ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಎಸ್.ಎಸ್. ಸೂಪರ್ ಫುಡ್ಸ್ ಘಟಕದ ನಿರ್ವಹಣೆ ವಾಪಸ್ ಪಡೆಯಲು ಆಗ್ರಹ; ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಕೆಎಂಎಫ್ ಎಂಡಿ ಭರವಸೆ

ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಪಶು ಆಹಾರ ಘಟಕ ನಿರ್ವಹಣೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎರಡೂ ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಘಟಕದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯಿಂದ ಹಿಂಪಡೆದು ಅವಳಿ ಜಿಲ್ಲೆಗಳ ಹಾಲು ಒಕ್ಕೂಟಗಳಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಚಿಕ್ಕಬಳ್ಳಾಪುರ: ಸಾದಲಿ ಸಮೀಪದ ಎಸ್. ಗೊಲ್ಲಹಳ್ಳಿಯಲ್ಲಿರುವ ಎಸ್.ಎಸ್. ಸೂಪರ್ ಫುಡ್ಸ್ ಪ್ರೈ.ಲಿ. ನಿರ್ವಹಣೆಯ ಕೆಎಂಎಫ್(KMF) ಪಶು ಆಹಾರ ಘಟಕದ ವಿರುದ್ಧ ಶನಿವಾರ ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟ ಮತ್ತು ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ಮತ್ತು ರೈತರು ಬೃಹತ್ ಪ್ರತಿಭಟನೆ ಮಾಡಿ ಕೆಎಂಎಫ್ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಶಿಡ್ಲಘಟ್ಟ ತಾಲೂಕು ಸಾದಲಿ ಹೋಬಳಿ ಎಸ್ ಗೊಲ್ಲಹಳ್ಳಿ ಗ್ರಾಮದಲ್ಲಿರುವ ಕೆಎಂಎಫ್ ಮಾರ್ಗದರ್ಶನದ ಪಶು ಆಹಾರ ಘಟಕ ಪೂರೈಕೆ ಮಾಡುತ್ತಿರುವ ಫೀಡ್ ಕಳಪೆಯಿಂದ ಕೂಡಿದೆ ಇದರಿಂದ ದನಗಳು ಸಾಯುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನೆ ರೈತರು, ಇಲ್ಲಿನ ಪಶು ಆಹಾರ ಪೂರೈಕೆ ಘಟಕದಿಂದ ರೈತರಿಗೆ ಪೂರೈಸಲಾಗುತ್ತಿರುವ ಪಶು ಆಹಾರದಲ್ಲಿ ಎಂ-ಸ್ಯಾಂಡ್ ಮಿಶ್ರಣವಾಗಿದೆ ಎಂದು ಗಂಭೀರ ಆರೋಪ ಮಾಡಿದ ರೈತರು ಸಾದಲಿ ಸಮೀಪದ ಎಸ್. ಗೊಲ್ಲಹಳ್ಳಿಯಲ್ಲಿರುವ ಎಸ್.ಎಸ್. ಸೂಪರ್ ಫುಡ್ಸ್ ಪ್ರೈ.ಲಿ. ನಿರ್ವಹಣೆಯ ಕೆಎಂಎಫ್ ಪಶು ಆಹಾರ ಘಟಕದ ವಿರುದ್ಧ ಶನಿವಾರ ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟ (ಚಿಮುಲ್) ಮತ್ತು ಕೋಲಾರ ಹಾಲು ಒಕ್ಕೂಟ (ಕೋಮುಲ್) ಜಂಟಿಯಾಗಿ ಸಾವಿರಾರು ಮಂದಿ ಸೇರಿ ಬೃಹತ್ ಪ್ರತಿಭಟನೆ ನಡೆಸಿ ರೈತರು ಮತ್ತು ಮೂಕ ಜೀವಿಗಳ ಜೊತೆ ಚೆಲ್ಲಾಟವಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದರು.

ಇದನ್ನೂ ಓದಿ: Chikkaballapur News: ಸಾದಲಿ ಪಶು ಆಹಾರ ಘಟಕದ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಪಶು ಆಹಾರ ಘಟಕ ನಿರ್ವಹಣೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎರಡೂ ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಘಟಕದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯಿಂದ ಹಿಂಪಡೆದು ಅವಳಿ ಜಿಲ್ಲೆಗಳ ಹಾಲು ಒಕ್ಕೂಟಗಳಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಗುಣಮಟ್ಟದ ಪಶು ಆಹಾರ ಪೂರೈಸಬೇಕಾದ ಘಟಕದಲ್ಲೇ ಕಳಪೆ ಆಹಾರ ಸರಬರಾಜಾ ಗುತ್ತಿದೆ ಎಂಬ ಆರೋಪ ಹಾಲು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು, ಘಟಕದ ನಿರ್ವಹಣೆಯನ್ನು ಮರಳಿ ಪಡೆಯಬೇಕು ಹಾಗೂ ರೈತರಿಗೆ ಗುಣಮಟ್ಟದ ಪಶು ಆಹಾರ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಯಿತು.

ಪಶು ಆಹಾರದಲ್ಲಿ ಎಂ-ಸ್ಯಾಂಡ್ ಪತ್ತೆ ಆರೋಪ

ಸಾದಲಿ ಸಮೀಪದ ಎಸ್. ಗೊಲ್ಲಹಳ್ಳಿಯಲ್ಲಿ ಕೆಎಂಎಫ್‌ನಿಂದ ಸಾರ್ವಜನಿಕ-ಖಾಸಗಿ ಸಹಭಾಗಿ ತ್ವದ (ಪಿಪಿಪಿ) ಮಾದರಿಯಲ್ಲಿ ನಿರ್ವಹಿಸಲಾಗುತ್ತಿರುವ ಪಶು ಆಹಾರ ಘಟಕದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪೂರೈಸಿದ ಆಹಾರದಲ್ಲಿ ಎಂ-ಸ್ಯಾಂಡ್ ಇರುವುದನ್ನು ರೈತರು ಗಮನಿಸಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಚಿಮುಲ್, ಕೋಮುಲ್ ಮತ್ತು ಕೆಎಂಎಫ್ ವತಿಯಿಂದ ಪಶು ಆಹಾರದ ಪರಿಶೀಲನೆ ನಡೆಸಿದಾಗಲೂ ಎಂ-ಸ್ಯಾಂಡ್ ಅಂಶ ಕಂಡುಬಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

1369822 KMF

ಈ ಕುರಿತು ಘಟಕದ ನಿರ್ವಹಣೆ ಹೊತ್ತಿರುವವರನ್ನು ಪ್ರಶ್ನಿಸಿದಾಗ ಸಮರ್ಪಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂಬುದು ಒಕ್ಕೂಟಗಳ ಅಸಮಾಧಾನಕ್ಕೆ ಕಾರಣವಾಯಿತು. ಪ್ರತಿಭಟನಾ ವೇದಿಕೆಯಲ್ಲಿ ಪಶು ಆಹಾರದ ಮಾದರಿಯನ್ನು ನೀರಿನಲ್ಲಿ ಕರಗಿಸಿ, ಒಂದು ಕೆ.ಜಿ. ಆಹಾರದಲ್ಲಿ ಕಂಡುಬರುವ ಕಲ್ಲಿನಂತಹ ಕಣಗಳನ್ನು ಪ್ರದರ್ಶಿಸಿ ಆರೋಪದ ಗಂಭೀರತೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸಲಾಯಿತು.

ರೈತರ ಹಿತಕ್ಕಾಗಿ ಸ್ಥಾಪಿಸಿದ ಘಟಕ ಖಾಸಗಿಯವರ ಪಾಲಾಗಿದ್ದೇಕೆ?

ಚಿಮುಲ್ ಅಧ್ಯಕ್ಷ ಮಂಜುನಾಥರೆಡ್ಡಿ ಮತ್ತು ಕೋಮುಲ್ ಅಧ್ಯಕ್ಷ, ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ರೈತರ ಅನುಕೂಲಕ್ಕಾಗಿ ಸಾದಲಿ ಸಮೀಪದಲ್ಲಿ ಅಂದಿನ ಕೋಚಿಮುಲ್ ಮೂಲಕ 26 ಎಕರೆ ಜಮೀನು ಪಡೆಯಲಾಗಿತ್ತು. ಪಶು ಆಹಾರ ಘಟಕ ಸ್ಥಾಪಿಸುವ ಉದ್ದೇಶದಿಂದ ಕೆಎಂಎಫ್‌ಗೆ ಜಮೀನು ನೀಡಲಾಗಿತ್ತು. ಆದರೆ ಘಟಕದ ನಿರ್ವಹಣೆ ಕಷ್ಟಸಾಧ್ಯವೆಂಬ ಕಾರಣ ಮುಂದಿಟ್ಟು ಕೆಎಂಎಫ್, ಸಂಬಂಧಪಟ್ಟ ಹಾಲು ಒಕ್ಕೂಟಗಳ ಅನುಮತಿ ಪಡೆಯದೆ ಆಂಧ್ರಪ್ರದೇಶ ಮೂಲದ ಖಾಸಗಿ ಸಂಸ್ಥೆಗೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ವಹಿಸಿದೆ ಎಂದು ಆರೋಪಿಸಿದರು.

1369821 KMF

ರೈತರಿಗೆ ಗುಣಮಟ್ಟದ ಪಶು ಆಹಾರ ಪೂರೈಸುವುದು ಹಾಲು ಒಕ್ಕೂಟಗಳ ಪ್ರಮುಖ ಜವಾಬ್ದಾರಿ ಯಾಗಿದೆ. ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾದ ಘಟಕದ ನಿರ್ವಹಣೆಯಲ್ಲಿ ಸ್ಥಳೀಯ ಹಾಲು ಒಕ್ಕೂಟಗಳ ಅಭಿಪ್ರಾಯ ಹಾಗೂ ಅನುಮತಿಗೆ ಆದ್ಯತೆ ನೀಡಬೇಕಿತ್ತು. ಆದರೆ ಈ ವಿಚಾರದಲ್ಲಿ ಒಕ್ಕೂಟಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಶು ಆಹಾರ ಸೇವಿಸಿ ಹಸು ಸತ್ತಿದೆ: ರೈತನ ಅಳಲು

ಪ್ರತಿಭಟನೆಯ ವೇಳೆ ಚಿಲಕಲನೇರ್ಪು ಗ್ರಾಮದ ರೈತ ಈಶ್ವರ್ ರೆಡ್ಡಿ ಮಾತನಾಡಿ, ಘಟಕದಿಂದ ಸರಬರಾಜಾದ ಪಶು ಆಹಾರ ಸೇವಿಸಿದ ತಮ್ಮ ಮಾಲೀಕತ್ವದ ಹಸು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದೆ ಎಂದು ಅಳಲು ತೋಡಿಕೊಂಡರು. ಈ ಆರೋಪವು ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿತು. ಪಶು ಆಹಾರದ ಗುಣಮಟ್ಟದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅವಳಿ ಜಿಲ್ಲೆಗಳಿಗೆ ಸ್ವಂತ ಘಟಕದ ನಿರ್ವಹಣೆ ನೀಡಿ

ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, ರಾಜ್ಯದ ರಾಜಾನುಕುಂಟೆ, ಶಿಕಾರಿಪುರ, ಹಾಸನ ಮತ್ತು ಹುಬ್ಬಳ್ಳಿಯಲ್ಲಿ ಕೆಎಂಎಫ್ ಪಶು ಆಹಾರ ಘಟಕಗಳನ್ನು ನಿರ್ವಹಿಸುತ್ತಿದೆ. ಅತಿ ಹೆಚ್ಚು ಹಾಲು ಉತ್ಪಾದಿಸುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರ ಅನುಕೂಲಕ್ಕಾಗಿ ಸಾದಲಿಯಲ್ಲಿ ಸ್ಥಾಪಿಸಿರುವ ಘಟಕವನ್ನು ಸಂಬಂಧಪಟ್ಟ ಹಾಲು ಒಕ್ಕೂಟಗಳೇ ನಿರ್ವಹಿಸು ವಂತಾಗಬೇಕು ಎಂದರು.

1369875

ಸಾದಲಿ ಸಮೀಪದ 26 ಎಕರೆ ಜಮೀನಿನ ಪಹಣಿ, ಖಾತೆ ಮತ್ತು ಮ್ಯುಟೇಷನ್ ಪ್ರಕ್ರಿಯೆಗಳು ಪೂರ್ಣ ಗೊಂಡಿವೆ. ಕೆಎಂಎಫ್ ನಮ್ಮ ಮಾತೃ ಸಂಸ್ಥೆಯಾಗಿದ್ದು, ಅದರೊಂದಿಗೆ ಸಹಕಾರದಿಂದ ಕಾರ್ಯ ನಿರ್ವಹಿಸುವುದೇ ನಮ್ಮ ಉದ್ದೇಶ. 

ಆದರೆ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರಿಗೆ ಪಿಪಿಪಿ ಮಾದರಿಯಲ್ಲಿ ಘಟಕದ ನಿರ್ವಹಣೆ ವಹಿಸಿರುವುದು ಸರಿಯಲ್ಲ. ಪಶು ಆಹಾರದ ಗುಣಮಟ್ಟದ ಕುರಿತು ಅನುಮಾನಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೆಎಂಎಫ್ ಅಧಿಕಾರಿಗಳಿಗೆ ಹತ್ತಾರು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಎಂಡಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ನೇರವಾಗಿ ವೇದಿಕೆಗೆ ಬಾರದೆ ಘಟಕದ ಒಳಗೆ ತೆರಳಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿ, ಕೂಡಲೇ ವೇದಿಕೆಗೆ ಬಂದು ಉತ್ತರ ನೀಡುವಂತೆ ಒತ್ತಾಯಿಸಿದರು.

ನಂತರ ವೇದಿಕೆಗೆ ಬಂದ ಎಂಡಿಗೆ ಚಿಮುಲ್ ಮತ್ತು ಕೋಮುಲ್ ಅಧ್ಯಕ್ಷರು ಹಾಗೂ ನಿರ್ದೇಶಕರು ತಮ್ಮ ಬೇಡಿಕೆಗಳನ್ನು ವಿವರಿಸಿದರು. 

ಈ ವೇಳೆ ರೈತರು ಮತ್ತು ನಿರ್ದೇಶಕರು ಹಲವು ಪ್ರಶ್ನೆಗಳನ್ನು ಮುಂದಿಟ್ಟು, ಘಟಕದ ವಿರುದ್ಧ ಕೈಗೊಳ್ಳುವ ಕ್ರಮಗಳ ಕುರಿತು ಸ್ಪಷ್ಟ ಭರವಸೆ ನೀಡುವಂತೆ ಪಟ್ಟು ಹಿಡಿದರು. 

ಗದ್ದಲದ ನಡುವೆಯೇ ಮನವಿ ಪತ್ರವನ್ನು ಸ್ವೀಕರಿಸಿದ ಎಂಡಿ, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಕೇಳಿ, ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪ್ರಮುಖ ಬೇಡಿಕೆಗಳೇನು?

ಎಸ್.ಎಸ್. ಸೂಪರ್ ಫುಡ್ಸ್ ಪ್ರೈ.ಲಿ.ಗೆ ವಹಿಸಿರುವ ಪಶು ಆಹಾರ ಘಟಕದ ಪಿಪಿಪಿ ನಿರ್ವಹಣಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕು.

ಘಟಕದ ನಿರ್ವಹಣೆಯನ್ನು ಚಿಮುಲ್ ಮತ್ತು ಕೋಮುಲ್‌ಗೆ ವಹಿಸಬೇಕು.

ಕಳಪೆ ಪಶು ಆಹಾರ ಪೂರೈಕೆ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ಕಂಪನಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ಘಟಕದಲ್ಲಿರುವ ಪಶು ಆಹಾರದ ಗುಣಮಟ್ಟ ಪರಿಶೀಲಿಸಿ, ಅಗತ್ಯವಿದ್ದರೆ ದಾಸ್ತಾನನ್ನು ವಶಕ್ಕೆ ಪಡೆಯಬೇಕು.

ರೈತರಿಗೆ ರಾಜಾನುಕುಂಟೆ ಕೆಎಂಎಫ್ ಘಟಕದಿಂದ ಗುಣಮಟ್ಟದ ಪಶು ಆಹಾರ ಪೂರೈಸಬೇಕು.

ಕೆಎಂಎಫ್‌ಗೆ ನೀಡಿರುವ ಜಮೀನಿನ ಬಾಕಿ ಬಾಡಿಗೆಯನ್ನು ಪಾವತಿಸಬೇಕು.

ಪ್ರತಿಭಟನೆಯಲ್ಲಿ ಶಾಸಕ ಬಿ.ಎನ್. ರವಿಕುಮಾರ್(MLA B N Ravikumar), ಚಿಮುಲ್(CHIMUL) ನಿರ್ದೇಶಕರಾದ ಭರಣಿ ವೆಂಕಟೇಶ್, ಊಲವಾಡಿ ಅಶ್ವತ್ಥನಾರಾಯಣ ಬಾಬು, ಕಾಂತರಾಜು, ದಿನೇಶ್, ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ, ಆದಿನಾರಾಯಣರೆಡ್ಡಿ, ಕೋಮುಲ್ ನಿರ್ದೇಶಕ ಕಾಡಿಗಾನಹಳ್ಳಿ ನಾಗರಾಜ್, ಶ್ರೀನಿವಾಸ್, ರಮೇಶ್ ಸೇರಿದಂತೆ ಎರಡೂ ಹಾಲು ಒಕ್ಕೂಟಗಳ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಹಾಗೂ ರೈತರು ಭಾಗವಹಿಸಿದ್ದರು.