ಚಿಕ್ಕಬಳ್ಳಾಪುರ : ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಎಲ್ಲಿಯಾದರೂ ಹುಟ್ಟಿರಬಹುದು. ಆದರೆ ಇಂದು ಅವರು ಕನ್ನಡಿಗರು, ಕರ್ನಾಟಕದವರೇ ಆಗಿದ್ದಾರೆ. ಅವರು ಎಷ್ಟು ಎತ್ತರಕ್ಕೆ ಬೆಳೆಯುತ್ತಾರೋ, ಎಷ್ಟು ಸಮಾಜಸೇವೆ ಮಾಡುತ್ತಾರೋ ಅದೆಲ್ಲವೂ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸುತ್ತದೆ ಎಂದು ಸುತ್ತೂರು ಸಂಸ್ಥಾನದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಬೆಂಗಳೂರು ನಗರದ ಬಸವ ಸಮಿತಿ ಭವನದಲ್ಲಿ ಗುರುವಾರ ನಡೆದ ಬಸವ ಸಮಿತಿಯ 62ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಮಾಜಿ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಅವರ 114ನೇ ಜಯಂತ್ಯು ತ್ಸವದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ‘ದಾಸೋಹ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮಕ್ಕಳಿಗೆ ಪೌಷ್ಟಿಕ ಆಹಾರ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಗೋಶಾಲೆ, ಆಸ್ಪತ್ರೆ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಧುಸೂದನ ಸಾಯಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಅವರು, ಇಷ್ಟೆಲ್ಲ ಸಾಧನೆಗಳ ನಡುವೆಯೂ ವಿನಯದಿಂದ ಬದುಕುತ್ತಿರುವುದು ಶ್ಲಾಘನೀಯ ಎಂದರು.
ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಮಾತನಾಡಿ, ಬಸವಣ್ಣನವರ ದಾಸೋಹ ತತ್ತ್ವದ ನಿಜವಾದ ಅನುಷ್ಠಾನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಕಾಣುತ್ತಿದೆ. ಸಂಸ್ಥೆಯ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಕಾಯಕ ಹಾಗೂ ಸೇವೆಯಾಗಿ ನಿರ್ವಹಿಸುತ್ತಿದ್ದಾರೆ. ನಿಸ್ವಾರ್ಥ ಸೇವೆಗೆ ಸಂಸ್ಥೆಗಳು ಜೀವಂತ ಉದಾಹರಣೆಯಾಗಿವೆ ಎಂದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಮಾತು ಮತ್ತು ಚಿಂತನೆಗಳನ್ನು ಮಧುಸೂದನ ಸಾಯಿ ಕೃತಿರೂಪಕ್ಕೆ ತರುತ್ತಿದ್ದಾರೆ. ಅವರದು ಸದ್ದುಗದ್ದಲವಿಲ್ಲದ ಸಾಧನೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, “ಛತ್ತೀಸಗಡದಲ್ಲಿ ಹುಟ್ಟಿ, ಆಂಧ್ರದಲ್ಲಿ ವಿದ್ಯಾಭ್ಯಾಸ ಮಾಡಿ ಕರ್ನಾಟಕವನ್ನು ಕರ್ಮಭೂಮಿಯಾಗಿಸಿಕೊಂಡಿದ್ದೇನೆ. ಈ ನಾಡಿನವರು ನನ್ನನ್ನು ‘ಇವನಾರವ’ ಎಂದು ಕೇಳಲಿಲ್ಲ; ‘ಇವನಮ್ಮವ’ ಎಂದು ಒಪ್ಪಿಕೊಂಡರು” ಎಂದು ಭಾವುಕರಾದರು.
ವಚನ ಸಾಹಿತ್ಯವನ್ನು ವಿಶ್ವದ 80 ಭಾಷೆಗಳಿಗೆ ವಿಸ್ತರಿಸುವ ಕಾರ್ಯದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಬಸವ ಸಮಿತಿಯೊಂದಿಗೆ ಕೈಜೋಡಿಸಲಿದೆ. ಬಸವ ಸಾಹಿತ್ಯ ವಿಶ್ವದಾದ್ಯಂತ ಪಸರಿಸಬೇಕು ಎಂಬುದು ತಮ್ಮ ಆಶಯ ಎಂದರು.
ಇದೇ ಸಂದರ್ಭದಲ್ಲಿ ‘ಬಸವ ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ’ ಉದ್ಘಾಟಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕೆಎಲ್‌ಇ ಬಸವ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಾದ ಗುರುಕುಲದ ವಿದ್ಯಾರ್ಥಿಗಳು ‘ವಚನ ಸಂಗೀತ’ ಕಾರ್ಯಕ್ರಮ ನಡೆಸಿಕೊಟ್ಟರು.