ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gudibande News: ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಕರವೇಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಕೆ

ಮನವಿ ಸಲ್ಲಿಕೆಗೂ ಮುನ್ನ ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದ ಹೋರಾಟಗಾರರು, ಪ್ರತ್ಯೇಕ ಕ್ಷೇತ್ರದ ಪರವಾಗಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗುಡಿಬಂಡೆ: ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹಾಗೂ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ( separate assembly constituency for Gudibande) ಹೋರಾಟಗಾರರ ವೇದಿಕೆಯ ವತಿಯಿಂದ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. 

ಮನವಿ ಸಲ್ಲಿಕೆಗೂ ಮುನ್ನ ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದ ಹೋರಾಟಗಾರರು, ಪ್ರತ್ಯೇಕ ಕ್ಷೇತ್ರದ ಪರವಾಗಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಸ್ತಿತ್ವದ ಉಳಿವಿಗಾಗಿ ನಿರಂತರ ಹೋರಾಟ

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರರ ವೇದಿಕೆಯ ಮುಖಂಡ ಅಮೀರ್ ಜಾನ್, ನಮ್ಮ ಅಸ್ತಿತ್ವದ ಉಳಿವಿಗಾಗಿ ನಾವೆಲ್ಲರೂ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. 

ಇದನ್ನೂ ಓದಿ: Chikkaballapur News: ಸರ್ಕಾರಿ ಶಾಲೆಗೇ ಮಕ್ಕಳನ್ನು ದಾಖಲಿಸಿ, ಉತ್ತಮ ಭವಿಷ್ಯ ಕಲ್ಪಿಸಿ: ಉಪನಿರ್ದೇಶಕ ರಮೇಶ್.ವಿ ಮನವಿ

ಕಳೆದ ತಿಂಗಳು ನಡೆದ ಪೂರ್ವಭಾವಿ ಸಭೆಯ ತೀರ್ಮಾನದಂತೆ ಇಂದು ಕರವೇ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ಪ್ರಸ್ತುತ ಜನಗಣತಿ ಕಾರ್ಯ ನಡೆಯುತ್ತಿದ್ದು, ಇದು ಮುಗಿದ ತಕ್ಷಣ ಕ್ಷೇತ್ರ ಪುನರ್ವಿಂಗಡನೆ ಪ್ರಕ್ರಿಯೆ ಆರಂಭವಾಗಲಿದೆ, ಆ ಸಮಯದಲ್ಲಿ ಗುಡಿಬಂಡೆಯನ್ನು ಕಡ್ಡಾಯವಾಗಿ ಪ್ರತ್ಯೇಕ ಕ್ಷೇತ್ರ ಮಾಡಬೇಕು ಮತ್ತು ಅಲ್ಲಿಯ ವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿಗೆ ಹಿನ್ನಡೆ ಮತ್ತು ಅನುದಾನದ ಕೊರತೆ

ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, ಪ್ರಸ್ತುತ ಗುಡಿಬಂಡೆಯು ಬಾಗೇ ಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ ಎಂದು ವಿಷಾದಿಸಿದರು. ಒಂದೇ ಕ್ಷೇತ್ರದ ಅಡಿಯಲ್ಲಿ ಮೂರು ತಾಲೂಕುಗಳು ಬರುವುದರಿಂದ ಈ ಭಾಗಕ್ಕೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಹಾಗೂ ಗುಡಿಬಂಡೆ ಪ್ರತ್ಯೇಕ ಕ್ಷೇತ್ರವಾದರೆ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯ ಎಂದ ಅವರು  ಗುಡಿಬಂಡೆ, ನಗರಗೆರೆ ಹಾಗೂ ಮಂಡಿಕಲ್ ಹೋಬಳಿಗಳ ಸಾರ್ವಜನಿಕರು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು.

ಪ್ರಾಣ ಹೋದರೂ ಹೋರಾಟದಿಂದ ಹಿಂದೆ ಸರಿಯಲ್ಲ!

ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಯಾದವ್, ಮುಖಂಡರಾದ ಅಪ್ಸರ್ ಹಾಗೂ ದಲಿತ ಮುಖಂಡ ಗಂಗರಾಜು ಮಾತನಾಡಿ, ಇಂದಿನ ಹೋರಾಟಕ್ಕೆ ಜನರ ಸಂಖ್ಯೆ ಏರಿಳಿತವಾಗಬಹುದು, ಆದರೆ ನಮ್ಮ ಛಲ ಕಮ್ಮಿಯಾಗುವುದಿಲ್ಲ ಎಂದರು. 

ಈ ಹೋರಾಟಕ್ಕಾಗಿ ರಕ್ತ, ಪ್ರಾಣ ಅಥವಾ ಆಸ್ತಿ ಕಳೆದುಕೊಳ್ಳಬೇಕಾಗಿ ಬಂದರೂ ನಾವು ಸಿದ್ಧರಿದ್ದು, ಪ್ರತ್ಯೇಕ ಕ್ಷೇತ್ರ ಸಿಗುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟಗಾರರ ಮುಖಂಡರು, ಕರವೇ ಪದಾಧಿಕಾರಿಗಳು, ಪಟ್ಟಣದ ನಾಗರಿಕರು ಹಾಗೂ ವಿವಿಧ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.