ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಕೇವಲ ವೈಯಕ್ತಿಕ ಯಶಸ್ಸಿನ ಹಿಂದೆ ಓಡುವುದಕ್ಕಿಂತ ಸಮಾಜದ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್(Dr K Sudhakar) ಹೇಳಿದರು.
ಮಂಚೇನಹಳ್ಳಿ ಕ್ಷೇತ್ರದಲ್ಲಿ ಭಾನುವಾರ ಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿ ತಲಾ 5 ಸಾವಿರ ರೂ. ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹತ್ತನೇ ತರಗತಿ, ದ್ವಿತೀಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಜೀವನದ ಮಹತ್ವದ ಘಟ್ಟಗಳಾಗಿವೆ. ಈ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಮತ್ತು ಶಿಸ್ತಿನ ದಿನಚರಿ ಅಳವಡಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂದರು.
ಯಶಸ್ಸಿನ ಹಿಂದೆ ಕಠಿಣ ಪರಿಶ್ರಮ ಮತ್ತು ತ್ಯಾಗ ಅಡಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಯಬೇಕು. ಯಶಸ್ಸಿಗಿಂತ ಸಮಾಜಕ್ಕೆ ಎಷ್ಟು ಉಪಯುಕ್ತರಾಗಿದ್ದೀರಿ ಎಂಬುದೇ ವ್ಯಕ್ತಿತ್ವದ ನಿಜವಾದ ಮಾನದಂಡವಾಗಬೇಕು ಎಂದು ತಿಳಿಸಿದರು.
ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಪುಟವಾದರೂ ಪುಸ್ತಕ ಓದುವುದು ಜ್ಞಾನದ ವ್ಯಾಪ್ತಿ ಯನ್ನು ವಿಸ್ತರಿಸುತ್ತದೆ. ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಬದಲು ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮವಾಗುವ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
ಪೋಷಕರೇ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಮೊದಲ ಗುರುಗಳು. ಅವರ ತ್ಯಾಗ ಮತ್ತು ಪರಿಶ್ರಮವನ್ನು ಗೌರವಿಸುವುದು ಮಕ್ಕಳ ಕರ್ತವ್ಯವಾಗಿದೆ. ವಿದ್ಯಾಭ್ಯಾಸದ ಜೊತೆಗೆ ವಿನಯ, ಪ್ರಾಮಾಣಿಕತೆ, ಸೌಜನ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಕನಸು ಸಾಕಾರಗೊಳಿಸುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನ ಗಳು ಬೆಳೆಯುತ್ತಿದ್ದರೂ ಮಾನವೀಯತೆ, ಸಹಾನುಭೂತಿ ಮತ್ತು ಸಮಾಜಮುಖಿ ಚಿಂತನೆಗೆ ಪರ್ಯಾಯವಿಲ್ಲ. ಜಾತಿ, ಧರ್ಮ ಹಾಗೂ ಭಿನ್ನಾಭಿಪ್ರಾಯಗಳನ್ನು ಮೀರಿ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿವೇತನವು ಕೇವಲ ಪ್ರೋತ್ಸಾಹದ ಸಂಕೇತವಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳುವ ಮೌಲ್ಯಗಳೇ ನಿಜವಾದ ಸಂಪತ್ತು ಎಂಬ ಕಿವಿಮಾತಿನೊಂದಿಗೆ ಸಂಸದರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.