ಚಿಕ್ಕಬಳ್ಳಾಪುರ : ಭೂ ಮಾಪಕರ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲೆಯಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪರೀಕ್ಷೆಗಳು ಸುಗಮವಾಗಿ ನಡೆದವು.
ಚಿಕ್ಕಬಳ್ಳಾಪುರ ನಗರದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಪತ್ರಿಕೆ–1 ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಪತ್ರಿಕೆ–2ರ ಪರೀಕ್ಷೆ ಗಳನ್ನು ನಡೆಸಲಾಯಿತು. ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 1731 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದರು.
ಪರೀಕ್ಷೆಗಳು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಹಾಗೂ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಂಡಿತ್ತು.
ಜಿಲ್ಲಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಂಡರಿನಾಥ್ ಅವರು ಚಿಕ್ಕಬಳ್ಳಾಪುರ ನಗರದ ಎಸ್‌ಜೆಸಿಐಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಭ್ಯರ್ಥಿಗಳಿಗೆ ಕಲ್ಪಿಸಲಾಗಿದ್ದ ಮೂಲಸೌಕರ್ಯ, ಭದ್ರತಾ ವ್ಯವಸ್ಥೆ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯ ವಿವಿಧ ಅಂಶಗಳನ್ನು ಪರಿಶೀಲಿಸಿದರು.
ಜಿಲ್ಲೆಯಾದ್ಯಂತ ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆದಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.