ಗೌರಿಬಿದನೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಸಂಖ್ಯಾತ ರೈತ ಕುಟುಂಬಗಳಿಗೆ ಹೈನೋದ್ಯಮ ಜೀವನಾಧಾರವಾಗಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(K H Puttaswamy Gowda) ಹೇಳಿದರು.
ತಾಲ್ಲೂಕಿನ ಅಲಕಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಎರಡೂ ಜಿಲ್ಲೆಗಳಲ್ಲಿ ಶಾಶ್ವತ ನದಿ-ನಾಲೆಗಳಿಲ್ಲ. ಅನಿಶ್ಚಿತ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುವುದು ಕಷ್ಟಕರವಾಗಿರುವುದರಿಂದ ಅನೇಕ ಕುಟುಂಬಗಳು ಹೈನೋದ್ಯ ಮವನ್ನು ಆಸರೆಯಾಗಿ ಮಾಡಿಕೊಂಡಿವೆ ಎಂದರು.
ನೀರು ಮತ್ತು ಮೇವಿನ ಕೊರತೆಯ ನಡುವೆಯೂ ಈ ಭಾಗದ ರೈತರು ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುತ್ತಿದ್ದಾರೆ. ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಹಾಲು ಒಕ್ಕೂಟದ ನಂದಿನಿ ಉತ್ಪನ್ನಗಳಿಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆಯಿದ್ದು, ಈ ವಿಶ್ವಾಸವನ್ನು ಉಳಿಸಿ ಕೊಂಡು ಹೋಗಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪಾರದರ್ಶಕ ಆಡಳಿತ ನಡೆಸಿ ರೈತರ ಹಿತ ಕಾಪಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: K H Puttaswamy Gowda: ಅಭಿವೃದ್ಧಿ ಮೂಲಕವೇ ವಿರೋಧಿಗಳಿಗೆ ಉತ್ತರ: ಶಾಸಕ ಪುಟ್ಟಸ್ವಾಮಿಗೌಡ
ಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಹಾಲು ಒಕ್ಕೂಟದಿಂದ ಬಂದ ಲಾಭಾಂಶ ವನ್ನು ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಹಾಲು ಉತ್ಪಾದಕರು ಹಾಗೂ ಅವರ ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಹಲವು ನೆರವು ನೀಡಲಾಗುತ್ತಿದ್ದು, ರಾಸುಗಳ ಮೇವು ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ ಎಂದರು.
ಗಡಿ ಭಾಗದಲ್ಲಿ ಖಾಸಗಿ ಹಾಲಿನ ಡೇರಿಗಳ ಹಾವಳಿ ಹೆಚ್ಚಾಗಿದ್ದು, ವೈಯಕ್ತಿಕ ಲಾಭದ ಉದ್ದೇಶ ಹೊಂದಿರುವ ಖಾಸಗಿ ಡೇರಿಗಳನ್ನು ಪ್ರೋತ್ಸಾಹಿಸದೆ ಸಹಕಾರಿ ಸಂಘಗಳನ್ನು ಬಲಪಡಿಸುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಅಬ್ದುಲ್ಲ ಮಾತನಾಡಿ, ಶಾಸಕರ ಮಾರ್ಗದರ್ಶನ ಹಾಗೂ ನಿರ್ದೇಶಕರ ಸಹಕಾರ ದೊಂದಿಗೆ ಸಂಘವನ್ನು ಉತ್ತಮವಾಗಿ ಮುನ್ನಡೆಸಲಾಗುತ್ತಿದೆ. ಪಾರದರ್ಶಕ ಆಡಳಿತದ ಮೂಲಕ ಹಾಲು ಉತ್ಪಾದಕರ ಹಿತ ಕಾಪಾಡಲಾಗುವುದು ಎಂದರು.
ಸಭೆಯ ಸಂದರ್ಭದಲ್ಲಿ ಸಂಘಕ್ಕೆ ಹಾಲು ಪೂರೈಸುವ ಉತ್ಪಾದಕರಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು 10 ಲೀಟರ್ ಸಾಮರ್ಥ್ಯದ ಹಾಲಿನ ಕ್ಯಾನುಗಳನ್ನು ವಿತರಿಸಿದರು.