ಚಿಂತಾಮಣಿ: ಶೈಕ್ಷಣಿಕ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳನ್ನು ಉತ್ತೇಜಿಸುವುದರ ಜೊತೆಗೆ ಐತಿಹಾಸಿಕ ಹಿನ್ನೆಲೆಯುಳ್ಳ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಚಿಂತಾಮಣಿಯ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ಒಟ್ಟಾರೆಯಾಗಿ ₹76 ಕೋಟಿಗೂ ಅಧಿಕ ಅನುದಾನ ಒದಗಿಸ ಲಾಗಿದೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್(MLA Dr M C Sudhakar) ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿವಿಧ ಘಟಕಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದನ್ನೂ ಓದಿ: Chinthamani News: ಧರ್ಮ, ಜಾತಿ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳ್ಳುವುದು ಮಾದರಿ: ವೇಣುಗೋಪಾಲ್
1949-50ರ ಅವಧಿಯಲ್ಲಿ ಅಂದಿನ ಮೈಸೂರು ಸಂಸ್ಥಾನದಲ್ಲಿ ಮಂಡ್ಯದ ನಂತರ ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಯಾಗಿದ್ದು ಐತಿಹಾಸಿಕ ಮೈಲಿಗಲ್ಲಾಗಿದೆ. ಅಂದು ನಗರಸಭೆ ವತಿಯಿಂದ 9 ಎಕರೆ ಜಮೀನು ಹಾಗೂ ₹50 ಸಾವಿರ ನೀಡುವ ಮೂಲಕ ಕಾಲೇಜು ಸ್ಥಾಪನೆಗೆ ನೆರವಾಗಲಾಗಿತ್ತು. ದಿವಂಗತ ಎಂ.ಸಿ. ಆಂಜನೇಯ ರೆಡ್ಡಿ ಅವರ ದೂರದೃಷ್ಟಿಯ ಫಲವಾಗಿ ಈ ಶಿಕ್ಷಣ ಸಂಸ್ಥೆ ರೂಪುಗೊಂಡಿದೆ ಎಂದರು.
76 ವರ್ಷಗಳನ್ನು ಪೂರೈಸಿ 77ನೇ ವರ್ಷಕ್ಕೆ ಕಾಲಿಟ್ಟಿರುವ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ₹76 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಈ ಮೂಲಕ ಚಿಂತಾಮಣಿಯ ಪಾಲಿಟೆಕ್ನಿಕ್ ಕಾಲೇಜನ್ನು ರಾಜ್ಯದಲ್ಲೇ ಮಾದರಿ ಸಂಸ್ಥೆಯನ್ನಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಮಳೆಯ ಅಡಚಣೆ ಎದುರಾದರೂ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ಸಭೆ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಗರಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸನ್ ಎನ್.ವಿ., ಪ್ರಾಂಶುಪಾಲ ರಾದ ಕುಸುಮ ಮಂಗಳ ಡಿ.ವಿ., ಡಾ. ಅಡಲಾಲ ವೆಂಕಟೇಸುಲು ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.