ಚಿಕ್ಕಬಳ್ಳಾಪುರ: ನಗರದಲ್ಲಿ ಹೆಚ್ಚುತ್ತಿರುವ ಸಂಚಾರಿ ದಟ್ಟಣೆ, ಅತಿ ವೇಗದ ಚಾಲನೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ ನಗರ ಸಂಚಾರಿ ಠಾಣೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಗರ ಸಂಚಾರಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿದ್ಯಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ನಿಯಮಾನುಸಾರ ದಂಡ ವಿಧಿಸುವುದರ ಜತೆಗೆ, ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ: Chikkaballapur News: ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಿಇಒ ಡಾ.ನವೀನ್ ಭಟ್
ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಿರುವ ಪೊಲೀಸರು, ಅತಿ ವೇಗದ ಚಾಲನೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು, ಸಂಚಾರಿ ನಿಯಮ ಪಾಲಿಸದಿರುವುದು ಸೇರಿದಂತೆ ವಿವಿಧ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಂಚಾರಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿದ್ಯಾ, “ದಂಡ ವಿಧಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಪ್ರತಿಯೊಬ್ಬ ವಾಹನ ಸವಾರನಲ್ಲೂ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ವಿಶೇಷವಾಗಿ ಯುವಕರು ಅತಿ ವೇಗದ ಚಾಲನೆಯಿಂದ ದೂರವಿದ್ದು, ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜತೆಗೆ ಇತರರ ಸುರಕ್ಷತೆಯನ್ನೂ ಕಾಪಾಡಬೇಕು” ಎಂದು ಹೇಳಿದರು.
ವಾಹನ ಚಾಲನೆ ವೇಳೆ ವೇಗದ ನಿಯಂತ್ರಣ, ಹೆಲ್ಮೆಟ್ ಧಾರಣೆ, ರಸ್ತೆ ಸೂಚನಾ ಫಲಕಗಳ ಪಾಲನೆ ಹಾಗೂ ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಪೊಲೀಸರು ಸವಾರರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು, ಅಪಘಾತಗಳ ಪ್ರಮಾಣ ತಗ್ಗಿಸುವುದು ಹಾಗೂ ನಿಯಮಬದ್ಧ ಸಂಚಾರಕ್ಕೆ ಉತ್ತೇಜನ ನೀಡುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ‘ರಸ್ತೆ ಎಲ್ಲರಿಗೂ ಸುರಕ್ಷಿತವಾಗಿರಬೇಕು’ ಎಂಬ ಸಂದೇಶದೊಂದಿಗೆ ಸಂಚಾರಿ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ ಸಬ್‌ಇನ್ಸ್‌ಪೆಕ್ಟರ್ ವಿದ್ಯಾ ಹಾಗೂ ಸಿಬ್ಬಂದಿ ಕೈಗೊಂಡಿರುವ ಕ್ರಮಗಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.