ಚಿಕ್ಕಬಳ್ಳಾಪುರ: ಸಿಂಗಾಟಕದಿರೇನಹಳ್ಳಿ ಗ್ರಾಮದ ದಲಿತ ಬಡ ರೈತರ ಭೂಮಿ ಸಮಸ್ಯೆ ಇತ್ಯರ್ಥ ಪಡಿಸಿ, ಅರಣ್ಯ ಇಲಾಖೆಯ ಕಿರುಕುಳವನ್ನು ತಡೆಯಬೇಕು ಹಾಗೂ ಕಂದಾಯ ಇಲಾಖೆಯ ತಟಸ್ಥ ನೀತಿಯನ್ನು ಖಂಡಿಸಿ ಆ.27ರಂದು ಸಿಂಗಾಟಕದಿರೇನಹಳ್ಳಿ ಸರ್ವೆ ನಂಬರ್ 67ರ ಜಮೀನಿನಲ್ಲಿ ಭೂ ಪ್ರವೇಶ ಚಳುವಳಿ ನಡೆಸಲಾಗುವುದು ಎಂದು ದಲಿತ ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆಯ ಸಂಚಾಲಕ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿ ಹೋಬಳಿಯ ಸಿಂಗಾಟಕದಿರೇನಹಳ್ಳಿ ಗ್ರಾಮದ ದಲಿತರು 1972-73ನೇ ಸಾಲಿನಿಂದ ಅಕ್ರಮ ಸಕ್ರಮ ಕಾಯ್ದೆಯಡಿ ಸರ್ವೆ ನಂಬರ್ 67ರ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ರೈತರ ಬಳಿ ಸಾಗುವಳಿ ಚೀಟಿ ಸೇರಿದಂತೆ ಪೂರಕ ದಾಖಲೆಗಳಿದ್ದರೂ ಅರಣ್ಯ ಇಲಾಖೆ ವಿನಾಕಾರಣ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Chikkaballapur News: ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿರೋಣ: ಪಿ.ಎನ್.ಕೇಶವ ರೆಡ್ಡಿ
ಬಡ ರೈತರಿಗೆ ಭೂಮಿ ನೀಡಬೇಕಾದ ಕಂದಾಯ ಇಲಾಖೆಯೇ ಸಮಸ್ಯೆ ಬಗೆಹರಿಸದೆ ಮೌನ ವಹಿಸಿರುವುದು ಖಂಡನೀಯ. ಅರಣ್ಯ ಹಾಗೂ ಕಂದಾಯ ಇಲಾಖೆಗಳು ದಾಖಲೆಗಳನ್ನು ಸಮಗ್ರ ವಾಗಿ ಪರಿಶೀಲಿಸಿ ದಲಿತ ರೈತರ ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ದರು.
ದಸಂಸ ಹಿರಿಯ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ, ಸರ್ವೆ ನಂಬರ್ 67ರ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆ ದಾಖಲೆಗಳ ಪರಿಶೀಲನೆಯಲ್ಲಿ ಗೊಂದಲ ಉಂಟಾಗಿದ್ದು, ಅದರ ಪರಿಣಾಮ ದಲಿತ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿ ದರು. ಸಮಸ್ಯೆ ಪರಿಹರಿಸುವಂತೆ ಹಲವು ಹಂತಗಳಲ್ಲಿ ಹೋರಾಟ ನಡೆಸಿದ್ದರೂ ಪ್ರಯೋಜನ ವಾಗಿಲ್ಲ. ಧರಣಿ 64ನೇ ದಿನಕ್ಕೆ ಕಾಲಿಟ್ಟಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು.
ಇದೀಗ ಮುಂದಿನ ಹಂತವಾಗಿ ಆಗಸ್ಟ್ 27ರಂದು ಬೆಳಗ್ಗೆ 11 ಗಂಟೆಗೆ ತಿರ್ನಹಳ್ಳಿ ಗ್ರಾಮದಿಂದ ಸಿಂಗಾಟಕದಿರೇನಹಳ್ಳಿಯತ್ತ ತೆರಳಿ ಸರ್ವೆ ನಂಬರ್ 67ರಲ್ಲಿ ಭೂ ಪ್ರವೇಶ ಚಳುವಳಿ ನಡೆಸಲಾಗು ವುದು. ದಲಿತ, ರೈತ, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಚಿಂತಕರು ಹಾಗೂ ಜನಪರ ಸಂಘಟನೆ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ಪರಮೇಶ್, ಬಿ.ಎನ್.ಮುನಿಕೃಷ್ಣಪ್ಪ, ಸಿ.ಜಿ.ಗಂಗಪ್ಪ, ಸಿದ್ದಗಂಗಪ್ಪ, ವೈ.ಶಂಕರ್, ವೆಂಕಟರವಣಪ್ಪ, ಶ್ರೀರಂಗಾಚಾರಿ, ರಾಜಶೇಖರಯ್ಯ, ಟಿ.ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.