ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ(Nadaprabhu Kempegowda Jayanti) ಯನ್ನು ಜೂ.27ರಂದು ನಗರದಲ್ಲಿ ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ವಿಜೃಂಭಣೆಯಿಂದ ಆಚರಿಸಲು ತಾಲೂಕು ಒಕ್ಕಲಿಗ ಸಂಘವು ತೀರ್ಮಾನಿಸಿದೆ. ಕನ್ನಡ ಭವನದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮುದಾಯದ ಮುಖಂಡರು ಕರೆ ನೀಡಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಇತಿಹಾಸದಲ್ಲಿ ಅಚ್ಚಳಿಯದ ಸಾಧನೆ ಮಾಡಿರುವ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕಿನಲ್ಲಿಯೂ ಕೂಡ ಆದರ್ಶಪ್ರಾಯವಾಗಿ ಮಾಡಲು ಸಿದ್ಧತೆಗಳು ನಡೆದಿವೆ.ಅವರಿವರೆನ್ನದೆ, ಆಪಕ್ಷ ಈ ಪಕ್ಷ ಎನ್ನದೆ ಹೆಣ್ಣು ಗಂಡು ಎನ್ನದೆ ಸಕಲರೂ ಭಾಗಿಯಾಗುವ ಮೂಲಕ ಜಯಂತಿಯನ್ನು ಸ್ಮರಣೀಯವಾಗಿಸೋಣ ಎಂದರು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಬದಲಿಗೆ ಎಲ್ಲಾ ಸಮುದಾಯಗಳಿಗೂ ಎಲ್ಲರಿಗೂ ಆದರ್ಶಪ್ರಾಯ ನಾಯಕರು. ಇಂತಹ ಮಹಾನ್ ನಾಯಕರ ಜಯಂತಿಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಿ ಸಂಘವು ತೀರ್ಮಾನಿಸಿದ್ದು ಸಂಸದ ಶಾಸಕರು ಎಲ್ಲಾ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಯಾಗಲಿದ್ದಾರೆ ಎಂದರು.
ಇದನ್ನೂ ಓದಿ: Nadaprabhu Kempegowda: ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ: ಅಧಿಕಾರಿಗಳ ಗೈರು ಹಾಜರಿಗೆ ಅಸಮಾಧಾನ
ತಾಲೂಕಿನ ವಿವಿಧ ಗ್ರಾಮಗಳಿಂದ 100ಕ್ಕೂ ಹೆಚ್ಚು ರಥಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷಾತೀತವಾಗಿ ಎಲ್ಲ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಕೆಂಪೇಗೌಡರ ಜಯಂತಿ ನಡೆಯುವ ಜೂ.27ರಂದು ವಾಪಸಂದ್ರದ ರಂಗನಾಥಸ್ವಾಮಿ ದೇವಸ್ಥಾನ ದಿಂದ ಆರಂಭವಾಗುವ 100ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆಯು ಕನ್ನಡ ಭವನದವರೆಗೆ ಸಾಗಲಿದೆ. ಅದಕ್ಕೂ ಮೊದಲು ಒಕ್ಕಲಿಗರ ಕಲ್ಯಾಣ ಮಂಟಪದ ಬಳಿಯ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದರು.
ನಂತರ ಕನ್ನಡ ಭವನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರಿಂದ ಉಪನ್ಯಾಸ ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಗೌವಾಧ್ಯಕ್ಷ ಯಲುವಹಳ್ಳಿ ಎನ್ ರಮೇಶ್ ಮಾತನಾಡಿ, ಕಾರ್ಯಕ್ರಮ ದಲ್ಲಿ ನಮ್ಮ ಸಮುದಾಯವೂ ಸೇರಿದಂತೆ ಇತರೆ ಎಲ್ಲಾ ಸಮುದಾಯಗಳ ಸಾಧಕರನ್ನು ಗುರ್ತಿಸಿ ಸನ್ಮಾನಿಸಲು ಜಿಲ್ಲಾಡಳಿತಕ್ಕೆ ಸಲಹೆ ಸೂಚನೆ ನೀಡಲಾಗಿದೆ.ಕಾರಣ ಕೆಂಪೇಗೌಡರು ಜಾತ್ಯಾತೀತ ನಾಯಕರಾಗಿದ್ದರು ಎಂದರು.
ಸಂಘದ ತಿರ್ಮಾನದಂತೆ ರಾಜ್ಯದ ಪಠ್ಯಕ್ರಮದಲ್ಲಿ ಪ್ರಾಥಮಿಕ ಹಂತದಿಂದಲೇ ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ಅಳವಡಿಸಬೇಕು. ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕೆಂಪೇ ಗೌಡರ ಭಾವಚಿತ್ರ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಚೀಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಜಿಲ್ಲಾಡಳಿತದ ಸಹಕಾರದೊಂದಿಗೆ ಈ ಬಾರಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೆಂಪೇ ಗೌಡರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಎಲ್ಲ ಸಮುದಾಯಗಳ ಜನರು ಕಾರ್ಯಕ್ರಮ ದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಚನ್ನಪ್ಪರೆಡ್ಡಿ, ಉಪಾಧ್ಯಕ್ಷ ರಾಮಸ್ವಾಮಿ, ಖಜಾಂಚಿ ಬಿ.ಕೆ.ಮಂಜುನಾಥ್, ಕೆ.ಆರ್. ರೆಡ್ಡಿ, ಶ್ರೀನಿವಾಸ್, ಗೆರಿಗರೆಡ್ಡಿ, ನಾರಾಯಣಸ್ವಾಮಿ, ನಾಗರಾಜ್, ಎಂ.ಪ್ರಕಾಶ್, ಗಂಗರೇಕಾಲುವೆ ಪ್ರಸಾದ್, ಯಲುವಳ್ಳಿ ಜನಾರ್ದನ್, ಚುಂಚಶ್ರೀ ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಹೇಮಲತಾ ಜನಾರ್ದನ್, ಗೌರವಾಧ್ಯಕ್ಷೆ ಲೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.