ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fall in pomegranate prices: ದಾಳಿಂಬೆ ಬೆಲೆ ಕುಸಿತಕ್ಕೆ ಕಡಿವಾಣ: ಕೇಂದ್ರದ ತುರ್ತು ಮಧ್ಯಸ್ಥಿಕೆಗೆ ಸುಧಾಕರ್ ಆಗ್ರಹ

ಜಿಲ್ಲೆಯಲ್ಲಿ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು, ಸಾವಿರಾರು ರೈತ ಕುಟುಂಬಗಳು ಈ ಬೆಳೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿವೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಇಳುವರಿ ಬಂದಿದ್ದರೂ, ಕಳೆದ ವರ್ಷ ಕೆ.ಜಿ.ಗೆ ಸುಮಾರು 180 ರೂಪಾಯಿ ಇದ್ದ ದಾಳಿಂಬೆ ಬೆಲೆ ಇದೀಗ 100ರಿಂದ 120 ರೂಪಾಯಿಗೆ ಕುಸಿದಿದೆ.

ಚಿಕ್ಕಬಳ್ಳಾಪುರ: ಉತ್ತಮ ಇಳುವರಿ ಹಾಗೂ ಗುಣಮಟ್ಟದ ದಾಳಿಂಬೆ(Pomegranate) ಬೆಳೆದಿದ್ದರೂ ಮಾರುಕಟ್ಟೆ ಯಲ್ಲಿ ಬೆಲೆ ದಿಢೀರ್ ಕುಸಿತ ಕಂಡಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಸಾವಿರಾರು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಆಗ್ರಹಿಸಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್(Shivraj Singh Chauhan) ಅವರಿಗೆ ಪತ್ರ ಬರೆದಿರುವ ಅವರು, ದಾಳಿಂಬೆ ಬೆಳೆಗಾರರ ಹಿತ ರಕ್ಷಣೆಗೆ ತುರ್ತು ಮಾರುಕಟ್ಟೆ ಮಧ್ಯಸ್ಥಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು, ಸಾವಿರಾರು ರೈತ ಕುಟುಂಬಗಳು ಈ ಬೆಳೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿವೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಇಳುವರಿ ಬಂದಿದ್ದರೂ, ಕಳೆದ ವರ್ಷ ಕೆ.ಜಿ.ಗೆ ಸುಮಾರು 180 ರೂಪಾಯಿ ಇದ್ದ ದಾಳಿಂಬೆ ಬೆಲೆ ಇದೀಗ 100ರಿಂದ 120 ರೂಪಾಯಿಗೆ ಕುಸಿದಿದೆ. ಕೆಳದರ್ಜೆಯ ಹಣ್ಣುಗಳು ಕೆ.ಜಿ.ಗೆ ಸುಮಾರು 60 ರೂಪಾಯಿಗೆ ಮಾರಾಟವಾಗುತ್ತಿದ್ದು, ಗೊಬ್ಬರ, ನೀರಾವರಿ, ಕಾರ್ಮಿಕರ ಕೂಲಿ ಹಾಗೂ ತೋಟ ನಿರ್ವಹಣಾ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Pomegranate: ದಾಳಿಂಬೆಯಲ್ಲಿ ಲಾಭ ಪಡೆಯಲು ವಿಜ್ಞಾನಿಗಳ ಸಲಹೆ ಪಡೆಯಿರಿ: ಕುಲಪತಿ ಡಾ.ವಿಷ್ಣುವರ್ಧನ್ ಸಲಹೆ

“ಉತ್ತಮ ಇಳುವರಿ ಬಂದಿದ್ದರೂ ಬೆಲೆ ಕುಸಿತದಿಂದ ರೈತರಿಗೆ ಅದರ ಪ್ರಯೋಜನ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಉತ್ಪಾದಿಸುವ ಬೆಳೆ ಅವರಿಗೇ ನಷ್ಟದ ಮೂಲವಾಗಬಾರದು.”

ಶೀಘ್ರ ಮಾರುಕಟ್ಟೆ ಮಧ್ಯಸ್ಥಿಕೆ ಅಗತ್ಯ

ದಾಳಿಂಬೆ ಶೀಘ್ರ ಹಾಳಾಗುವ ಬೆಳೆಯಾಗಿರುವುದರಿಂದ ಬೆಲೆ ಚೇತರಿಕೆಯಾಗುವವರೆಗೆ ಉತ್ಪನ್ನ ವನ್ನು ದೀರ್ಘಕಾಲ ಸಂಗ್ರಹಿಸಿಡಲು ರೈತರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಉತ್ಪನ್ನ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದ್ದು, ರೈತರ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಮಾರುಕಟ್ಟೆ ಮಧ್ಯಸ್ಥಿಕೆ ವಹಿಸಬೇಕು ಎಂದು ಸುಧಾಕರ್ ಒತ್ತಾಯಿಸಿದ್ದಾರೆ.

image (19)

ಚಿಕ್ಕಬಳ್ಳಾಪುರದ ದಾಳಿಂಬೆ ಮಾರುಕಟ್ಟೆಯ ವಾಸ್ತವ ಪರಿಸ್ಥಿತಿ ಕುರಿತು ತಕ್ಷಣ ಅಧ್ಯಯನ ನಡೆಸಿ ವರದಿ ಪಡೆಯಬೇಕು. ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಲು ಸೂಕ್ತ ಮಾರುಕಟ್ಟೆ ಬೆಂಬಲ ವ್ಯವಸ್ಥೆ ಕಲ್ಪಿಸಬೇಕು. ಸಂಸ್ಕರಣಾ ಘಟಕಗಳು ಹಾಗೂ ಪ್ರಮುಖ ದೇಶೀಯ ಮಾರುಕಟ್ಟೆ ಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಅದೇ ರೀತಿ ಕೊಯ್ಲೋತ್ತರ ನಿರ್ವಹಣೆ, ಶೀತಲ ಸರಪಳಿ, ಸಂಗ್ರಹಣಾ ಸೌಲಭ್ಯ ಹಾಗೂ ರಫ್ತು ಮೂಲಸೌಕರ್ಯವನ್ನು ಬಲಪಡಿಸಬೇಕು. ಪರ್ಯಾಯ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಿ ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈತರ ಪರಿಶ್ರಮಕ್ಕೆ ನ್ಯಾಯಯುತ ಬೆಲೆ ಸಿಗಲಿ

“ಚಿಕ್ಕಬಳ್ಳಾಪುರದ ರೈತರು ತಮ್ಮ ಪರಿಶ್ರಮ ಹಾಗೂ ಗುಣಮಟ್ಟದ ಉತ್ಪಾದನೆಯ ಮೂಲಕ ಕರ್ನಾಟಕದ ತೋಟಗಾರಿಕಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರೆಯುವುದು ಕೇವಲ ಮಾರುಕಟ್ಟೆಯ ವಿಚಾರವಲ್ಲ; ಅದು ಅವರ ಪರಿಶ್ರಮಕ್ಕೆ ಸಲ್ಲಬೇಕಾದ ನ್ಯಾಯ. ರೈತರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಗಳು ತ್ವರಿತವಾಗಿ ಸ್ಪಂದಿಸುವುದು ಅತ್ಯಗತ್ಯ,” ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ದಾಳಿಂಬೆ ಬೆಳೆಗಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ತಕ್ಷಣದ ಮಾರುಕಟ್ಟೆ ಮಧ್ಯಸ್ಥಿಕೆ ಜತೆಗೆ ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ.