ಚಿಕ್ಕಬಳ್ಳಾಪುರ: ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 24 ಎಕರೆ ಜಮೀನಿಗೆ ನಗರಸಭೆ ಆಸ್ತಿ ಸಂಖ್ಯೆ 820/755 ಎಂದು ನಮೂದಿಸಿ ಇ-ಖಾತೆ ಮಾಡಿರುವ ಪ್ರಕರಣ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸಮಗ್ರ ತನಿಖೆ ನಡೆಸಲು ತ್ರಿಸದಸ್ಯರ ತನಿಖಾ ತಂಡ ರಚಿಸಲಾಗಿದೆ.
ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಆಯುಕ್ತರನ್ನು ಒಳಗೊಂಡ ತಂಡವನ್ನು ರಚಿಸಿರುವ ಜಿಲ್ಲಾಧಿಕಾರಿ ಜಿ.ಪ್ರಭು, ಪ್ರಕರಣದ ಕುರಿತು ಕೂಲಂಕಷವಾಗಿ ಪರಿಶೀಲಿಸಿ 24 ಗಂಟೆ ಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪ್ರಸ್ತಾವಿತ ಜಮೀನಿನ ಪಹಣಿ ಪರಿಶೀಲಿಸಿದಾಗ 1983–84ರಿಂದ 2003ರವರೆಗೆ ‘ರೈಲ್ವೆ ಡಿಪೋ’ ಎಂದು ನಮೂದಾಗಿರುವುದು ಕಂಡುಬಂದಿದೆ. ಪ್ರಸ್ತುತ ಪಹಣಿಯಲ್ಲಿ ಜಮೀನು ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ನಗರಸಭೆ ವ್ಯಾಪ್ತಿಗೆ ಒಳಪಡದ ಜಮೀನಿಗೆ ನಗರಸಭೆಯ ವಾರ್ಡ್ ಸಂಖ್ಯೆ ಸೃಷ್ಟಿಸಿ ಇ-ಖಾತೆ ಮಾಡಿರುವುದು ಕರ್ತವ್ಯಲೋಪ ಹಾಗೂ ಅಧಿಕಾರ ದುರುಪಯೋಗವಾಗಿರುವ ಸಾಧ್ಯತೆ ಕುರಿತು ತನಿಖೆ ನಡೆಯಲಿದೆ.
ದಾಖಲೆಗಳ ಸೃಷ್ಟಿ, ಬದಲಾವಣೆ, ಅಧಿಕಾರ ವ್ಯಾಪ್ತಿ ಉಲ್ಲಂಘನೆ ಸೇರಿದಂತೆ ಅಕ್ರಮ ನಡೆದಿರುವುದು ತನಿಖೆಯಲ್ಲಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಅಥವಾ ಇತರರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸ್ಪಷ್ಟ ಪಡಿಸಿದ್ದಾರೆ.