ಗುಬ್ಬಿ: ತಾಲ್ಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಸಿಬ್ಬಂದಿ ಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರ ಗೈರು ಕಂಡು ಬಂತು. ಕೆಲ ಅವ್ಯವಸ್ಥೆ ಪರಿಶೀಲಿಸಿ ಈ ಸ್ಥಳದಲ್ಲಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಬಡವರ ಪಾಲಿನ ಆಸ್ಪತ್ರೆಗೆ ವೈದ್ಯರೇ ಇಲ್ಲವಾದರೆ ರೋಗಿಗಳು ಎಲ್ಲಿ ಹೋಗಬೇಕು. ಖಾಸಗಿ ಆಸ್ಪತ್ರೆಗೆ ಹೋಗುವ ಚೈತನ್ಯ ಇಲ್ಲದ ರೋಗಿಗಳು ಏನು ಮಾಡಬೇಕು. ಇಡೀ ಆಸ್ಪತ್ರೆಗೆ ಒಬ್ಬರೇ ನರ್ಸ್ ಇದ್ದಾರೆ. ಎಲ್ಲಾ ಕೆಲಸ ಅವರೇ ಮಾಡ್ತಾರಾ ಎಂದು ಕ್ಲಾಸ್ ತೆಗೆದುಕೊಂಡರು.
ಇದನ್ನೂ ಓದಿ: ತುಮಕೂರು ಇಬ್ಭಾಗ ಮಾಡಲು ಪಟ್ಟು
ಆಸ್ಪತ್ರೆ ಕಟ್ಟಡಕ್ಕೆ ಮೂರು ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ವಿಳಂಬ ಆಗಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಮಾಹಿತಿ ಪಡೆದ ಅವರು ಅಲ್ಲಿಯೇ ಇದ್ದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥ ಪರಿಶೀಲಿಸಿ ಪಕ್ಕದ ಸರ್ಕಾರಿ ಶಾಲೆಗೆ ತೆರಳಿ ಬೆಳಿಗ್ಗೆ ಮಕ್ಕಳಿಗೆ ಹಾಲು ನೀಡದ ಬಗ್ಗೆ ಪ್ರಶ್ನಿಸಿ ಗರಂ ಆದರು. ನಂತರ ಮಕ್ಕಳ ಶಿಕ್ಷಣ ಗುಣಮಟ್ಟ ಪರಿಶೀಲಿಸಿದರು.
ಕೆಲ ಶಿಕ್ಷಕರಿಗೆ ಸ್ಥಳದಲ್ಲೇ ಕ್ಲಾಸ್ ತೆಗದುಕೊಂಡು ಕನ್ನಡ ಭಾಷೆ ಓದಲು ಕೆಲ ಹುಡುಗರು ಪರದಾಡಿ ದ್ದಾರೆ ಎಂದರೆ ಸಂಬಳ ಯಾಕೆ ನೀಡುತ್ತಾರೆ. ಏನು ಕೆಲಸ ಮಾಡಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿ ದರು. ಹಳ್ಳಿ ಮಕ್ಕಳಿಗೆ ಉತ್ತಮ ಪಾಠ ಪ್ರವಚನ ಮಾಡಲು ಸೂಚಿಸಿ ಆಪ್ತ ಸಹಾಯಕರ ಮೂಲಕ ಬಿಇಓ ಅವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ನಂತರ ಖುದ್ದು ಜಿಲ್ಲಾಧಿಕಾರಿಗಳೇ ಮಕ್ಕಳಿಗೆ ಗಣಿತ ಹಾಗೂ ಇಂಗ್ಲೀಷ್ ಪಾಠ ಮಾಡಿ ತಹಶೀಲ್ದಾರ್ ಅವರಿಗೆ ಸರ್ಕಾರಿ ಶಾಲೆಗಳಿಗೆ ಆಗಾಗ್ಗೆ ಭೇಟಿ ನೀಡಲು ಸೂಚಿಸಿದರು.
ಸ್ಥಳದಲ್ಲಿ ತಹಶೀಲ್ದಾರ್ ಆರತಿ.ಬಿ, ತಾಪಂ ಇಓ ರಂಗನಾಥ್, ಉಪ ತಹಶೀಲ್ದಾರ್ ಆರ್.ಜಿ.ನಾಗಭೂಷಣ್ ಇತರರು ಇದ್ದರು.