ಗೌರಿಬಿದನೂರು: ವಿದ್ಯಾರ್ಥಿಗಳು ಕೇವಲ ವಿದ್ಯಾರ್ಹತೆಗೆ ಸೀಮಿತವಾಗದೆ, ಉದ್ಯೋಗ ಮಾರು ಕಟ್ಟೆಗೆ ಅಗತ್ಯವಾದ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸಂವಹನ ಸಾಮರ್ಥ್ಯವನ್ನು ಬೆಳೆಸಿಕೊಳ್ಳ ಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಸ್. ವೆಂಕಟಾ ಚಲಪತಿ ಸಲಹೆ ನೀಡಿದರು.
ನಗರದ ಹೀರೆಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯೊಂದಿಗೆ ಪ್ರಾಯೋಗಿಕ ಜ್ಞಾನ, ಸಂವಹನ ಕೌಶಲ್ಯ ಹಾಗೂ ಸಂದರ್ಶನ ಎದುರಿಸುವ ಸಾಮರ್ಥ್ಯವೂ ಮುಖ್ಯ. ಯುವಜನರು ಇಂತಹ ಉದ್ಯೋಗ ಮೇಳಗಳ ಸದುಪಯೋಗ ಪಡೆದುಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: Gauribidanur News: ಓಂ ಶಕ್ತಿ ದೇವಾಲಯದಲ್ಲಿ ಆಷಾಢ ಅಮಾವಾಸ್ಯೆ: ಭಕ್ತಿಭಾವದಿಂದ ಅಂಬಲಿ ಕಲಶೋತ್ಸವ
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಮಾತನಾಡಿ, ನೇಮಕಾತಿ ಪ್ರಕ್ರಿಯೆ, ಸಂದರ್ಶನ ಎದುರಿಸುವ ವಿಧಾನ ಹಾಗೂ ಕಂಪನಿಗಳ ನಿರೀಕ್ಷೆಗಳ ಕುರಿತು ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗ ದರ್ಶನ ನೀಡಿದರು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ವರಲಕ್ಷ್ಮಿ ಮಾತನಾಡಿ, ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂದರು.
ಮೇಳದಲ್ಲಿ 15ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸಿದರು. ನೂರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಹಲವು ಅಭ್ಯರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾದರು. ಐಸಿಐಸಿಐ ಬ್ಯಾಂಕ್, ಅಡೆಕ್ಕೊ, ಕೋಟಕ್ ಮಹೀಂದ್ರ ಲೈಫ್ ಇನ್ಸೂರೆನ್ಸ್, ಸ್ಪಂದನಾ ಹಾಗೂ ಟೈಟಾನ್ ಸೇರಿದಂತೆ ವಿವಿಧ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಅಭ್ಯರ್ಥಿಗಳ ಸಂದರ್ಶನ ನಡೆಸಿದರು.
ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ. ಜಗದೀಶ್ ನೇತೃತ್ವದಲ್ಲಿ ನಡೆದ ಮೇಳದಲ್ಲಿ ಪ್ರೊ. ಮನೋಹರ್ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.