ಚಿಕ್ಕಬಳ್ಳಾಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಾತ್ಯತೀತ ಜನತಾ ದಳ ಪಕ್ಷ(Janata Dal (Secular))ವು ತನ್ನ ಸಂಘಟನೆ ಹಾಗೂ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ವಿವಿಧ ಘಟಕಗಳ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ಜಿಲ್ಲಾ ಘಟಕದ ಅಧ್ಯಕ್ಷ ಮುಕ್ತ ಮುನಿಯಪ್ಪ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರ ವಾಗಿರುವುದರಿಂದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಿ ಪಕ್ಷದ ಯಶಸ್ಸಿಗೆ ಕೈಜೋಡಿಸಬೇಕು.ಪಕ್ಷದ ಶಕ್ತಿ ಸಂಘಟನೆಯಲ್ಲಿದೆ ಅದನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆ ಎಂದರು.
ಇದನ್ನೂ ಓದಿ: JDS Satyayatre: ಧರ್ಮಸ್ಥಳಕ್ಕೆ ಜೆಡಿಎಸ್ ಸತ್ಯಯಾತ್ರೆ ಶುರು; ಬೆಂಗಳೂರಿನಿಂದ ಹಾಸನಕ್ಕೆ ಹೊರಟ ನಿಖಿಲ್
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಸದ್ಯ ದಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹೊಸ ಉತ್ಸಾಹ ತುಂಬುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ನಿರ್ದೇಶನದಂತೆ ಮೈತ್ರಿ ಧರ್ಮವನ್ನು ಪಾಲಿಸಿ,ಎರಡು ಪಕ್ಷಗಳ ಸಮನ್ವಯದೊಂದಿಗೆ ಚುನಾವಣೆ ಎದುರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಈ ಕ್ಷೇತ್ರದಲ್ಲಿ ಹಿಂದೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಪಕ್ಷದ ನೆಲೆ ಬಲವಾಗಿದೆ.ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಬೇಕೆಂಬ ಮನವಿಯನ್ನು ನಿಖಿಲ್ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದೆ.ಅವರು ಪಕ್ಷವನ್ನು ಇನ್ನಷ್ಟು ಸಂಘಟಿಸಿ ಬಲಪಡಿಸುವ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ ಎಂದರು.
ನರಸಿಂಹಮೂರ್ತಿ ಆದ ನನ್ನನ್ನು ಜೆಡಿಎಸ್ ಪಕ್ಷವು ಪರಿಶಿಷ್ಟ ಜಾತಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ನನಗೆ ವೈಯಕ್ತಿವಾಗಿ ಸಂತೋಷ ತಂದಿದೆ.ಪಕ್ಷದ ವರಿಷ್ಟರು, ರಾಜ್ಯಾಧ್ಯಕ್ಷರು ಕಾಲಕಾಲಕ್ಕೆ ನನಗೆ ವಹಿಸುವ ಜವಾಬ್ದಾರಿ ಯನ್ನು ಪ್ರಾಮಾಣಿವಾಗಿ ನಿರ್ವಹಿಸುತ್ತೇನೆ. ಪಕ್ಷಕ್ಕಾಗಿ,ಅದರ ಬಲವರ್ಧನೆಗಾಗಿ ಅಹರ್ನಿಶಿ ಶ್ರಮಿಸುತ್ತೇನೆ ಎಂದರು.
ಇನ್ನೂ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಪ್ರಸ್ತುತ ಭರದಿಂದ ಸಾಗುತ್ತಿದೆ.ಇದನ್ನು ಇನ್ನಷ್ಟು ಚುರುಕುಗೊಳಿಸಲು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ.ಅಧಿಕಾರಕ್ಕಿಂತ ಮೊದಲು ಸಂಘಟನೆ ಬಲಿಷ್ಠವಾಗಬೇಕು ಎಂಬುದೇ ನಮ್ಮ ಧ್ಯೇಯ. ಈ ಹಿನ್ನೆಲೆಯಲ್ಲಿ ಶಾಸಕ ಮೇಲೂರು ರವಿಕುಮಾರ್ ಹಾಗೂ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರೇ ನಮ್ಮ ಪಕ್ಷದ ಶಕ್ತಿ.ಅವರ ಮಾರ್ಗದರ್ಶನದಲ್ಲಿ ಪಕ್ಷದ ಶಕ್ತಿ ವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಮಂಚೇನಹಳ್ಳಿ ತಾಲೂಕು ಜೆಡಿಎಸ್ ಮುಖಂಡ ನಾರಾಯಣಗೌಡ ಮಾತನಾಡಿ ನಿಖಿಲ್ ಕುಮಾರಸ್ವಾಮಿ ಜಿಲ್ಲೆಗೆ ಬಂದಿದ್ದ ವೇಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಯಕತ್ವದ ಕೊರತೆಯಿಂದಾಗಿ ಪಕ್ಷದ ಬಲವರ್ಧನೆ ಸೊರಗಿದೆ.ಹೀಗಾಗಿ ಇಲ್ಲಿಗೆ ಶೀಘ್ರದಲ್ಲಿಯೇ ಒಂದು ಬಲಿಷ್ಠವಾದ ಟಗರನ್ನು ಕೊಡುತ್ತೇನೆ ಎಂದು ಹೇಳಿದ್ದರು.ಅದಾಗಿ ೮ ತಿಂಗಳಾದರೂ ಯಾವ ಟಗರೂ ಬಂದಿಲ್ಲ.ಹಾಗಾಗಿ ಜಿಲ್ಲಾಧ್ಯಕ್ಷರು ಶೀಘ್ರವೇ ಒಂದು ನಿಯೋಗವನ್ನು ರಾಜ್ಯ ವರಿಷ್ಟರ ಬಳಿಗೆ ಕರೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರೆಡ್ಡಿ ಮಾತನಾಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿ ಆಣತಿಯಂತೆ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ವಿವಿಧ ವಿಭಾಗಗಳಿಗೆ ಮುಖಂಡರ ನೇಮಕ ಮಾಡಲು ಮುಂದಾಗಿದ್ದಾರೆ ಎಂದರು.
ಇದೇ ವೇಳೆ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಕನಕದಾಸರನ್ನು ಸ್ಮರಿಸಲಾಯಿತು.
ಈ ವೇಳೆ ಜಿಲ್ಲಾ ಕಾರ್ಯದಕ್ಷ ಕೆ ಆರ್ ರೆಡ್ಡಿ,ತಾಲ್ಲೂಕು ಅಧ್ಯಕ್ಷ ಮುನಿರಾಜು, ಶಾಂತ ಮೂರ್ತಿ, ನಗರಸಭೆ ಮಾಜಿ ಸದಸ್ಯ ಬಂಡ್ಲು ಸೀನ, ಕಿಸಾನ್ ಕೃಷ್ಣಪ್ಪ,ಲಕ್ಷ್ಮಿ ನರಸಿಂಹಪ್ಪ, ಸ್ಟುಡಿಯೋ ಮಂಜು, ಅಖಿಲ್ ರೆಡ್ಡಿ,ಆಂಜಿನಪ್ಪ,ಪ್ರಕಾಶ್,ಮಹಿಳಾ ಮುಖಂಡರಾದ ಅರುಣಾ,ಯುವ ಘಟಕದ ಸದಸ್ಯರು ಹಾಗೂ ಸ್ಥಳೀಯ ನಾಯಕರು ಭಾಗವಹಿಸಿದ್ದರು.