4ನೇ ಐಇಇಇ ಜ್ಞಾನಾಧಾರಿತ ಇಂಜನಿಯರಿಂಗ್ ಕುರಿತ 2 ದಿನಗಳ ಅಂತರಾಷ್ಟ್ರೀಯ ಸಮ್ಮೇಳನ
ಚಿಕ್ಕಬಳ್ಳಾಪುರ : ಏ.24,25ರಂದು ಎರಡು ದಿನಗಳ ಕಾಲ ಎಸ್‌ಜೆಸಿಐಟಿ ಕಾಲೇಜು ಆವರಣದಲ್ಲಿ ಜ್ಞಾನಾಧಾರಿತ ಇಂಜನಿಯರಿಂಗ್ ಮತ್ತು ಸಂವಹನ ವ್ಯವಸ್ಥೆ ಆಧಾರಿತ 4ನೇ ಅಂತರಾಷ್ಟ್ರೀಯ ಶೈಕ್ಷಣಿಕ ಮಹಾ ಸಮ್ಮೇಳನ ನಡೆಯಲಿದೆ ಎಂದು ಪ್ರಾಂಶುಪಾಲ ಡಾ.ಜಿ.ಟಿ.ರಾಜು ತಿಳಿಸಿದರು.
ನಗರ ಹೊರವಲಯ ಎಸ್‌ಜೆಸಿಐಟಿ ಆವರಣದಲ್ಲಿನ ಆಡಳಿತ ಭವನದಲ್ಲಿನ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ನಮ್ಮ ಕಾಲೇಜಿನ ಕ್ಯಾಂಪಸ್ ಆದಿಚುಂಚನಗಿರಿ ಸಭಾಂಗಣದಲ್ಲಿ 4ನೇ ವರ್ಷದ ಐಇಇಇ ನಾಲೆಡ್ಜ್ ಇಂಜನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ ಎಂ ವಿಷಯದ ಮೇಲೆ ಅಂತರಾಷ್ಟ್ರೀಯ ಸಮ್ಮೇಳನವನ್ನು ಏ.24 ಮತ್ತು 25ರಂದು ಐಇಇಇ ಸ್ಟುಡೆಂಟ್ ಚಾಪ್ಟರ್ ಎಸ್‌ಜೆಸಿಐಟಿ ಮತ್ತು ಐಇಇಇ ಕಮ್ಯುನಿಕೇಷನ್ ಸೊಸೈಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ದೇಶ ವಿದೇಶಗಳ 13ಕ್ಕೂ ಹೆಚ್ಚು ದೇಶಗಳ 365ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದರು.
4ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡನೆಯಾಗಲು 1901 ಮಹಾಪ್ರಬಂಧಗಳು ಸಲ್ಲಿಕೆ ಯಾಗಿದ್ದು ಈ ಪೈಕಿ 3 ಹಂತದ ಪರಿಶೀಲನೆಯಲ್ಲಿ ಪಾಸಾದ ಅತ್ಯುತ್ತಮವೆನಿಸಿದ ಕೇವಲ 365 ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಈ ಸಮ್ಮೇಳನದಲ್ಲಿ ಆಯ್ಕೆಯಾದ ಪ್ರಬಂಧಗಳನ್ನು ಈಇಇಇ ಜರ್ನಲ್‌ನಲ್ಲಿ ಪ್ರಕಟಿಸಲಾಗುವುದು.
ಸಮ್ಮೇಳನದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ, ಯಂತ್ರಕಲಿಕೆ,ಡೇಟಾ ಮೈನಿಂಗ್, ಜ್ಞಾನ ಅನ್ವೇ ಷಣೆ, ಇಂಟರ್‌ನೆಟ್ ಆಫ್ ಥಿಂಗ್ಸ್, ವೈರ್‌ಲೆಸ್ ಕಮ್ಯುನಿಕೇಷನ್ ನೆಟ್‌ವರ್ಕಿಂಗ್, ಕ್ಲೌಡ್ ಕಂಪ್ಯೂ ಟಿಂಗ್ ಸೇರಿ ಇನ್ನು ಮಹತ್ತರ ವಿಷಯಗಳ ಬಗ್ಗೆ ಸಂಶೋಧನಾ ಜ್ಞಾನ ವಿನಿಮಯ ನಡೆಯಲಿದೆ ಎಂದರು.
ಏ.24ರ ಬೆಳಿಗ್ಗೆ 9.30ಕ್ಕೆ ಎಸ್‌ಜೆಸಿಐಟಿ ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವ 4ನೇ ಅಂತರಾಷ್ಟ್ರೀಯ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಚುಂಚಶ್ರೀಗಳಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಐಐಎಸ್ಸಿ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಯದತಿ ನರಹರಿ, ಬೆಂಗಳೂರಿನ ಟಿಸಿಎಸ್ ಹಿರಿಯ ವಿಜ್ಞಾನಿ ಡಾ.ಪ್ರಶಾಂತ್ ಮಿಶ್ರಾ, ವಾಷಿಂಗ್‌ಟನ್ ಮೈಕ್ರೋಸಾಪ್ಟ್ ಟ್ರಾನ್ಸ್ಲೇಟರ್ ಡಾ.ತಮ್ಮೇಗೌಡ, ವಿಟಿಯು ಎಕ್ಸಿಕ್ಯೂಟೀವ್ ಕೌನ್ಸಿಲ್ ಮೆಂಬರ್ ಮಂಜುನಾಥ್ ಬಚ್ಚೇಗೌಡ ಭಾಗಿಯಾಗಲಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಉದ್ಯಮ ವೃತ್ತಿಪರರು, ಪ್ರಾಧ್ಯಾಪಕರು, ಇತರೆ ಗಣ್ಯರು ಭಾಗಿಯಾಗಲಿದ್ದಾರೆ. ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯುಳ್ಳವರು ಭಾಗವಹಿಸುವ ಮೂಲಕ ಇದರ ಲಾಭ ಪಡೆಯಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಸಂಚಾಲಕ ಡಾ.ರಾಜಶೇಖರ್ ಸೇರಿದಂತೆ ಇತರೆ ಪ್ರಾಧ್ಯಾಪಕರು ಇದ್ದರು.