ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಸಂಪತ್ತನ್ನ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಸಂಘಗಳ ಅಗ್ರಪಂಕ್ತಿಯಲ್ಲಿ ಮೊದಲು ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು ಸಂಘಗಳು ನಿಲ್ಲುತ್ತವೆ. ಈ ಎರಡೂ ವಕ್ಕಲಿಗರ ಸಂಘಗಳು ಶತಮಾನಕ್ಕೂ ಹಿಂದಿನ ಸಂಘಗಳಾಗಿವೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮನಂದನಾಥ ಮಹಾಸ್ವಾಮೀಜಿ(Nirmalanandanath Mahaswamiji) ತಿಳಿಸಿದರು.
ನಗರದ ಬಿಬಿ ರಸ್ತೆಯ ವಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ನಡೆದ “ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ” ಉದ್ಘಾಟನೆ ನೆರವೇರಿಸಿ, ಆಶೀರ್ವಚನ ನೀಡುತ್ಥಾ, ಮಾತನಾಡಿ, ಇವತ್ತು ಒಕ್ಕಲಿಗರ ಸಂಘ ಇಷ್ಟೊಂದು ಗಟ್ಟಿಯಾಗಿ ಉಳಿದು ಬೆಳೆದುಕೊಂಡು ಬರಲು ಕಾರಣ ಅಂದರೆ ಕೆ.ಬಿ.ಪಿಳ್ಳಪ್ಪ ಮತ್ತು ಡಿ ಹೊಸೂರು ಚಡ್ಡಿ(ನಿಕ್ಕರ್) ಪಿಳ್ಳಪ್ಪ ಎಂಬುದನ್ನ ಮರೆಯಬಾರದು ಎಂದರು.
ಸುಮಾರು 80 ವರ್ಷ ಇತಿಹಾಸವಿರುವ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪ ಇಂದು ಬೃಹದಾಕಾರವಾಗಿ ಎದ್ದು ನಿಂತಿರುವ ಈ ವಾಣಿಜ್ಯ ಕಟ್ಟಡದ ಜಾಗವನ್ನ ದಾನವಾಗಿ ನೀಡಿ ಉಳಿಸಿಕೊಂಡು ಬಂದಿರುವ ಕೀರ್ತಿ ನಾರಾಯಣಪ್ಪ ಮತ್ತು ಪೊಲೀಸ್ ದೊಡ್ಡಪ್ಪ ಎನ್ನು ವವರನ್ನು ಈಗ ನೆನೆಯಲೇ ಬೇಕು. ಒಕ್ಕಲುತನದಲ್ಲಿ ಮಣ್ಣಿನ ವಾಸನೆಯೊಂದನೆ ಬೆಳೆಯು ತ್ತಿರುವ ಸಮುಧಾಯಕ್ಕೆ ಕ್ಷಮಿಸುವ ಗುಣ ಇದೆ.
ಮತ್ತೊಬ್ಬರಿಗೆ ಅಯ್ಯೋಪಾಪ ಎಂದು ಅನ್ನ ನೀಡಿ ಕಾಪಾಡುವ ಗುಣ ಇದೆ. ಇಂತಹ ಸಮುದಾಯದಲ್ಲಿ ಹುಟ್ಟಿ ರಾಜಕಾರಣಿಗಳಾಗಿ ಜಿಲ್ಲೆಯನ್ನಾಳುತ್ತಿರುವ ಇಬ್ಬರು ಸುಧಾಕರ್ ಗಳು ಇಡೀ ಜಿಲ್ಲೆಗೆ ಬೆಳಕು ನೀಡು ತಿದ್ದಾರೆ ಎಂದು ಬದ್ದ ವೈರಿಗಳಿಂತಿರುವ ಇಬ್ಬರನ್ನೂ ಅಕ್ಕ ಪಕ್ಕ ಕೂರಿಸಿಕೊಂಡು ಇಬ್ಬರ ಬೆನ್ನ ಮೇಲೆ ಎರಡೂ ಕೈಯಿಟ್ಟು ಪ್ರಶಂಸೆ ವ್ಯಕ್ತಪಡಿಸುತಿದ್ದಂತೆ ಇಬ್ಬರ ಮೊಗದಲ್ಲೂ ಸಂತಸ ವ್ಯಕ್ತವಾಗಿತ್ತು. ಇಂಥದೊಂದು ಸನ್ನಿವೇಶವನ್ನ ನಿರೀಕ್ಷಿಸುತಿದ್ದ ಇಬ್ಬರ ಬೆಂಬಲಿಗರು ಚಪ್ಪಾಳೆ ತಟ್ಟಿ ಸ್ವಾಮೀಜಿ ಮಾತನ್ನು ಸ್ವಾಗತಿಸಿದರು.
ಸಮಾಜ ಎದುರಿಸುತ್ತಿರುವ ದೊಡ್ಡ ಸವಾಲು ಸಂಘಟನೆಯ ಕೊರತೆ ಇತ್ತು. ಇಂದು ಚಿಕ್ಕಬಳ್ಳಾಪುರದಲ್ಲಿ ಸಂಘಟನೆಗೆ ಕೊರತೆಯಿಲ್ಲ. ಆದರೆ ಸಮಾಜವನ್ನು ಒಗ್ಗೂಡಿಸ ಬೇಕಾಗಿದೆ. ಇದಕ್ಕಾಗಿ ಯುವಕರು ಮುಂದೆ ಬರಬೇಕು ಮತ್ತು ಮಹಿಳೆಯರು ನಾಯಕತ್ವ ವಹಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು.ಸಂಘಟಿತ ಶಕ್ತಿ ಬೆಳೆಸಬೇಕು. ಆಗ ನಮ್ಮ ಸಮಾಜ ಬೆಳೆಯುವುದಲ್ಲದೇ ಇತರ ಸಮಾಜಗಳನ್ನು ನಮ್ಮೊಂದಿಗೆ ಅಭಿವೃದ್ದಿಯ ಪಥದತ್ತ ತೆಗೆದುಕೊಂಡು ಹೋಗಬಹುದು ಎಂದರು.
ಸಮಾಜದ ಬೆಳವಣಿಗೆಗೆ ಶಿಕ್ಷಣ, ಸಂಘಟನೆ ಮತ್ತು ಸ್ವಾಭಿಮಾನ ಎಂಬ ಮೂರು ವಿಷಯ ಗಳು ಅತ್ಯಂತ ಮುಖ್ಯ. ಶಿಕ್ಷಣ ನಮ್ಮ ಭವಿಷ್ಯ ಕಟ್ಟುತ್ತದೆ. ಸಂಘಟನೆ ನಮ್ಮ ಶಕ್ತಿ ಹೆಚ್ಚಿಸು ತ್ತದೆ. ಸ್ವಾಭಿಮಾನ ನಮ್ಮ ಗುರುತನ್ನು ಉಳಿಸುತ್ತದೆ. ನಾವು ನಮ್ಮ ಮಕ್ಕಳಿಗೆ ಹಣ, ಆಸ್ತಿ ಬಿಟ್ಟು ಹೋಗಬಹುದು. ಆದರೆ ಅದಕ್ಕಿಂತ ದೊಡ್ಡದು ಮೌಲ್ಯಗಳನ್ನು ಬಿಟ್ಟು ಹೋಗ ಬೇಕು. ನಾವು ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಸಮಾಜ ನಿರ್ಮಿಸಬೇಕು. ನಾವು ಯಶಸ್ಸು ಗಳಿಸಬಹುದು. ಆದರೆ ಅದರ ಜೊತೆ ಸೇವೆಯನ್ನೂ ಉಳಿಸಬೇಕು ಎಂದು ತಿಳಿಸಿದರು.
ಈ ವೇಳೆ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥಸ್ವಾಮೀಜಿ, ಸಂಸದ ಡಾ.ಕೆ.ಸುಧಾಕರ್, ಸಚಿವ ಡಾ.ಎಂ.ಸಿ.ಸುಧಾಕರ್, ರಾಜ್ಯ ವಕ್ಕಲಿಗರ ಸಂಘದ ನಿರ್ಧೇಶಕರಾದ ಡಾ.ರಮೇಶ್. ಯಲುವಹಳ್ಳಿ ಎನ್.ರಮೇಶ್, ಕೋನಪ್ಪ ರೆಡ್ಡಿ, ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ವಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಕಾರ್ಯದರ್ಶಿ ಚನ್ನಪ್ಪ ರೆಡ್ಡಿ, ನಿರ್ದೇಶಕರಾದ ಎಂ.ಪ್ರಕಾಶ್, ಚದಲಪುರ ನಾರಾಯಣಸ್ವಾಮಿ, ಬಿ.ಎಂ.ರಾಮಸ್ವಾಮಿ, ಬಿ.ಕೆ.ಮಂಜುನಾಥ್, ಎ.ವಿ.ಬೈರೇ ಗೌಡ, ಕೆ.ಪಿ.ಶ್ರೀನಿವಾಸಮೂರ್ತಿ, ವಿ.ನಂಜುಂಡಪ್ಪ, ನಾರಾಯಣಸ್ವಾಮಿ, ನಾಗರಾಜ್, ಮುಖಂಡರಾದ ಕೆ.ವಿ.ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ, ಎ.ಗಜೇಂದ್ರ ಮತ್ತಿತರರು ಇದ್ದರು.