ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CPM: ಬಡವರ ಭೂಮಿ ಹಕ್ಕಿಗಾಗಿ ಸಿಪಿಎಂ ಹೋರಾಟ: ಕಾಂಗ್ರೆಸ್-ಬಿಜೆಪಿ ವಿರುದ್ಧ ವೆಂಕಟ್ ಕಿಡಿ

ದೇಶದಲ್ಲಿ ಗ್ಯಾಸ್ ಬೆಲೆ ಏರಿಕೆಗೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಕಾರಣ ಎಂದು ಆರೋಪಿಸಿದ ವೆಂಕಟ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಜನರಿಗಾಗಿ ಏನನ್ನೂ ಮಾಡಲಿಲ್ಲ ಎಂದು ಟೀಕಿಸಿದರು. ಇಂದಿನ ದಿನಗಳಲ್ಲಿ ಮದುವೆಗೆ ಕನಿಷ್ಠ ಎರಡು ಎಕರೆ ಜಮೀನು ಇರಬೇಕು ಎಂಬ ಪರಿಸ್ಥಿತಿ ಇದೆ, ಆದರೆ ಬಡವರ ಬಳಿ ಭೂಮಿಯೇ ಇಲ್ಲ

ಗುಡಿಬಂಡೆ: ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಹಣಕ್ಕಾಗಿ ಮಾರಿಕೊಂಡರೆ ನಮ್ಮ ಜೀವನವನ್ನು ನಾವೇ ಸರ್ವನಾಶ ಮಾಡಿಕೊಂಡಂತೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ 3ನೇ ಕರ್ನಾಟಕ ಗ್ರಾಮೀಣ ಕೃಷಿ ಕೂಲಿಕಾರರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಚುನಾವಣೆ ಸಮಯದಲ್ಲಿ ಜನರು ಹಣ ಸೇರಿದಂತೆ ಇತರೆ ಆಮಿಷಗಳಿಗೆ ಬಲಿಯಾಗುವುದರಿಂದ ಮುಂದಿನ ಐದು ವರ್ಷಗಳ ಕಾಲ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ದರು. ಕಳೆದ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿನ ಹಿನ್ನಡೆಯನ್ನು ಸ್ಮರಿಸಿದ ಅವರು, ಗೆದ್ದವರು ಮತ್ತು ಓಟು ಹಾಕಿದವರು ಮನೆಯಲ್ಲಿದ್ದರೂ ಸಿಪಿಎಂ ಪಕ್ಷ ಮಾತ್ರ ಸದಾ ಜನರ ಸಮಸ್ಯೆಗಳ ಪರವಾಗಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಗ್ಯಾಸ್ ಬೆಲೆ ಏರಿಕೆಗೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಕಾರಣ ಎಂದು ಆರೋಪಿಸಿದ ವೆಂಕಟ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಜನರಿಗಾಗಿ ಏನನ್ನೂ ಮಾಡಲಿಲ್ಲ ಎಂದು ಟೀಕಿಸಿದರು. ಇಂದಿನ ದಿನಗಳಲ್ಲಿ ಮದುವೆಗೆ ಕನಿಷ್ಠ ಎರಡು ಎಕರೆ ಜಮೀನು ಇರಬೇಕು ಎಂಬ ಪರಿಸ್ಥಿತಿ ಇದೆ, ಆದರೆ ಬಡವರ ಬಳಿ ಭೂಮಿಯೇ ಇಲ್ಲ. ಹೀಗಾಗಿ ಪ್ರತಿ ಬಡ ಕುಟುಂಬಕ್ಕೆ ಕನಿಷ್ಠ 2 ಎಕರೆ ಜಮೀನು ಕೊಡಿಸುವುದೇ ತಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದರು.

ಬಳಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ.ಅನಿಲ್ ಕುಮಾರ್ ಮಾತನಾಡಿ, ವಿಶ್ವದಲ್ಲೇ ನೈತಿಕತೆ ಇರುವ ಏಕೈಕ ಪಕ್ಷವೆಂದರೆ ಅದು ಸಿಪಿಎಂ ಮಾತ್ರ ಎಂದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಆರೋಪಿಸಿದ ಅವರು, ಈ ಭಾಗದಲ್ಲಿ ಪ್ಲೋರೋ ಸಿಸ್ ಸಮಸ್ಯೆ ಹೆಚ್ಚಾಗಿದ್ದರೂ ಸರ್ಕಾರಗಳು ಕೊಳಚೆ ನೀರು ಪೂರೈಕೆ ಮಾಡುತ್ತಿರುವುದು ದೊಡ್ಡ ಪ್ರಮಾದ ಎಂದು ಕಿಡಿಕಾರಿದರು.

ಸಭೆಗೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.

ನಾರಾಯಣ ಎಲ್. ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಖಂಡರಾದ ಪುಟ್ಟಮಾದಪ್ಪ, ಜಿ. ಚಂದ್ರಶೇಖರ್, ಚಿಕ್ಕಗಂಗಪ್ಪ, ಜಯರಾಮರೆಡ್ಡಿ, ಸಿದ್ಧಗಂಗಪ್ಪ ಸೇರಿದಂತೆ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ಪ್ರದೇಶಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.