ಚಿಕ್ಕಬಳ್ಳಾಪುರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಡವಟ್ಟಿನಿಂದ ಅಧಿಕೃತ ಕಲ್ಲು ಗಣಿ ಗುತ್ತಿಗೆದಾರನೊಬ್ಬ ಸಂಕಷ್ಟಕ್ಕೆ ಸಿಲುಕಿರುವ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇಲಾಖೆ ಮಂಜೂರು ಮಾಡಿರುವ ಜಾಗವೇ ಬೇರೆ, ಗುತ್ತಿಗೆದಾರ ಗಣಿಗಾರಿಕೆ ನಡೆಸುತ್ತಿರುವ ಜಾಗವೇ ಬೇರೆ ಎಂಬುದು ಅಧಿಕಾರಿಗಳ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದ್ದು, ಇದೀಗ ಗುತ್ತಿಗೆದಾರ ಹಾಗೂ ಕುಲಕಸುಬು ನಂಬಿಕೊಂಡಿರುವ ಜನರ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ವಾಗಿದೆ.
ಕವರನಹಳ್ಳಿ ಸರ್ವೆ ನಂಬರ್-1ರಲ್ಲಿ ಒಟ್ಟು 16 ಎಕರೆ ಬಂಡೆ ಪ್ರದೇಶವಿದ್ದು, ಈ ಪೈಕಿ ಒಂದು ಎಕರೆ ಪ್ರದೇಶವನ್ನು ಶ್ರೀನಿವಾಸಪ್ಪ ಎಂಬುವರಿಗೆ 10 ವರ್ಷಗಳ ಅವಧಿಗೆ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಇಲಾಖೆ ಲೈಸೆನ್ಸ್ ನೀಡಿದೆ.
ಇದರಲ್ಲಿ ಕಾನೂನು ರೀತ್ಯಾ ರಾಯಲ್ಟಿ ಸೇರಿದಂತೆ ಎಲ್ಲ ಶುಲ್ಕಗಳನ್ನು ಪಾವತಿಸಿ ಗಣಿಗಾರಿಕೆ ನಡೆಸುತ್ತಿದ್ದೇನೆ, ಆದರೂ ನನಗೆ ಕೆಲವರು ತೊಂದರೆ ಕೊಡುತ್ತಿದ್ದಾರೆ ಎಂದು ಶ್ರೀನಿವಾಸಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ
ವಂಶಪಾರಂಪರ್ಯವಾಗಿ ಬಂಡೆ ಕೆಲಸ ಮಾಡಿಕೊಂಡು ಬಂದಿರುವ ಕೆಲವರು ಹಾಗೂ ಕೆಲ ಬಲಾಢ್ಯರ ಚಿತಾವಣೆಯಿಂದ ತಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದು, ವಾಹನ ತಡೆ, ಕಲ್ಲು ಸಾಗಾಟಕ್ಕೆ ಅಡ್ಡಿ, ಕೂಲಿ ಕಾರ್ಮಿಕರಿಗೆ ಬೆದರಿಕೆ ಸೇರಿದಂತೆ ಹಲವು ರೀತಿಯ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಗಣಿ ಇಲಾಖೆ, ಜಿಲ್ಲಾಡಳಿತ, ಮುಖ್ಯಮಂತ್ರಿ ಹಾಗೂ ಪೊಲೀಸ್ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತರು ಅಳಲು ತೋಡಿ ಕೊಂಡಿದ್ದಾರೆ.
36 ಲಕ್ಷ ದಂಡದಿಂದ ಇಲಾಖೆಯ ಎಡವಟ್ಟು ಬಹಿರಂಗ
ದೂರು ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಗಣಿ ಇಲಾಖೆ ಅಧಿಕಾರಿಗಳು, ನಿಯಮ ಮೀರಿ ಆಳಕ್ಕೆ ಗಣಿಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಿ ಲೈಸೆನ್ಸ್ ದಾರ ಶ್ರೀನಿವಾಸಪ್ಪ ಅವರಿಗೆ 36 ಲಕ್ಷ ದಂಡ ವಿಧಿಸಿದ್ದರು.
ಆದರೆ, ತಾನು ಕೇವಲ ಒಂದು ಎಕರೆ ಪ್ರದೇಶಕ್ಕೆ ಮಾತ್ರ ಲೈಸೆನ್ಸ್ ಪಡೆದಿದ್ದು, ಇಡೀ ಪ್ರದೇಶದಲ್ಲಿ ಒಬ್ಬನೇ ಗಣಿಗಾರಿಕೆ ನಡೆಸುತ್ತಿಲ್ಲ. ಇದು ದೊಡ್ಡ ಮೊತ್ತ. ಯಾರ್ಯಾರು ಕೆಲಸ ಮಾಡುತ್ತಿದ್ದಾರೋ ಅವರಿಗೆಲ್ಲ ಹಾಕಿ. ದಯವಿಟ್ಟು ನನಗೆ ಹದ್ದುಬಸ್ತು ಗುರುತಿಸಿ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಅಧಿಕಾರಿಗಳು ಮರು ಪರಿಶೀಲನೆ ನಡೆಸಿದ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಇಲಾಖೆ ಮಂಜೂರು ಮಾಡಿರುವ ಜಾಗಕ್ಕೂ ಶ್ರೀನಿವಾಸಪ್ಪ ಗಣಿಗಾರಿಕೆ ನಡೆಸುತ್ತಿದ್ದ ಜಾಗಕ್ಕೂ ಯಾವುದೇ ಹೊಂದಾಣಿಕೆ ಇಲ್ಲ ಎಂಬುದು ಪತ್ತೆಯಾಗಿದೆ.
ಬಳಿಕ ಇಲಾಖೆ ತನ್ನ ತಪ್ಪನ್ನು ಸರಿಪಡಿಸುವ ಪ್ರಯತ್ನವಾಗಿ 36 ಲಕ್ಷ ದಂಡವನ್ನು 6 ಲಕ್ಷಕ್ಕೆ ಇಳಿಸಿ, ಹೊಸದಾಗಿ ಗುರುತಿಸಿದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವಂತೆ ಸೂಚಿಸಿದೆ.
ಇಲಾಖೆ ಗುರುತಿಸಿದ ಹೊಸ ಜಾಗದಲ್ಲಿ ಈಗಾಗಲೇ ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅಲ್ಲಿ ಕೆಲಸ ಆರಂಭಿಸಲು ಹೋದಾಗಲೂ ಶ್ರೀನಿವಾಸಪ್ಪ ಅವರಿಗೆ ಅಡ್ಡಿಪಡಿಸಲಾಗುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಅವರು ಮತ್ತೊಮ್ಮೆ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆಯ ಮೊರೆ ಹೋಗಿ ದ್ದಾರೆ.
ಜೂನ್ 30ರಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಇಲಾಖೆ ಗುರುತಿಸಿರುವ ಪ್ರದೇಶದಲ್ಲಿ ನಿರಾತಂಕವಾಗಿ ಗಣಿಗಾರಿಕೆ ನಡೆಸುವಂತೆ ಅಭಯ ನೀಡಿದ್ದಾರೆ.
"ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ"
ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀನಿವಾಸಪ್ಪ, "ನಾನು ಅಧಿಕೃತ ಲೈಸೆನ್ಸ್ ಹೊಂದಿದ್ದರೂ ಕೆಲಸ ಮಾಡಲು ಬಿಡುತ್ತಿಲ್ಲ. ಸರ್ಕಾರಕ್ಕೆ ಪಾವತಿಸಬೇಕಾದ ದಂಡದ ಹಣವನ್ನು ಹೇಗೆ ಕಟ್ಟಲಿ? ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೆ ಕಿರುಕುಳ ನೀಡುತ್ತಿರು ವವರಿಂದ ರಕ್ಷಣೆ ನೀಡಬೇಕು," ಎಂದು ಮನವಿ ಮಾಡಿದರು. ಕೆ.ಎಲ್. ಶ್ರೀನಿವಾಸ್ ಹಾಗೂ ಪಾಪಣ್ಣ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
"ನಾವು ಅಡ್ಡಿಪಡಿಸುತ್ತಿಲ್ಲ"
ತಾಲೂಕು ಭೋವಿ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, "ನಮ್ಮ ಜನಾಂಗ ತಲೆತಲಾಂತರ ಗಳಿಂದ ಬಂಡೆ ಕೆಲಸ ಮಾಡಿಕೊಂಡು ಬಂದಿದೆ. ಸರ್ಕಾರ ನಮಗೆ ಗಣಿಗಾರಿಕೆ ಲೈಸೆನ್ಸ್ ನೀಡುವ ಬಗ್ಗೆ ಕ್ರಮ ಕೈಗೊಂಡಿದ್ದು, ನಾವು ಅರ್ಜಿ ಸಲ್ಲಿಸಿದ್ದೇವೆ. ಶ್ರೀನಿವಾಸಪ್ಪ ಅವರ ಒಂದು ಎಕರೆ ಪ್ರದೇಶಕ್ಕೂ ನಮಗೂ ಸಂಬಂಧವಿಲ್ಲ. ನಾವು ಯಾರೂ ಅವರಿಗೆ ಅಡ್ಡಿಪಡಿಸುತ್ತಿಲ್ಲ," ಎಂದು ಸ್ಪಷ್ಟಪಡಿಸಿದರು.
ಪಾಪಣ್ಣ ಮಾತನಾಡಿ, "ಶ್ರೀನಿವಾಸಪ್ಪ ಅವರೇ ನಮಗೆ ಅರ್ಧ ಎಕರೆ ಜಾಗವನ್ನು ಒಪ್ಪಂದದ ಮೂಲಕ ನೀಡಿದ್ದಾರೆ. ಈಗ ಅದೇ ಭೂಮಿ ನಮ್ಮದು ಎಂದು ಜಗಳ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಸತ್ಯಾಂಶವಿಲ್ಲ, ಇಲಾಖೆ ತೋರಿಸಿರುವ ಹದ್ದುಬಸ್ತು ಮೀರಿ ಇವರು ದುರಾಸೆಯಿಂದ ಅತಿಕ್ರಮ ಪ್ರವೇಶ ಮಾಡಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಜೀವ ಬೆದರಿಕೆ ಹಾಕುತ್ತಾರೆ ಎಂದು ಸುಖ ಸುಮ್ಮನೆ ಆರೋಪ ಮಾಡುತ್ತಾರೆ ಎಂದರು.
ಕೆ.ಎಲ್. ಶ್ರೀನಿವಾಸ್ ಮಾತನಾಡಿ ಲೈಸೆನ್ಸ್ ದಾರಾ ಶ್ರೀನಿವಾಸಪ್ಪ ನಮ್ಮ ದೂರದ ಸಂಬಂಧಿ, "ದುರುದ್ದೇಶದಿಂದ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ನಾವು ಅವರ ಜಾಗದ ಮೇಲೆ ಯಾವುದೇ ಹಕ್ಕು ಚಲಾಯಿಸಲು ಹೋಗಿಲ್ಲ," ಎಂದು ಪ್ರತಿಕ್ರಿಯಿಸಿದ್ದಾರೆ
ಒಟ್ಟಾರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷ್ಯ ಹಾಗೂ ಎಡವಟ್ಟಿನಿಂದ ಅಧಿಕೃತ ಗುತ್ತಿಗೆದಾರ ಮತ್ತು ಕುಲಕಸುಬು ನಂಬಿಕೊಂಡಿರುವ ಜನರ ನಡುವೆ ಸಂಘರ್ಷ ಉಂಟಾಗಿದ್ದು, ಈ ವಿವಾದಕ್ಕೆ ಕಾರಣವಾದ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಎಲ್ಲರನ್ನು ಒಳಗೊಂಡ ಸಭೆ ನಡೆಸಿ ನ್ಯಾಯ ಒದಗಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.