ಚಿಂತಾಮಣಿ: ತೀವ್ರ ಬರ ಪರಿಸ್ಥಿತಿಯಿಂದ ಬೆಳೆ ನಷ್ಟ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಕೂಡಲೇ ಪ್ರತಿ ಎಕರೆಗೆ 60 ಸಾವಿರ ರೂಪಾಯಿ ಬರ ಪರಿಹಾರ ನೀಡಬೇಕು ಎಂದು ಕರ್ನಾಟಕ ರೈತ ಸಂಘ ಆಗ್ರಹಿಸಿದೆ.
ಸೋಮವಾರ ನಗರದಲ್ಲಿ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಬೇಡಿಕೆಗಳ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ರಘುನಾಥ್ ರೆಡ್ಡಿ, ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುತ್ತಿರುವ ರೈತರ ಮೇಲೆ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದರು.
ಸಾಲದ ಒತ್ತಡದಿಂದ ಹಲವು ರೈತರು ಗ್ರಾಮಗಳನ್ನು ತೊರೆದು ಬೇರೆಡೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಬ್ಯಾಂಕ್‌ಗಳು ಹಾಗೂ ಖಾಸಗಿ ಸಾಲದಾತರಿಗೆ ಕನಿಷ್ಠ ಒಂದು ವರ್ಷದವರೆಗೆ ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಬರದಿಂದ ಸಂಕಷ್ಟಕ್ಕೊಳಗಾದ ರೈತರ ನೆರವಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ವೆಂಕಟರೆಡ್ಡಿ, ಶಿವರೆಡ್ಡಿ, ಸುಬ್ಬಾರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.