ಚಿಕ್ಕಬಳ್ಳಾಪುರ: ಪಿಯುಸಿ ಜೀವನವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಘಟ್ಟ ವಾಗಿದ್ದು, ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ಶ್ರಮ, ಶಿಸ್ತು ಮತ್ತು ಸಮಯದ ಸದ್ಬಳಕೆಯೇ ಯಶಸ್ಸಿನ ನಿಜವಾದ ಮಂತ್ರ ಎಂದು ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ವಿ. ಕೃಷ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ಪೂರ್ಣ ಪ್ರಜ್ಞಾ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ 'ನವಯಾನ' ಫ್ರೆಶರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಿಯುಸಿ ಶಿಕ್ಷಣವು ಎಸ್‌ಎಸ್‌ಎಲ್‌ಸಿಗಿಂತ ಹೆಚ್ಚು ಜವಾಬ್ದಾರಿಯ ಹಂತವಾಗಿದೆ. ವಿದ್ಯಾರ್ಥಿಗಳು ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಂಡು, ತಂದೆ-ತಾಯಿಯ ತ್ಯಾಗ ಗೌರವಿಸಿ ಓದಿನತ್ತ ಸಂಪೂರ್ಣ ಗಮನ ಹರಿಸಬೇಕು. ಶ್ರಮವೊಂದೇ ಉಜ್ವಲ ಭವಿಷ್ಯದ ಕೀಲಿಕೈ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ರೈತ ಹುತಾತ್ಮರ ತ್ಯಾಗ ದೇಶದ ಕೃಷಿಗೆ ದಾರಿದೀಪ: ಯಣ್ಣೂರು ಬಿ.ಬಸವರಾಜು
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಾತಮುತ್ತುಕದಹಳ್ಳಿ ಚಲಪತಿ ಗೌಡ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಮಾದಕ ವ್ಯಸನದಿಂದ ದೂರವಿರುವುದು ಅತ್ಯಗತ್ಯ. ಮೊಬೈಲ್ ಬಳಕೆ ಅಗತ್ಯಕ್ಕೆ ಸೀಮಿತವಾಗಿರಬೇಕು. ಅದು ಚಟವಾಗಿ ಬದಲಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಯಾವುದೇ ಶಿಕ್ಷಣದಲ್ಲೂ ಮನಸ್ಸಿಟ್ಟು ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ವಿದ್ಯಾರ್ಥಿ ಜೀವನವೆಂಬ ಸುವರ್ಣಾವಕಾಶವನ್ನು ನಿರ್ಲಕ್ಷಿಸಿದರೆ ಭವಿಷ್ಯಕ್ಕೆ ತುಕ್ಕು ಹಿಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಇಂದಿರಾ ನಾರಾಯಣ್ ಶಿಕ್ಷಣ ಸಂಸ್ಥೆಗಳ ಸದಸ್ಯೆ ಡಾ.ವಿಷ್ಣುಪ್ರಿಯಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಶಿಕ್ಷಣವು ಅತ್ಯಂತ ಮಹತ್ವದ ತಿರುವು. ಇಂದಿನ ಜೆನ್-ಜಿ ಯುಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಗತ್ತಿನಾದ್ಯಂತ ಅನಂತ ಅವಕಾಶಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಓದಿನತ್ತ ಗಂಭೀರತೆ, ಕೌಶಲಾಭಿವೃದ್ಧಿ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ಯಶಸ್ಸಿನ ಹೆಬ್ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ಇಂದಿರಾ ನಾರಾಯಣ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವೆಂಕಟೇಶ್, ಕಾರ್ಯದರ್ಶಿ ಎಂ.ಎಸ್. ಶೈಲಜಾ, ಉಪನ್ಯಾಸಕರಾದ ಉಮೇಶ್, ಅಂಜಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.