ಗೌರಿಬಿದನೂರು: ಆಷಾಢ ಮಾಸದ ಅಂಗವಾಗಿ ಗೌರಿಬಿದನೂರು ತಾಲೂಕಿನ ರಾಯರೇಕಲಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆಗಳಾದ ಮದ್ದೂರಮ್ಮ ಹಾಗೂ ಸಪ್ಪಲಮ್ಮ ದೇವಿಯರ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ಆಚರಣೆಗಳೊಂದಿಗೆ ವೈಭವವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ(MLA K H Puttaswamy Gowda) ಮಾತನಾಡಿ, ಆಷಾಢ ಮಾಸದಲ್ಲಿ ಗ್ರಾಮ ದೇವತೆಗಳಿಗೆ ಆರತಿ ಬೆಳಗಿ ಗ್ರಾಮದ ಒಳಿತು, ಜನರ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಇದನ್ನೂ ಓದಿ; Gauribidanur News: ಗೌರಿಬಿದನೂರು ರಾಜ್ಯ ಮಟ್ಟದಲ್ಲಿ ಮುಂಚೂಣಿ; 2.14 ಲಕ್ಷ ಮತದಾರರಲ್ಲಿ 1.65 ಲಕ್ಷ ಮಾಹಿತಿ ಸಂಗ್ರಹ
ಹಿಂದಿನ ದಿನಗಳಲ್ಲಿ ಪ್ಲೇಗ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮದ ಶಕ್ತಿ ದೇವತೆಗಳ ಮೊರೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು. ಇಂತಹ ಆಚರಣೆಗಳು ಸಮಾಜದಲ್ಲಿ ನಂಬಿಕೆ, ಒಗ್ಗಟ್ಟು ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದು ತಿಳಿಸಿದರು.
ದೀಪೋತ್ಸವದ ಅಂಗವಾಗಿ ರಾಯರೇಕಲಹಳ್ಳಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸ ಲಾಗಿತ್ತು. ಮಹಿಳೆಯರು ತಂಬಿಟ್ಟಿನ ಆರತಿ ಸಿದ್ಧಪಡಿಸಿಕೊಂಡು ಶ್ರದ್ಧಾ-ಭಕ್ತಿಯಿಂದ ದೇವಿಯರಿಗೆ ಆರತಿ ಬೆಳಗಿದರೆ, ಗ್ರಾಮಸ್ಥರು ಸಂಭ್ರಮದಿಂದ ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಬ್ಬದ ಕಳೆ ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎನ್.ಎಂ. ರವಿನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಿ.ಕೆ. ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮೇಗೌಡ, ಕೋಚಿಮುಲ್ ಮಾಜಿ ನಿರ್ದೇಶಕ ಸುಬ್ಬಾರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಸಂದ್ರ ಗಂಗಾಧರಪ್ಪ, ಮುಖಂಡರಾದ ಪೋತೇನಹಳ್ಳಿ ರಾಮಣ್ಣ, ನಾಗಭೂಷಣ್ ರಾವ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಆರ್.ಪಿ. ಗೋಪಾಲಗೌಡ, ಮಿಲಿಟರಿ ರಾಮಕೃಷ್ಣ, ಕೃಷ್ಣಪ್ಪ, ಲಕ್ಷ್ಮಣ್ ರಾವ್, ಮಹೇಂದ್ರ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.