ಚಿಕ್ಕಬಳ್ಳಾಪುರ: "ಭೂಮಿ ಉಳಿದರೆ ಬದುಕು ಉಳಿಯುತ್ತದೆ" ಎಂಬ ಘೋಷಣೆಯೊಂದಿಗೆ, ಸಿಂಗಾಡಿಕದಿರೇನಹಳ್ಳಿ ಗ್ರಾಮದ ದಲಿತ ರೈತರ ಭೂ ಹಕ್ಕು ರಕ್ಷಣೆಗಾಗಿ ದಲಿತ ಸಂಘರ್ಷ ಸಮಿತಿ (ದಸಂಸ) ನೇತೃತ್ವದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿತು.
ಸಾವಿರಾರು ಪ್ರತಿಭಟನಾಕಾರರು ಕನ್ನಡ ಭವನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ, ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸಿದರು.
ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ದಸಂಸ ಮುಖಂಡ ಕೆ.ಸಿ. ರಾಜಾಕಾಂತ್, "ಶೋಷಿತರ ಪರ ಧ್ವನಿ ಎತ್ತುವ ಜನಪರ ಹೋರಾಟಗಳಿಗೆ ಸರ್ಕಾರ ಮತ್ತು ಅಧಿಕಾರಿಗಳು ಕಿವುಡಾಗ ಬಾರದು. ಐದು ದಶಕಗಳಿಂದ ದಲಿತ ಸಂಘರ್ಷ ಸಮಿತಿ ಈ ನಾಡಿನ ಸಾಕ್ಷಿಪ್ರಜ್ಞೆಯಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತ ಬಂದಿದೆ. ಆದರೆ ಇಂದು ಹೋರಾಟಗಳಿಗೂ, ಹೋರಾಟಗಾರರಿಗೂ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Chinthamani News: ಮುರುಗಮಲ್ಲ ಹೋಬಳಿ ಮಟ್ಟದ ಜೆಡಿಎಸ್ ಮುಖಂಡರ ಸಭೆ
ಭೂ ಸುಧಾರಣಾ ಕಾಯ್ದೆ, ಬಗರ್ ಹುಕುಂ, 'ಉಳುವವನೇ ಭೂ ಒಡೆಯ', ಜಾತಿ ನಿಂದನೆ ತಡೆ ಕಾಯ್ದೆ, ಮಲ ಹೊರುವ ಪದ್ಧತಿ ನಿರ್ಮೂಲನೆ, ಕಡ್ಡಾಯ ಶಿಕ್ಷಣ, ವಸತಿ ಶಾಲೆಗಳ ಸ್ಥಾಪನೆ ಸೇರಿದಂತೆ ಹಲವು ಐತಿಹಾಸಿಕ ಹೋರಾಟಗಳ ಮೂಲಕ ಸಾಮಾಜಿಕ ಬದಲಾವಣೆಗೆ ದಸಂಸ ಕಾರಣವಾಗಿದೆ ಎಂದು ಅವರು ನೆನಪಿಸಿದರು.
50 ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ'
ಸಿಂಗಾಡಿಕದಿರೇನಹಳ್ಳಿ ಗ್ರಾಮದ ಸರ್ವೆ ನಂ.67ರಲ್ಲಿ 1972-73ರಿಂದ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು, ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ ಹಾಗೂ ಪಹಣಿ ಪಡೆದಿರುವ 10 ದಲಿತ ಕುಟುಂಬಗಳ ಮೇಲೆ ಅರಣ್ಯ ಇಲಾಖೆ ಏಕಾಏಕಿ ಹಕ್ಕು ಮಂಡಿಸಿ ಒಕ್ಕಲೆಬ್ಬಿಸಲು ಮುಂದಾಗಿದೆ. ಕಂದಾಯ ಇಲಾಖೆ 1991ರಲ್ಲಿ ಅರಣ್ಯ ಇಲಾಖೆಗೆ ನೀಡಿದ್ದ ಸರ್ವೆ ನಂ.53ರ ಭೂಮಿಯನ್ನು ಬಿಟ್ಟು, ಈಗ ರೈತರು ಕೃಷಿ ಮಾಡುತ್ತಿರುವ ಭೂಮಿಯನ್ನೇ ತಮ್ಮದೆಂದು ಹೇಳುತ್ತಿರುವುದು ಅನ್ಯಾಯ ಎಂದು ರಾಜಾಕಾಂತ್ ಆರೋಪಿಸಿದರು.
ಈ ವಿಚಾರದಲ್ಲಿ ರೈತರ ಪರ ನಿಲ್ಲಬೇಕಿದ್ದ ಕಂದಾಯ ಇಲಾಖೆ ಮೌನ ವಹಿಸಿರುವುದು ಅರ್ಥವಾಗದ ಸಂಗತಿ ಎಂದು ಅವರು ಪ್ರಶ್ನಿಸಿದರು.
30 ದಿನಗಳ ಧರಣಿಗೂ ಆಡಳಿತ ಮೌನ'
ಜೂನ್ 15ರಿಂದ ಅರಣ್ಯ ಇಲಾಖೆ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 30 ದಿನ ಪೂರೈಸಿದ್ದರೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ದಲಿತ ವಿರೋಧಿ ಧೋರಣೆಯ ಸ್ಪಷ್ಟ ಉದಾಹರಣೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿ ದರು.'
ಪರಿಹಾರವಾಗುವವರೆಗೂ ಹೋರಾಟ ನಿಲ್ಲದು'
ದಸಂಸ ಹಿರಿಯ ಮುಖಂಡ ಗಡ್ಡಂ ವೆಂಕಟೇಶ್ ಮಾತನಾಡಿ, "ಐದು ದಶಕಗಳಿಂದ ದಸಂಸ ನಡೆಸಿರುವ ಹೋರಾಟಗಳು ಶೋಷಿತ ಸಮುದಾಯಗಳಿಗೆ ಬದುಕುವ ಶಕ್ತಿ ತುಂಬಿವೆ. ಈಗಲೂ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಪರ ನಮ್ಮ ಹೋರಾಟ ಮುಂದುವರಿಯಲಿದೆ. ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ನಿಲ್ಲುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ
ಸುಮಾರು ಎರಡು ಗಂಟೆಗಳ ಕಾಲ ನಡೆದ ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಜಿ. ಪ್ರಭು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ರೈತರಿಗೆ ಅನ್ಯಾಯವಾಗದಂತೆ ಕಾನೂನು ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಭೂಮಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪರಿಶೀಲಿಸಿ ನ್ಯಾಯ ಸಮ್ಮತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಆದರೆ ಜಿಲ್ಲಾಧಿಕಾರಿಗಳ ಭರವಸೆಯಿಂದ ತೃಪ್ತರಾಗದ ಪ್ರತಿಭಟನಾಕಾರರು, ಸಿಂಗಾಡಿಕದಿರೇನಹಳ್ಳಿ ಗ್ರಾಮದ 10 ದಲಿತ ಕುಟುಂಬಗಳಿಗೆ ತಕ್ಷಣ ನ್ಯಾಯ ಒದಗಿಸಬೇಕೆಂದು ಪಟ್ಟು ಹಿಡಿದರು.
ಕೊನೆಯಲ್ಲಿ ಮಾತನಾಡಿದ ರಾಜಾಕಾಂತ್, "ಜಿಲ್ಲಾಡಳಿತ ಈ ವಿಚಾರದಲ್ಲಿ ಪದೇ ಪದೇ ಮೂಗಿಗೆ ತುಪ್ಪ ಸವರಿಸುವ ಕೆಲಸ ಮಾಡುತ್ತಿದೆ. ಇನ್ನೂ 10 ದಿನಗಳ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗೆ ಶಾಶ್ವತ ಪರಿಹಾರ ನೀಡದಿದ್ದರೆ ನಡೆಯುವ ಎಲ್ಲ ಬೆಳವಣಿಗೆಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ" ಎಂದು ಎಚ್ಚರಿಕೆ ನೀಡಿದರು.
ಬಳಿಕ ತಾಲೂಕು ಕಚೇರಿ ಮುತ್ತಿಗೆ ಹೋರಾಟವನ್ನು ಹಿಂಪಡೆದು, ಅರಣ್ಯ ಇಲಾಖೆ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರಿಸುವುದಾಗಿ ದಸಂಸ ಮುಖಂಡರು ಘೋಷಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿಜಿ ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಬಿವಿ ವೆಂಕಟರಮಣ, ಎನ್ಎ ವೆಂಕಟೇಶ್, ಶ್ರೀರಂಗಪ್ಪ, ಜಿಲ್ಲಾ ಕಲಾಮಂಡಳಿ ಸಂಚಾಲಕ ಇಸ್ಕೂಲಪ್ಪ, ಜಿಲ್ಲಾ ಖಜಾಂಚಿ ಜಿ.ವಿ ಗಂಗಪ್ಪ, ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕ ಎನ್ ಪರಮೇಶ್, ತಾಲೂಕು ಸಂಘಟನಾ ಸಂಚಾಲಕರಾದ ಟೈಲರ್ ಮುನಿರಾಜು ಚಿನ್ನಪ್ಪ ಮುನಿ ಯಪ್ಪ ತ್ಯಾಗರಾಜು ಮುನಿ ಕದಿರಪ್ಪ ವೈ ನಾರಾಯಣ ಮೂರ್ತಿ ಕರಗಪ್ಪ ಕೆಸಿ ನರಸಿಂಹಯ್ಯ ಕೆಎಂ ರಾಮಕೃಷ್ಣ ಗಂಗಾಧರ್ ಗಡಿನಾಡು ರೈತ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಬಾಗೇಪಲ್ಲಿ ತಾಲೂಕು ಸಂಚಾಲಕ ಪೈಪಾಳ್ಯ ರವಿ ಗೌರಿಬಿದನೂರು ತಾಲೂಕು ಸಂಚಾಲಕ ಪಿ ನರಸಿಂಹಮೂರ್ತಿ ಶಿಡ್ಲಘಟ್ಟ ತಾಲೂಕು ಸಂಚಾಲಕ ದೊಡ್ಡ ತಿರುಮಲಪ್ಪ ಗುಡಿಬಂಡೆ ಸಂಚಾಲಕ ಸಿವಿ ರಮಣ ಚೇಳೂರು ಸಂಚಾಲಕ ನರಸಿಂಹಪ್ಪ ಮಂಚೇನಹಳ್ಳಿ ಸಂಚಾಲಕ ಎಂ ನರಸಿಂಹಮೂರ್ತಿ ದಿನ್ನೆ ಹೊಸಳ್ಳಿ ವೆಂಕಟೇಶ್ ಲಕ್ಷ್ಮಣ್ ಮತ್ತಿತರರು ಇದ್ದರು.