ಚಿಕ್ಕಬಳ್ಳಾಪುರ: ಇತ್ತೀಚೆಗೆ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಮೇಲೆ ನಡೆದಿರುವುದು ಕೇವಲ ವ್ಯಕ್ತಿಗತ ದಾಳಿಯಲ್ಲ, ಅದು ಅಹಿಂದ ವರ್ಗದ ಮೇಲೆ ನಡೆದ ಪೂರ್ವಯೋಜಿತ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಹಿಂದ ಮುಖಂಡರು ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿ ಯಲ್ಲಿ ಮುಖಂಡರು ಮಾತನಾಡಿದರು.
ದಸಂಸ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸು.ದಾ.ವೆಂಕಟೇಶ್ ಮಾತನಾಡಿ "ಸರ್ಕಾರದ ವತಿಯಿಂದ 37ಕ್ಕೂ ಹೆಚ್ಚು ದಾರ್ಶನಿಕರ ಜಯಂತಿಗಳನ್ನು ಜಾತ್ಯಾತೀತವಾಗಿ ಆಚರಿಸಲಾಗುತ್ತದೆ. ಅದರಂತೆ, ಕೆಂಪೇಗೌಡರ ಜಯಂತಿ ಕಾರ್ಯಕ್ರಮವೂ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಹೊರಗಿನಿಂದ ಬಂದ ಕೆಲ ಕಿಡಿಗೇಡಿಗಳು, ಮದ್ಯದ ಅಮಲಿನಲ್ಲಿ ಬಂದು ಏಕಾಏಕಿ ಗದ್ದಲ ಎಬ್ಬಿಸಿ ದರಲ್ಲದೆ ಶಾಸಕರ ಮೇಲೆ ಅಕ್ಷರಶಃ ದಾಳಿ ನಡೆಸಲು ಮುಂದಾಗಿದ್ದು ಸರ್ವಥಾ ಸರಿಯಲ್ಲ.ಈ ಘಟನೆ ನೋಡಿದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೋ ಇಲ್ಲಾ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೋ ಎಂಬ ಅನುಮಾನ ಮೂಡುತ್ತದೆ ಎಂದರು.
ಇದನ್ನೂ ಓದಿ: Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಗದ್ದಲ ಮಾಡುವವರನ್ನು ನಿಯಂತ್ರಿ ಸುವ ಸಂದರ್ಭದಲ್ಲಿ ಆಡಿದ ಮಾತು ಅವರ ಜಾತಿವಾದಿ ಮನಸ್ಥಿತಿಯನ್ನು ತೋರುತ್ತದೆ.ಅವರು ಜೋರು ದನಿಯಲ್ಲಿ ಹೇಳಿದ ಮಾತು 'ಇದು ಅಂಬೇಡ್ಕರ್ ಜಯಂತಿಯಲ್ಲ' ಕೆಂಪೇಗೌಡರ ಜಯಂತಿ ಶಿಸ್ತನ್ನು ಕಾಪಾಡಿ ಎಂದು ಹೇಳುವ ಮೂಲಕ ಅಂಬೇಡ್ಕರ್ ಮತ್ತು ದಲಿತ ಸಮುದಾಯ ಎರಡಕ್ಕೂ ಅಪಮಾನ ಮಾಡಿದ್ದಾರೆ.ಈ ಹೇಳಿಕೆಯು ನಾವು ದೊಡ್ಡ ಸಮುದಾಯ ಎಂದು ಹೇಳಿಕೊಳ್ಳುವವರಿಗೆ ಶೋಭೆ ತರುವುದಿಲ್ಲ ಎಂದರು.
ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂಬ ದುರುದ್ದೇಶದಿಂದ ಬಂದವರು ಶಾಸಕರನ್ನು ಎರಡು ಗಂಟೆಗೂ ಹೆಚ್ಚು ಕಾಲ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಕನ್ನಡ ಭವನದಲ್ಲಿದ್ದ ಜನತೆ ಕಣ್ಣಾರೆ ಕಂಡಿದ್ದಾರೆ".ಭಾಷಣ ಮುಗಿಸಿ ಅವರು ಹೋಗುವಾಗಲೂ ತೊಂದರೆ ಕೊಟ್ಟಾಗ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೇ ದೊಡ್ಡದು ಮಾಡಿ ಭವನದ ಒಳಗೆ ನಡೆದ ಹೈಡ್ರಾಮಾ ಮರೆಸುವುದು ಸರಿಯಲ್ಲಿ ಎಂದು ಹೇಳಿದರು.
ಸಂಸದ ಸುಧಾಕರ್ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷಗಳ ಮುಖಂಡರು ಕಾರ್ಯಕರ್ತರು "ಪ್ರದೀಪ್ ಈಶ್ವರ್ ಗಲಾಟೆ ಮಾಡಲೆಂದೇ ಬಂದಿದ್ದರು ಎಂಬಂತೆ ತಪ್ಪು ತಪ್ಪು ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಹಾಜರಿದ್ದ ನನ್ನ ಪ್ರಕಾರ ಇದು ಪೂರ್ವಯೋಜಿತ ಸಂಚಲ್ಲದೆ ಬೇರೆಯಲ್ಲ.ಹೀಗಾಗಿ ಶಾಸಕರ ಮೇಲಿನ ದಾಳಿಯನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ" ಎಂದು ಹೇಳಿದರು.
ನಾಯನಹಳ್ಳಿ ನಾರಾಯಣಸ್ವಾಮಿ ಮಾತನಾಡಿ ಪ್ರಚೋದನೆ ನೀಡಿದ್ದು ನಮ್ಮ ಶಾಸಕರಲ್ಲ ಬದಲಿಗೆ ಕೆಲವೇ ವ್ಯಕ್ತಿಗಳಾಗಿದ್ದಾರೆ. ಉರಿಯೋ ಮನೆಯಲ್ಲಿ ಗಳ ಇರಿದಂತೆ ಬಿಜೆಪಿ-ಜೆಡಿಎಸ್ ಮುಖಂಡರು ಕೂಡ ಪ್ರಚೋದನಕಾರಿ ರಾಜಕಾರಣ ಮಾಡುವುದು ಬಿಡಬೇಕು. ದುರ್ವರ್ತನೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ" ಎಂದು ಎಚ್ಚರಿಕೆ ನೀಡಿದರು.
*
ವಾಲ್ಮೀಕಿ ಸಮುದಾಯದ ಮುಖಂಡ ಗವಿರಾಯಪ್ಪ ಮಾತನಾಡಿ, ಕೆಂಪೇಗೌಡ ಜಯಂತಿಯAದು ಶಾಸಕರು"ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ, ಬಳಿಕ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಬಂದಾಗ ಎಲ್ಲವೂ ಶಾಂತಿಯುತವಾಗಿತ್ತು. ಮೆರವಣಿಗೆಯಲ್ಲಿ ಅವರನ್ನು ಬಿಗಿದಪ್ಪಿಕೊಂಡು ಕುಣಿದಾಡಿದವರೆ ನಂತರದ ಬೆಳವಣಿಗೆಗಳಲ್ಲಿ ಶಾಸಕರ ವಿರುದ್ಧವೇ ಹೋರಾಟ ನಡೆಸಿ ಕ್ರಮಕ್ಕೆ ಆಗ್ರಹಿಸುವುದು, ದೂರು ನೀಡಿರುವುದು ನೋಡಿ ದರೆ ಎಂತಹವರಿಗಾದರೂ ಅನುಮಾನ ಮೂಡುತ್ತದೆ ಎಂದರು. ಕಾರ್ಯಕ್ರಮ ಮುಗಿಸಿ ಶಾಸಕರು ತಮ್ಮ ಕಾರಿನಲ್ಲಿ ತೆರಳುವ ವೇಳೆ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಹೀನಾಯವಾಗಿ ನಿಂದಿಸಿದ ಕಾರಣಕ್ಕೆ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ನಿಜ ಹೇಳಬೇಕೆಂದರೆ ಕೆಂಪೇಗೌಡ ಜಯಂತಿಯಲ್ಲಿ ಅವಮಾನವಾಗಿದ್ದು ಶಾಸಕರಿಗಲ್ಲ, ಬದಲಿಗೆ ನಾಡ ಪ್ರಭು ಕೆಂಪೇಗೌಡರಿಗಷ್ಟೇ" ಎಂದು ಹೇಳಿದರು.
*
ಮಾಜಿನಗರ ಸಭಾ ಸದಸ್ಯ ಶ್ರೀನಿವಾಸ್ ಮಾತನಾಡಿ, "ಶಾಸಕರ ವಿರುದ್ಧ ಪೂರ್ವಯೋಜಿತವಾಗಿ ಗಲಾಟೆ ಸೃಷ್ಟಿಸಲಾಗಿದೆ. ವೇದಿಕೆಯಲ್ಲಿದ್ದವರು ಯಾರೂ ಕೂಡ ಶಾಸಕರ ವಿರುದ್ಧ ಅವಾಚ್ಯವಾಗಿ ಮಾತನಾಡುತ್ತಿದ್ದವರನ್ನು ತಡೆಯಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.ಕೆಂಪೇಗೌಡ ಜಯಂತಿಯ ಗಲಾಟೆ ಮೂಲಕ ಶಾಂತಿಯುತ ಚಿಕ್ಕಬಳ್ಳಾಪುರವನ್ನು ರಾಯಲಸೀಮಾ ಅಥವಾ ಕಡಪದಂತೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ" ಇದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
*
ಬಲಿಜ ಜನಾಂಗದ ಮುಖಂಡ ಡ್ಯಾನ್ಸ್ ಶ್ರೀನಿವಾಸ್ ಮಾತನಾಡಿ, "ಗಲಭೆಗೆ ಪ್ರೋತ್ಸಾಹ ನೀಡಿ ದೊಂಬಿ ಮಾಡಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ದ್ವೇಷ ರಾಜಕೀಯ ಯಾರಿಗೂ ತರವಲ್ಲ. ಹಣ ಕೊಟ್ಟು ಗಲಭೆ ಮಾಡಿಸುವುದು ಯಾವ ರಾಜಕೀಯ.ಸಂಸದ ಸುಧಾಕರ್, ಬಿಜೆಪಿ ಮಾಜಿ ಅಧ್ಯಕ್ಷ ಸಂದೀಪ್‌ರೆಡ್ಡಿ ಇದರ ಹಿಂದಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಗಂಭೀರ ಆರೋಪ ಮಾಡಿದ ಅವರು ಪ್ರಚೋದನೆ ನೀಡುವವರಿಗೆ ಜನರ ಶಾಪ ತಟ್ಟಲಿದೆ. ಯಾರೇ ಆಗಲಿ ಅಂಬೇಡ್ಕರ್ ಜಯಂತಿ ಕೀಳು, ಕೆಂಪೇಗೌಡ ಜಯಂತಿ ಮೇಲು ಎಂಬ ಭೇದಭಾವ ತೋರ ಬಾರದು. ಎಲ್ಲ ಮಹನೀಯರೂ ಸಮಾನರು" ಎಂಬುದನ್ನು ಒಕ್ಕಲಿಗ ಮುಖಂಡರು ಅರಿಯಬೇಕು ಎಂದು ಹೇಳಿದರು.
1989 ನಾನಾಗ 9ನೇ ತರಗತಿಯಲ್ಲಿ ಓದುತ್ತಿದ್ದೆ.ನಮ್ಮ ತಂದೆ ಕಟ್ಟಾ ಜೆಡಿಎಸ್ ಬೆಂಬಲಿಗ. ದೇವೆಗೌಡರು ಚಿಕ್ಕಬಳ್ಳಾಪುರಕ್ಕೆ ಬರುವ ಮಾಹಿತಿ ತಿಳಿದು ತಳಿರು ತೋರಣ ಕಟ್ಟುವಾಗ 11 ಕೆ.ವಿ. ವಿದ್ಯುತ್‌ಗೆ ಕೈತಾಗಿ ಸ್ಥಳದಲ್ಲಿಯೇ ತೀರಿಕೊಂಡರು.ಕಾರ್ಯಕ್ರಮಕ್ಕೆ ಬಂದ ದೇವೇಗೌಡರಿಗೆ ಮಾಹಿತಿ ಇದ್ದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಅವರ ದರ್ಶನ ಪಡೆದು ಕುಟುಂಬಕ್ಕೆ ಧೈರ್ಯ ತುಂಬಬೇಕು ಎಂದು ಅನ್ನಿಸಲೇ ಇಲ್ಲ.ಈಗ ಕೆಂಪೇಗೌಡ ಜಯಂತಿ ಯಲ್ಲಿ ಗಲಭೆ ಮಾಡಿ ಜೈಲು ಸೇರಿರುವವರನ್ನು ಭೇಟಿ ನೀಡಿ ನಿಮ್ಮ ಪರವಾಗಿ ಪಕ್ಷ ಇರಲಿದೆ ಎಂದು ಹೇಳಿದ್ದಾರೆ. ಆವೊತ್ತು ನಮ್ಮ ತಂದೆಗೆ ಯಾಕೆ ಈ ಕೆಲಸ ಮಾಡಲಿಲ್ಲ ಎಂದು ನೊಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಡ್ಯಾನ್ಸ್ ಶ್ರೀನಿವಾಸ್, ಗವಿರಾಯಪ್ಪ, ಸು.ದಾ ವೆಂಕಟೇಶ್, ನಾಯನಹಳ್ಳಿ ನಾರಾಯಣಸ್ವಾಮಿ, ನಾರಾಯಣಮ್ಮ, ಶ್ರೀನಿವಾಸ್, ಕೋಲಾಟ್ಲು ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ, ಇಂಡಿಕಾಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ನಗರಸಭಾ ಸದಸ್ಯ ಮಹಮ್ಮದ್ ಜಾಫರ್, ನಾಗೇಶ್ ರೆಡ್ಡಿ, ಖಲೀಲ್, ತಿಪ್ಪೇನಹಳ್ಳಿ ನಾರಾಯಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.