ಚಿಕ್ಕಬಳ್ಳಾಪುರ: ಗೌರಿ-ಗಣೇಶ (Ganeshotsava) ಹಬ್ಬದ ಸಂಭ್ರಮದ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapura) ಗೌರಿಬಿದನೂರು ಬೈಪಾಸ್‌ನಲ್ಲಿ ನಡೆದ ಗಣೇಶ ಲಡ್ಡು ಹರಾಜು ಭಾರೀ ಕುತೂಹಲಕ್ಕೆ ಕಾರಣವಾಯಿತು. ತೊಂಡೆಬಾವಿ ಗ್ರಾಮದ ಕೃಷ್ಣಾರೆಡ್ಡಿ ಅವರ ಪಾಲಾದ ಬೈಪಾಸ್ ಗಣೇಶ ಲಡ್ಡು ಬರೋಬ್ಬರಿ 4 ಲಕ್ಷ 10 ಸಾವಿರ ರೂಪಾಯಿಗಳಿಗೆ ಮಾರಾಟವಾಯಿತು. ಶ್ರೀವಿದ್ಯಾಗಣಪತಿ ಯುವಕರ ಬಳಗ ವತಿಯಿಂದ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯ ಭಕ್ತರಿಂದ ದೊಡ್ಡ ಬೇಡಿಕೆ ಇತ್ತು.
ಗೌರಿಬಿದನೂರು ಗಣೇಶೋತ್ಸವದ ಸಂದರ್ಭದಲ್ಲಿ ಈ ಲಡ್ಡು ಹರಾಜು ಪ್ರಕ್ರಿಯೆ ಪ್ರತೀ ವರ್ಷವೂ ನಡೆಯುತ್ತೆ. ಕಳೆದ ಬಾರಿ ಲಡ್ಡು ಹರಾಜು ಪ್ರಕ್ರಿಯೆಯಲ್ಲಿ 1 ಲಕ್ಷಕ್ಕೆ ಲಡ್ಡು ಮಾರಾಟವಾಗಿತ್ತು. ಇದೀಗ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಈ ಬಾರಿ ಲಡ್ಡು ಹರಾಜು ಪ್ರಕ್ರಿಯೆ ನಡೆದಿದೆ. ಈ ವರ್ಷ 20 ಕೆಜಿ ತೂಕದ ಈ ಲಡ್ಡು ಹರಾಜು, ಕಳೆದ ವರ್ಷದ 1 ಲಕ್ಷ ರೂಪಾಯಿಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಯಿತು. ಬೈಪಾಸ್ ಗಣೇಶೋತ್ಸವ 22ನೇ ವರ್ಷಕ್ಕೆ ಕಾಲಿಟ್ಟಿದ್ದು, 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆಯೊಂದಿಗೆ ಹಬ್ಬ ಸಂಭ್ರಮ ಜೋರಾಗಿತ್ತು. ಭಕ್ತರು ಈ ಲಡ್ಡುವನ್ನು ಗಣಪತಿಯ ನೈವೇಧ್ಯವಾಗಿ ಸಿದ್ಧಪಡಿಸಿ, ಹರಾಜು ಮೂಲಕ ದೇವಸ್ಥಾನ ಅಭಿವೃದ್ಧಿಗೆ ಬಳಸುವ ಉದ್ದೇಶವನ್ನು ಹೊಂದಿದ್ದಾರೆ.
ಗೌರಿಬಿದನೂರು ಬೈಪಾಸ್ ಗಣೇಶನ ಗಂಗಾವೀಲೀನ ಕಾರ್ಯ ನಿನ್ನೆ ವಿಜೃಂಭಣೆಯಿಂದ ನೇರವೇರಿತು. ಮದ್ದೂರು ಗಣೇಶ ವಿಸರ್ಜನೆಯಲ್ಲಿ ನಡೆದ ಗಲಭೆಯ ಪರಿಣಾಮದಿಂದಾಗಿ, ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿತ್ತು. ಗೌರಿಬಿದನೂರು ನಗರ ಸುತ್ತಮುತ್ತಲಿನ ಬಾರ್‌ಗಳನ್ನು ಬಂದ್ ಮಾಡಲಾಗಿತ್ತು.