ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gyanesh Kumar: ಜ್ಞಾನೇಶ್ ಕುಮಾರ್ ವಜಾಕ್ಕೆ ಕಾಂಗ್ರೆಸ್ ಆಗ್ರಹ, ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ

ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು.ಈ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ: ಕೇಂದ್ರ ಬಿಜೆಪಿ ಸರ್ಕಾರವು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Chief Election Commissioner Gyanesh Kumar) ಅವರನ್ನು ಬಳಸಿಕೊಂಡು ಮತಗಳ್ಳತನಕ್ಕೆ ಮುಂದಾಗಿದೆ ಎಂದು ಆರೋಪಿಸಿ, ಅವರನ್ನು ಕೂಡಲೇ ವಜಾಗೊಳಿಸಿ ಬಂಧಿಸುವುದಲ್ಲದೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು.ಈ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Election Commission Chalo on Sept.1: ಎಸ್‌ಐಆರ್‌ ಪ್ರಕ್ರಿಯೆ ದೋಷಪೂರಿತ: ಸೆ.1ರಂದು ಎಲೆಕ್ಷನ್ ಕಮಿಷನ್ ಚಲೋ

ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ, ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ವಿಶ್ವಾಸ ಕಳೆದುಕೊಂಡಿದೆ. ಚುನಾವಣೆ ಗೆಲ್ಲುವ ಉದ್ದೇಶದಿಂದ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಸೇರಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಹಲವು ಆಕ್ಷೇಪಗಳು ವ್ಯಕ್ತವಾಗಿವೆ.

ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ(Rahul Gandhi) ಅವರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಜನಬೆಂಬಲ ಹೆಚ್ಚುತ್ತಿದೆ. ಇದರಿಂದ ಆತಂಕಗೊಂಡಿರುವ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು SIR ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರುಗಳನ್ನು ತೆಗೆದುಹಾಕುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಯುವ ಮುಖಂಡ ವಕೀಲ ಸಂದೀಪ್ ಚಕ್ರವರ್ತಿ ಮಾತನಾಡಿ, ಚುನಾವಣಾ ಆಯೋಗದ ಇತರ ಇಬ್ಬರು ಆಯುಕ್ತರು ತಮ್ಮ ಗಮನಕ್ಕೆ ಬಾರದಂತೆ ಆಯೋಗದ ಹೆಸರಿನಲ್ಲಿ ಹೊರಡಿಸಲಾದ ಆದೇಶಗಳ ಕುರಿತು ಹತ್ತು ತಿಂಗಳ ಅವಧಿಯಲ್ಲಿ 14 ಬಾರಿ ಲಿಖಿತ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಆದರೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯ ನಿರ್ಧಾರ ಗಳನ್ನು ಕೈಗೊಂಡು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯೇ? ನಿಮ್ಮ ಕಾರ್ಯವಿಧಾನ ಇದೇನಾ? ಎಂದು ಜ್ಞಾನೇಶ್ ಕುಮಾರ್ ಅವರನ್ನು ಪ್ರಶ್ನಿಸಿದ ಅವರು, ಚುನಾವಣಾ ಆಯೋಗದ ಕಾರ್ಯ ವೈಖರಿ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಹಲವು ಆಕ್ಷೇಪಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವುದರೊಂದಿಗೆ SIR ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಅನುಸೂಯಮ್ಮ(EX MLA Anusuyamma), ಗ್ಯಾರಂಟಿಗಳ ಯೋಜನೆಗಳ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ನಾಯನಹಳ್ಳಿ ನಾರಾಯಣಸ್ವಾಮಿ ಮಾತನಾಡಿದರು. ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರೆಸ್ ಸುರೇಶ್, ಅಡ್ಡಗಲ್ ಶ್ರೀಧರ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ, ಮಾಜಿ ಸದಸ್ಯ ವಕೀಲ ಮುನೇಗೌಡ, ಬಾಬಾ ಜಾನ್, ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್, ಹಮೀಮ್, ಕೋನಪಲ್ಲಿ ಕೂದಂಡ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಯುವ ಕಾಂಗ್ರೆಸ್‌ನ ವಿನಯ್ ಬಂಗಾರಿ, ಶಾಹಿದ್ ಅಬ್ಬಾಸ್, ಯುವ ಮುಖಂಡ ಆಝಮ್, ಮಮತಾ ಮೂರ್ತಿ, ಅಣ್ಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.