ಚಿಂತಾಮಣಿ: ನಗರದ ಎಪಿಎಂಸಿ ಮಾರುಕಟ್ಟೆಯ 1ನೇ ಗೇಟ್ ನಲ್ಲಿ ಟೊಮೆಟೊ ಮಾರಾಟಕ್ಕಾಗಿ ಬರುವ ಲಾರಿಗಳಿಂದ ರಸ್ತೆ ಬಂದ್ ಆಗುತ್ತಿರುವುದರಿಂದ ಅಕ್ಕಿ,ರಾಗಿ ಮತ್ತಿತರ ಧವಸಧಾನ್ಯಗಳ ಸಾಗಾಟಕ್ಕೆ ತೊಂದರೆಯಾಗುತ್ತಿದೆ ಎಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ಟೊಮೆಟೊ ಸೀಜನ್ ಆರಂಭವಾಗಿದ್ದು ಪ್ರತಿನಿತ್ಯ ನೂರಾರು ಲಾರಿಗಳು,ಟ್ರಾಕ್ಟರ್ ಗಳು ಎಪಿಎಂಸಿ ಯ ಎಲ್ಲಾ ಗೇಟ್ ಗಳಿಂದಲೂ ಆಗಮಿಸುತ್ತಿವೆ. ಟೊಮೆಟೊ ತರುವ ಲಾರಿ ಮತ್ತು ಟ್ರಾಕ್ಟರ್'ಗಳು ರಸ್ತೆಯಲ್ಲೇ ನಿಲ್ಲುತ್ತವೆ.ಇದರಿಂದ ರಸ್ತೆ ಬಂದಾಗುತ್ತದೆ. ಅಕ್ಕಿ, ರಾಗಿ ಮುಂತಾದ ಧವಸ ಧಾನ್ಯ ಗಳನ್ನು ತರುವ ಲಾರಿಗಳು ರಸ್ತೆಯಲ್ಲೇ ನಿಲ್ಲಬೇಕಾಗಿದೆ.
ಅದನ್ನು ಪ್ರಶ್ನಿಸಿದ ಹಮಾಲಿಗಳಿಗೆ ಯುಪಿ ಪ್ರದೇಶ ಟೊಮೆಟೊ ಲಾರಿ ವಾಹನದ ಚಾಲಕ ಹಮಾಲಿ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ.ಹಾಗೂ ಧವಸಧಾನ್ಯಗಳ ವ್ಯಾಪಾರಿಗಳಿಗೆ ಹಾಗೂ ಹಮಾಲಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನೂ ಓದಿ: Mango growers Protest: ಮಾವಿಗೆ ಬೆಂಬಲ ಬೆಲೆ ಆಗ್ರಹಿಸಿ ಕೋಲಾರ ಬಂದ್; ರಸ್ತೆಗೆ ಮಾವು ಸುರಿದು ರೈತರ ಪ್ರತಿಭಟನೆ
ಗೇಟ್ ನಂ 1 ಮತ್ತು 2 ರಲ್ಲಿ ಅಕ್ಕಿ ಮತ್ತಿತರ ಧವಸಧಾನ್ಯಗಳು ವ್ಯಾಪಾರಿಗಳೇ ಹೆಚ್ಚಾಗಿದ್ದಾರೆ.ಅಕ್ಕಿ ತರುವ ಲಾರಿಗಳು 2-3 ದಿನ ರಸ್ತೆಯಲ್ಲೇ ನಿಲ್ಲಬೇಕಾಗಿರುವುದು ಸಮಸ್ಯೆ ಆಗಿದೆ. ರಸ್ತೆಯಲ್ಲೇ ವಾಹನಗಳು ನಿಂತಿರುತ್ತವೆ,ಬಾಕ್ಸ್ ಗಳನ್ನು ರಸ್ತೆಯಲ್ಲೇ ಇಟ್ಟುಕೊಂಡಿರುತ್ತಾರೆ.ಕೇಳಿದರೆ ಗಲಾಟೆ ಮಾಡಲು ಬರುತ್ತಾರೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎಂ ಜಿ ರಮೇಶಬಾಬು ದೂರಿದರು.
ಟೊಮೆಟೊ ಮಾರಾಟಕ್ಕೆ ನಮ್ಮ ಅಭ್ಯಂತರವಿಲ್ಲ.ಟೊಮೆಟೊ ತಂದ ವಾಹನಗಳು ಖಾಲಿ ಮಾಡಿ ಹೊರಗಡೆ ಹೋಗುವುದಿಲ್ಲ.ಟೊಮೆಟೊ ಅನ್ ಲೋಡ್ ಮಾಡಿ ಹೊರಗಡೆ ತೆಗೆದುಕೊಂಡು ಹೋಗಬೇಕು.ಕ್ರೇಟ್ ಗಳು ಖಾಲಿಯಾದಾಗ ಬಂದು ತೆಗೆದುಕೊಂಡು ಹೋದರೆ ಯಾರಿಗೂ ತೊಂದರೆ ಆಗುವುದಿಲ್ಲ, ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಬೇರೆ ವಾಹನಗಳಿಗೆ ತೊಂದರೆ ಕೊಡಬಾರದು ಎಂ ವಿ ಎಸ್ ಟ್ರೇಡರ್ಸ್ ನ ಶಂಕರ್ ಹೇಳಿದರು.
ಎಪಿಎಂಸಿ ಕಾರ್ಯದರ್ಶಿ ಸುನಿತಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.ಈ ಬಾರಿ ಟೊಮೆಟೊ ಪೂರೈಕೆ ಹೆಚ್ಚಾಗಿದೆ.ಸ್ಥಳದ ಅಭಾವದಿಂದ ಎಲ್ಲ ಕಡೆಯಿಂದ ಲೂ ವಾಹನಗಳು ಬರುತ್ತಿವೆ. ತೊಂದರೆ ಆಗುತ್ತಿರುವುದು ನಿಜ, ಸಮಸ್ಯೆ ಬಗೆಹರಿಸಲು ಈಗಾಗಲೇ ಪೊಲೀಸ್ ಅಧಿಕಾರಿಗಳು ಕಳೆದ ಭಾನುವಾರವೇ ಈ ಬಗ್ಗೆ ಸಭೆ ನಡೆಸಿದ್ದಾರೆ. ಪಾರ್ಕಿಂಗ್ ಸ್ಥಳವನ್ನು ಗುರುತಿಸಿ ಹೊರಗಡೆ ನಿಲ್ಲಿಸಿಕೊಳ್ಳಲು ಹೇಳಿದ್ದಾರೆ ಎಂದರು.
ಟೊಮೆಟೊ ಪೂರೈಕೆ ಹೆಚ್ಚಾಗಿದ್ದು ದರ ಕಡಿಮೆಯಾಗಿದೆ. ಪ್ರತಿನಿತ್ಯ 50-60 ಸಾವಿರ ಬಾಕ್ಸ್ ಗಳು ಉಳಿಯುತ್ತಿವೆ.ಜತೆಗೆ ಎರಡನೇ ದರ್ಜೆಯ(ಗೋಲಿಗಳು)ಮರಾಟವಾಗುತ್ತಿಲ್ಲ. ಮಾವಿನ ಸೀಜನ್ ಆಗಿರುವುದರಿಂದ ಪ್ಯಾಕ್ಟರಿಗಳವರು ಟೊಮೆಟೊ ಖರೀದಿಸುತ್ತಿಲ್ಲ.ಹೀಗಾಗಿ ಪ್ರತಿನಿತ್ಯ ಶೇ.30-40 ರಷ್ಟು ಉಳಿಯುತ್ತಿರುವುದರಿಂದ ತೊಂದರೆ ಆಗುತ್ತಿದೆ. ಸ್ವಚ್ದಚಗೊಳಿಸಲು ಅವಕಾಶ ಸಿಗುತ್ತಿಲ್ಲ, ಆದರೂ ರಾತ್ರಿ ಸಮಯದಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಕಾರ್ಯದರ್ಶಿ ತಿಳಿಸಿದರು.