲೆ ಹೆಚ್ಚಾಗಿರುವ ಕಾರಣ ಬಂಡವಾಳ ಜಾಸ್ತಿ ಹಾಕುವಂತಾಗಿದೆ ಎನ್ನುತ್ತಾರೆ.

ರಾಜಕಾರಣಕ್ಕೆ ಎರಡನೇ ಸ್ಥಾನ !!
ನಮ್ಮದು ವರ್ಷಗಳಿ 200 ವರ್ಷಗಳಿಂದ  ಅವಿಭಕ್ತ ಕುಟುಂಬ.ನಾನು ಚಿಕ್ಕವನ್ನಿದ್ದಾಗ ನಮ್ಮ ಕುಟುಂಬದಲ್ಲಿ 22 ಜನ ಒಟ್ಟಿಗೆ ಇದ್ದೆವು. ಈಗಲೂ 12 ಮಂದಿ ಒಟ್ಟಿಗೆ ಇದ್ದೇವೆ.ಕೃಷಿಯನ್ನು ನಂಬಿರುವ ನಾವು ಮೊದಲು ಇಲ್ಲಿ ಸುಧಾರಣೆ ತಂದಾದ ಮೇಲೆ ನಮ್ಮದೂ ಒಂದು ಸೇವೆಯಿರಲಿ ಎನ್ನುವ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದೇವೆ. ಕೆಲವರು ರಾಜಕೀಯಕ್ಕೆ ಬಂದು ಲಾಭಮಾಡಲು ನೋಡುತ್ತಾರೆ.ಈಗಿನ ವ್ಯವಸ್ಥೆಯಲ್ಲಿ ನಮಗೆ ಸರಿಹೊಂದುವುದಿಲ್ಲ. ನಾವು ಸೇವೆಯಾಗಿ ರಾಜಕೀಯ ವನ್ನು ನೋಡಿರುವುದರಿಂದ ನಮಗೆ ಯಾವುದೇ ಬೇಸರವಾಗಲಿ ಅಧಿಕಾರದ ಮೇಲೆ ವ್ಯಾಮೋಹ ವಾಗಲಿ ಇಲ್ಲ. ಕೃಷಿಯಲ್ಲಿ ಸಂಪಾದನೆ ಮಾಡಿದ್ದು ತಂದು ಅಲ್ಲಿ ಹಾಕುತ್ತಿದ್ದೇನೆ.

ಬೆಳೆ ವೀಕ್ಷಿಸಲು ಆಗಮನ!
ಕಳೆದ ವಾರ ಮಹಾರಾಷ್ಟ್ರ ರಾಜ್ಯದ ಅಹಮದಾಬಾದ್ ನಾಗಠಾಣಾ ಕಡೆಯಿಂದ 40 ಎಕರೆ ದ್ರಾಕ್ಷಿ ತೋಟವುಳ್ಳ ಬಹುದೊಡ್ಡ ರೈತರು ದ್ರಾಕ್ಷಿ ವ್ಯಾಪಾರಿಗಳು ನಮ್ಮ ತೋಟಕ್ಕೆ ಭೇಟಿ ನೀಡಿ ಇಲ್ಲಿನ ಇಳುವರಿ, ಕೃಷಿಪದ್ದತಿ ನೋಡಿ ಸಂತೋಷಪಟ್ಟಿದ್ದಷ್ಟೇ ಅಲ್ಲದೆ, ಈ ತಳಿಯ ಕಡ್ಡಿಯನ್ನು ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ.ನಮಗೆ ಖುಷಿಯೆಂದರೆ ಗೂಗಲ್‌ನಲ್ಲಿ ರೆಡ್‌ಗ್ಲೋಬ್ ಬಗ್ಗೆ ಹುಡುಕಿದರೆ ನನ್ನ ಹೆಸರು ಬರುತ್ತದೆ ಎಂದು ಯಾರಾದರೂ ಹೇಳಿದಾಗ ಸಂತೋಷವಾಗುತ್ತದೆ ಎನ್ನುತ್ತಾ ಹಸನ್ಮುಖಿಯಾದರು.

ಕಾಶ್ಮೀರ ಕಲ್ಕತ್ತಗೆ ರಪ್ತು
ನಮ್ಮ ತೋಟದ ದ್ರಾಕ್ಷಿಯು ಕಾಶ್ಮೀರ, ಕಲ್ಕತ್ತ,ಒರಿಸ್ಸಾಗೆ ರಫ್ತಾಗುತ್ತಿದ್ದು ಆಕಡೆಯ ವ್ಯಾಪಾರಿಗಳು ಬಂದು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮದು ಒಟ್ಟು 12 ಎಕರೆ ದ್ರಾಕ್ಷಿಯಿದ್ದು 8 ಎಕರೆಯಲ್ಲಿ ರೆಡ್‌ಗ್ಲೋಬ್‌ಯಿದೆ. ಈ ಬಾರಿ ಉತ್ತಮ ಬೆಳೆ, ಜತೆಗೆ ಬೆಲೆಯೂ ಇದೆ. ಯಾರೇ ಬಂದು ಈ ಬೆಳೆಯ ಬಗ್ಗೆ ಮಾಹಿತಿ ಕೇಳಿದರೂ ಮುಕ್ತಮನಸ್ಸಿನಿಂದ ಹೇಳುತ್ತಿದ್ದೇನೆ. ಆಕಾಶ ನೋಡಲು ನೂಕುನುಗ್ಗಲು ಯಾಕೆ ಎನ್ನುತ್ತಾ ಕೆ.ಆರ್.ರೆಡ್ಡಿ ಸಂತನಂತೆ ಮೌನವಾಗುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹವಾಮಾನ ಮತ್ತು ಮಣ್ಣಿನ ಗುಣಲಕ್ಷಣಗಳು ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಗೆ ಪೂರಕವಾಗಿದ್ದು, ರೈತರು ಸಾಂಪ್ರದಾಯಿಕ ತಳಿಗಳ ಜೊತೆಗೆ ಇಂತಹ ಹೊಸ ತಳಿಗಳತ್ತ ಮುಖ ಮಾಡಿದರೆ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆಗಳಿವೆ ಎಂದು ಕೃಷಿ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಯ ಯಶಸ್ಸಿನ ಮೂಲಕ ಕೆ.ಆರ್. ರೆಡ್ಡಿ ಅವರು ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಉತ್ತೇಜನ ನೀಡಿದ್ದು, ಜಿಲ್ಲೆಯ ರೈತ ಸಮುದಾಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ : 9343611675 ಕೆ.ಆರ್.ರೆಡ್ಡಿ ಪ್ರಗತಿಪರ ರೈತ.ಅಜ್ಜವಾರ. ಚಿಕ್ಕಬಳ್ಳಾಪುರ ಜಿಲ್ಲೆ.