ಚಿಕ್ಕಬಳ್ಳಾಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಕಾನ್ವೆಂಟ್ ಶಿಕ್ಷಣ ಪಡೆದಿರಬಹುದು. ಆದರೆ ರಾಜಕಾರಣಿಗಳಿಗೆ ಜನರ ಕಡೆಗಿನ ಬದ್ಧತೆ, ಕಾಳಜಿ ಮುಖ್ಯವಾಗುತ್ತದೆಯೇ ಹೊರತು, ಔಪಚಾರಿಕ ಶಿಕ್ಷಣ ಅಲ್ಲ ಎಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಧಿಕಾರದ ದರ್ಪ ತಲೆಗೆ ಹೋಗಿದೆ. ಅವರು ಆಡುವ ಭಾಷೆ ಸರಿ ಇಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಹೀಗೆ ಮಾತಾಡಬಾರದು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರ ಮಗ ಆಗಿರುವುದರಿಂದ ಪ್ರಿಯಾಂಕ್ ಅವರಿಗೆ ದೇಶದ ಅತ್ಯುನ್ನತ ಕಾನ್ವೆಂಟ್ಗಳಲ್ಲಿ ಓದುವ ಅವಕಾಶ ಇತ್ತು. ನಾನು ಶಿಕ್ಷಕನ ಮಗನಾಗಿದ್ದು, ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿದ್ದೆ. ಹಾಗೆಂದಾಕ್ಷಣ ಪ್ರಿಯಾಂಕ್ ಅವರಿಗಿಂತ ನಾನು ದಡ್ಡನಲ್ಲ. ಅವರಷ್ಟೇ ಇಂಗ್ಲಿಷ್ ಬರದಿದ್ದರೂ ನನಗೆ ಜ್ಞಾನ ಇದೆ. ಕುಮಾರಸ್ವಾಮಿ(Kumaraswamy) ಅವರು ಮುಖ್ಯಮಂತ್ರಿಯಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ ಅನುಕೂಲ ಮಾಡಿಕೊಟ್ಟಿದ್ದರು.
ರಾಜಕಾರಣಿಗಳಿಗೆ ಕೇವಲ ಔಪಚಾರಿಕ ಶಿಕ್ಷಣ ಮುಖ್ಯವಾಗುವುದಿಲ್ಲ. ತಮಿಳುನಾಡಿನ ಮಾಜಿ ಸಿಎಂ ಕೆ.ಕಾಮರಾಜ್(K Kamraj) ಇಡೀ ದೇಶದಲ್ಲಿ ಮೊದಲ ಬಾರಿಗೆ ಅಕ್ಕಿಯನ್ನು ಜನರಿಗೆ ನೀಡಿದ್ದರು. ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಇರಲಿಲ್ಲ. ಬಡವರ ಕಷ್ಟ ಆಲಿಸಲು ಕಾನ್ವೆಂಟ್ನಲ್ಲಿ ಓದಬೇಕಿಲ್ಲ, ಮುಂಬೈನಲ್ಲಿ ವಾಸಿಸಬೇಕಿಲ್ಲ. ಜನರಿಗೆ ಸ್ಪಂದಿಸುವ ಗುಣ ಇದ್ದರೆ ಸಾಕಾಗುತ್ತದೆ. ಪ್ರಿಯಾಂಕ್ ಅವರಿಗೆ ಇನ್ನೂ ವಯಸ್ಸಿದ್ದು, ಇನ್ನಷ್ಟು ಅನುಭವ ಬೇಕಾಗಿದೆ. ಅವರು ತಮ್ಮ ಮಾತಿನ ಶೈಲಿ ಬದಲಿಸಿಕೊಳ್ಳಬೇಕು. ಅವರ ಪಕ್ಷದವರೇ ಅವರನ್ನು ಹುರಿದುಂಬಿಸಿ ಮತ್ತೆ ಕಾಲೆಳೆಯುತ್ತಾರೆ. ಇದನ್ನು ನಾನು ಕಾಂಗ್ರೆಸ್ನಲ್ಲಿದ್ದು ಅನುಭವಿಸಿದ್ದೇನೆ. ಅಂತಹ ಖೆಡ್ಡಾಗೆ ಅವರು ಬೀಳುವುದು ಬೇಡ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದರು. ಈಗ ಅವರು ಎನ್ಡಿಎ(NDA) ಭಾಗವಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ವರಿಷ್ಠರು ತೀರ್ಮಾನಿಸುತ್ತಾರೆ. ನಾನು ಸಂಸದನಾಗಿ ಅದರ ಬಗ್ಗೆ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಹಾಗೆಯೇ ಕುಮಾರಸ್ವಾಮಿ ಅವರ ಭಾವನೆ ಕೂಡ ತಪ್ಪು ಎನ್ನುವುದಿಲ್ಲ. ಮಹಾರಾಷ್ಟ್ರದಲ್ಲಿ ಶಿಂಧೆ ಸಿಎಂ ಆಗಿದ್ದರು, ಈಗ ದೇವೇಂದ್ರ ಫಡಣವೀಸ್(Devendra Fadnavis) ಆಗಿದ್ದಾರೆ. ಆಯಾ ಕಾಲದಲ್ಲಿ ವರಿಷ್ಠರು ಉತ್ತಮ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಎಷ್ಟು ಸ್ಥಾನಗಳನ್ನು ಪಡೆಯಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದರು.
ಈಗ ನಾನು ಸಂಸದನಾಗಿ ಕೆಲಸ ಮಾಡುತ್ತಿದ್ದೇನೆ. ಮೊದಲಿಗೆ ರಾಜ್ಯ ರಾಜಕಾರಣದಲ್ಲಿದ್ದೆ. 2028 ರಲ್ಲಿ ರಾಜ್ಯವನ್ನು ಗತವೈಭವಕ್ಕೆ ತೆಗೆದುಕೊಂಡು ಹೋಗಬೇಕಿದೆ. ಆದರೆ ಈಗ ನಮ್ಮ ರಾಜ್ಯ ನಗೆಪಾಟಲಿಗೆ ಈಡಾಗಿದೆ. ಬೇರೆ ರಾಜ್ಯಗಳಲ್ಲಿ ಆರ್ಥಿಕಾಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಹೂಡಿಕೆಗಳು ಹೆಚ್ಚು ಬರುತ್ತಿದೆ. ಆದರೆ ಇಲ್ಲಿ ಸ್ಟಿಂಗ್ ಆಪರೇಶನ್(Sting Operation) ಬಗ್ಗೆ ಚರ್ಚೆಯಾಗುತ್ತಿದೆ. ದೆಹಲಿಗೆ ಹೋದರೆ ಏನದು, ಅದರಲ್ಲಿ ಯಾರಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ಆದ್ದರಿಂದ ಎನ್ಡಿಎ ಮೈತ್ರಿ(NDA Alliance) ಆಡಳಿತ ಅಧಿಕಾರಕ್ಕೆ ಬರಬೇಕಿದೆ. ಯಾರು ರಾಜ್ಯ ರಾಜಕಾರಣಕ್ಕೆ ಬರಬೇಕೆಂದು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ನಾನು ಸಚಿವನಾಗಿದ್ದಾಗ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಿದ್ದೆ. ಈ ಜಿಲ್ಲೆಗಳಲ್ಲಿ ಮೂರು ವರ್ಷಗಳಲ್ಲಿ ಬಿಜೆಪಿಯ ಮತ ಪಾಲನ್ನು 8% ಹೆಚ್ಚಿಸಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ 18% ಜಾಸ್ತಿಯಾಗಿದೆ. ಆದ್ದರಿಂದ ಈ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.