ಮಂಚೇನಹಳ್ಳಿ: ವಿಕಲಚೇತನರ ಹಕ್ಕುಗಳ ರಕ್ಷಣೆ, ಮೂಲ ಸೌಲಭ್ಯಗಳ ಕಲ್ಪನೆ ಹಾಗೂ ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮಂಚೇನ ಹಳ್ಳಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಕಲಚೇತನರ ಕುಂದುಕೊರತೆಗಳ ಸಭೆ ನಡೆಯಿತು.
ತಾಲೂಕಿನ ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಹಾಗೂ ಸಾರ್ವ ಜನಿಕ ಸ್ಥಳಗಳಲ್ಲಿ ಅಡೆತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ವಿವಿಧ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಆದ್ಯತೆಯ ಮೇರೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಲಾಯಿತು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಅರ್ಹ ವಿಕಲಚೇತನರಿಗೆ ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ಮಂಜೂರು ಮಾಡಬೇಕು. ವಿಕಲ ಚೇತನರ ಕಲ್ಯಾಣಕ್ಕಾಗಿ ಗ್ರಾಮ ಪಂಚಾಯಿತಿಗಳಲ್ಲಿ ನಿಯಮಾನುಸಾರ ಮೀಸಲಿಟ್ಟಿರುವ ಶೇ. 5ರ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಒತ್ತಾಯಿಸಲಾಯಿತು.
ಬಸ್ ನಿಲ್ದಾಣಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು
ತಾಲೂಕಿನ ಬಸ್ ನಿಲ್ದಾಣಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವಂತೆ ಶೌಚಾಲಯ, ರ್ಯಾಂಪ್ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು. ಕಣಗಾನಕೊಪ್ಪಲು ಗ್ರಾಮದ ಬಸ್ ನಿಲುಗಡೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು.
ಸರ್ಕಾರಿ ಸೇವೆ ಸುಲಭವಾಗಿ ಸಿಗಲಿ
ನಾಡಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಿ, ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಆದ್ಯತೆ ನೀಡಬೇಕು. ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರ್ಯಾಂಪ್ ಸೇರಿದಂತೆ ಅಗತ್ಯ ಪ್ರವೇಶ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿಕಲಚೇತನರ ಸ್ವತಂತ್ರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು.
ಇದಲ್ಲದೆ, ವಿಕಲಚೇತನರ ಹಕ್ಕುಗಳು, ಕಾನೂನುಗಳು, ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಗಳನ್ನು ಆಯೋಜಿಸಬೇಕು. ಅರ್ಹರಿಗೆ ಸೌಲಭ್ಯಗಳು ತಲುಪುವಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸ ಲಾಯಿತು.
ಸಮಾನ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿ
ವಿಕಲಚೇತನರು ಸಮಾಜದ ಸಮಾನ ಹಕ್ಕುಗಳನ್ನು ಹೊಂದಿರುವ ಗೌರವಯುತ ನಾಗರಿಕ ರಾಗಿದ್ದು, ಅವರಿಗೆ ಸಮಾನ ಅವಕಾಶಗಳು, ವಸತಿ, ಸುಗಮ ಸಂಚಾರ ಮತ್ತು ಸರ್ಕಾರಿ ಸೇವೆಗಳು ದೊರೆಯಬೇಕು. ಅವರ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸುವುದು ಸಂಬಂಧಪಟ್ಟ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು.
ಮಂಚೇನಹಳ್ಳಿ ತಹಶೀಲ್ದಾರ್ ಪೂರ್ಣಿಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ವಿಕಲಚೇತನರ ಸಂಘಟನೆ (ಕೆವಿಎಸ್) ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯಂ (ಕಣಗಾನ ಕೊಪ್ಪ), ಅಭಿವೃದ್ಧಿ ಯೋಜನೆಗಳ ಅಧಿಕಾರಿ ಶಶಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿ ರವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಕಲಚೇತನರ ಪ್ರತಿನಿಧಿಗಳು ಭಾಗವಹಿಸಿದ್ದರು.
*
ವಿಕಲಚೇತನರ ಹಕ್ಕುಗಳ ರಕ್ಷಣೆ, ಸರ್ಕಾರದ ಸೌಲಭ್ಯಗಳ ಸಮರ್ಪಕ ದೊರಕುವಿಕೆ ಹಾಗೂ ಸ್ವಾಭಿಮಾನದ ಬದುಕಿಗೆ ಅಗತ್ಯವಾದ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ವಿಕಲಚೇತನರ ಸಂಘಟನೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯಂ ತಿಳಿಸಿದರು.