ಗೌರಿಬಿದನೂರು: ಅಕ್ಷರಗಳ ಹುಟ್ಟು, ಲಿಪಿಗಳ ಬೆಳವಣಿಗೆ ಹಾಗೂ ಕಾಲಾನುಕ್ರಮದಲ್ಲಿ ಅವು ಗಳಲ್ಲಾದ ಬದಲಾವಣೆಗಳನ್ನು ಒಂದೇ ಸೂರಿನಡಿ ಪರಿಚಯಿಸುವ ಮಹತ್ವಾಕಾಂಕ್ಷೆಯ ‘ಲಿಪಿ ಮನೆ’ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ತಾಲೂಕಿನ ಹೊಸಕೋಟೆ ಸಮೀಪದ ಡಾ. ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರ(Dr. H. Narasimhaiah Science Centre)ದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಿಶಿಷ್ಟ ಕೇಂದ್ರವನ್ನು ರಾಷ್ಟ್ರಮಟ್ಟದ ಅಧ್ಯಯನ ತಾಣವಾಗಿ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಶಾಲಾ ಮಕ್ಕಳಿಂದ ಹಿಡಿದು ಲಿಪಿ ತಜ್ಞರು, ಸಂಶೋಧಕರು ಹಾಗೂ ಇತಿಹಾಸಕ್ತರ ತನಕ ಎಲ್ಲರಿಗೂ ಲಿಪಿಗಳ ಇತಿಹಾಸವನ್ನು ಸುಲಭವಾಗಿ ಅರ್ಥೈಸುವ ಉದ್ದೇಶದಿಂದ ಈ ಕೇಂದ್ರವನ್ನು ರೂಪಿಸ ಲಾಗುತ್ತಿದೆ. ದೃಶ್ಯ ಹಾಗೂ ಬರಹದ ಮೂಲಕ ಲಿಪಿಗಳ ರಚನೆ, ಬೆಳವಣಿಗೆ ಮತ್ತು ಕಾಲಘಟ್ಟಕ್ಕೆ ಅನುಗುಣವಾಗಿ ಸಂಭವಿಸಿದ ಬದಲಾವಣೆಗಳನ್ನು ಪರಿಚಯಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಸಂಬಂಧ ಡಾ.ಎಚ್.ಎನ್. ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಅವರು ಶಾಸನ ತಜ್ಞ ದೇವರಕೊಂಡಾರೆಡ್ಡಿ, ಪುರಾತತ್ವ ಇಲಾಖೆಯ ನಿರ್ದೇಶಕಿ ಸ್ಮಿತಾ ರೆಡ್ಡಿ, ಲಿಪಿ ತಜ್ಞ ಮಂಜುನಾಥ್, ಲಿಪಿ ವಿನ್ಯಾಸಕರಾದ ಇ.ಡಿ.ಸಿ. ಸಂಸ್ಥೆಯ ಶಶಿಕುಮಾರ್ ಹಾಗೂ ನೋಡಲ್ ಅಧಿಕಾರಿ ಜಿ.ವಿ. ಶ್ರೀನಿವಾಸ್ ಅವರೊಂದಿಗೆ ಸಭೆ ನಡೆಸಿ, ಲಿಪಿ ಮನೆಯ ಅಭಿವೃದ್ಧಿ ಮತ್ತು ಪ್ರದರ್ಶನ ವ್ಯವಸ್ಥೆಗಳ ಕುರಿತು ಚರ್ಚಿಸಿದರು.
ಇದನ್ನೂ ಓದಿ: Chikkaballapur News: ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಕಾನೂನು ಪಾಲನೆಗೆ ಅಧಿಕಾರಿಗಳಿಗೆ ತರಬೇತಿ
ಸಭೆಯ ಬಳಿಕ ಮಾತನಾಡಿದ ಶಿವಶಂಕರ ರೆಡ್ಡಿ, ಲಿಪಿಗಳ ಆರಂಭ ಮತ್ತು ಬೆಳವಣಿಗೆಯ ಕುರಿತು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ತಜ್ಞರು ಹಾಗೂ ಸಂಶೋಧಕರಿಗೆ ಅನುಕೂಲವಾಗುವಂತೆ ಲಿಪಿ ಮನೆಯನ್ನು ಅಭಿವೃದ್ಧಿಪಡಿಸಲಾಗುವುದು. ವಿವಿಧ ಕಾಲಘಟ್ಟಗಳಲ್ಲಿ ಲಿಪಿಗಳಲ್ಲಿ ಉಂಟಾದ ಬದಲಾವಣೆಗಳನ್ನು ಶಾಲಾ ಮಕ್ಕಳಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ದೃಶ್ಯ ಮತ್ತು ಬರಹದ ಮೂಲಕ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಡಾ. ಎಚ್.ಎನ್. ವಿಜ್ಞಾನ ಕೇಂದ್ರವು ಮುಂದಿನ ದಿನಗಳಲ್ಲಿ ಲಿಪಿಗಳ ಕುರಿತು ಜ್ಞಾನ ನೀಡುವ ಪ್ರಮುಖ ಅಧ್ಯಯನ ಕೇಂದ್ರವಾಗಿ ಹೊರಹೊಮ್ಮಬೇಕು. ದೇಶದಲ್ಲೇ ಮಾದರಿ ತಾಣವನ್ನಾಗಿ ರೂಪಿಸಿ, ಲಿಪಿಗಳ ಅಧ್ಯಯನದ ಭೂಪಟದಲ್ಲಿ ಗೌರಿಬಿದನೂರಿಗೆ ವಿಶಿಷ್ಟ ಸ್ಥಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೀವಂತ ವಿಶ್ವವಿದ್ಯಾನಿಲಯವಾಗಲಿ: ಶಾಸನ ತಜ್ಞ ದೇವರಕೊಂಡಾರೆಡ್ಡಿ ಅವರು ಲಿಪಿ ಮನೆಯ ಪರಿಕಲ್ಪನೆಯನ್ನು ಶ್ಲಾಘಿಸಿ, ಬ್ರಾಹ್ಮಿ ಲಿಪಿಯಿಂದ ಆರಂಭವಾಗಿ ಕನ್ನಡ ಲಿಪಿ ಇಂದಿನ ಸ್ವರೂಪಕ್ಕೆ ಬೆಳೆದು ಬಂದ ಸಾವಿರಾರು ವರ್ಷಗಳ ಪಯಣವನ್ನು ಇಲ್ಲಿ ಕಾಲಾನುಕ್ರಮದಲ್ಲಿ ದಾಖಲಿಸಬೇಕು ಎಂದು ಸಲಹೆ ನೀಡಿದರು.
ಅಶೋಕನ ಕಾಲದ ಶಾಸನಗಳು, ಹಲ್ಮಿಡಿ ಶಾಸನದಿಂದ ಹಿಡಿದು ಆಧುನಿಕ ಮುದ್ರಣದವರೆಗಿನ ಬೆಳವಣಿಗೆಯನ್ನು ಸಮಗ್ರವಾಗಿ ಪರಿಚಯಿಸಿದರೆ, ಲಿಪಿ ಮನೆ ಕೇವಲ ವಸ್ತುಸಂಗ್ರಹಾಲಯವಾಗದೆ ಜ್ಞಾನಾರ್ಜನೆಯ ಜೀವಂತ ಕೇಂದ್ರವಾಗಲಿದೆ. ವಿದ್ಯಾರ್ಥಿಗಳಲ್ಲಿ ಲಿಪಿಗಳ ಬಗ್ಗೆ ಕುತೂಹಲ ಮೂಡಿ ಸುವ ರೀತಿಯಲ್ಲಿ ಪ್ರದರ್ಶನಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಲಿಪಿ ಮನೆ ಶೀಘ್ರದಲ್ಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದ್ದು, ಲಿಪಿಗಳ ಇತಿಹಾಸ ಮತ್ತು ಬೆಳವಣಿಗೆ ತಿಳಿಯಲು ಆಸಕ್ತರಿಗೆ ಹೊಸ ಅವಕಾಶ ಕಲ್ಪಿಸಲಿದೆ.