ಗೌರಿಬಿದನೂರು: ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವವನ್ನು ನಗರ ಹಾಗೂ ತಾಲ್ಲೂಕಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಖಾಸಗಿ ಶಾಲೆಗಳೂ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಕೆ.ಎಂ. ಅರವಿಂದ್ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ನಾಡು-ನುಡಿ, ಭಾಷೆ ಮತ್ತು ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು.
ಇದನ್ನೂ ಓದಿ:Puneeth Birthday: ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್ ಹಾಕುತ್ತಿದ್ರಂತೆ ಪುನೀತ್ ! ಏನದು?
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಜಿ.ಎಲ್. ಅಶ್ವತ್ಥನಾರಾಯಣ, ಛತ್ರಂ ಶ್ರೀಧರ್ ಸೇರಿದಂತೆ ಕನ್ನಡಪರ ಮುಖಂಡರು, ಕನ್ನಡ ರಾಜ್ಯೋತ್ಸವವು ಸರ್ಕಾರಿ ಕಚೇರಿಗಳು ಮತ್ತು ಸಂಘ-ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಬಾರದು. ಖಾಸಗಿ ಶಾಲೆಗಳಲ್ಲೂ ಕನ್ನಡದ ಇತಿಹಾಸ, ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉಪನ್ಯಾಸ, ಕನ್ನಡ ಗೀತೆಗಳ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಗ್ರಹಿಸಿದರು.
ಪುನೀತ್(Puneet Rajkumar) ಪುತ್ಥಳಿ ಸ್ಥಾಪನೆಗೆ ಒತ್ತಾಯ: ನಗರದ ಪ್ರಮುಖ ವೃತ್ತದಲ್ಲಿ ನಟ ಡಾ.ಪುನೀತ್ ರಾಜ್ಕುಮಾರ್(Dr Puneeth Rajkumar) ಅವರ ಪುತ್ಥಳಿ ಸ್ಥಾಪಿಸಬೇಕು ಎಂದು ಕರವೇ ಮುಖಂಡರು ಒತ್ತಾಯಿಸಿದರು. ಪುನೀತ್ ಅವರ ಸಮಾಜಮುಖಿ ಕಾರ್ಯಗಳು, ಸರಳ ವ್ಯಕ್ತಿತ್ವ ಮತ್ತು ಮಾನವೀಯ ಗುಣಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪುತ್ಥಳಿ ಸ್ಥಾಪನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಆಗ್ರಹ: ನವೆಂಬರ್ ತಿಂಗಳಲ್ಲಿ ನಗರದ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಕೇವಲ ಒಂದು ವಾರ ಕನ್ನಡ ಚಿತ್ರಗಳನ್ನು ಪ್ರದರ್ಶಿಸಿ ನಂತರ ತೆಲುಗು ಚಿತ್ರಗಳಿಗೆ ಆದ್ಯತೆ ನೀಡುವ ಕ್ರಮವನ್ನು ಖಂಡಿಸುವುದಾಗಿ ಕರವೇ ಅಧ್ಯಕ್ಷರು ತಿಳಿಸಿದರು.