ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಪಂಚನೌಕರರ ಸಂಘದ ನೇತೃತ್ವದಲ್ಲಿ ಅ.12ರಂದು ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಲಾಗುವುದು. ಅ.14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್(Freedom Park)ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಡಿ.ಎನ್. ಜಗದೀಶ್ ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ 50 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯಿತಿ ನೌಕರರು ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯದಲ್ಲೂ ನೌಕರರ ಪಾತ್ರ ಮಹತ್ವದ್ದಾಗಿದೆ. ಆದರೆ ಕಡಿಮೆ ವೇತನ ಹಾಗೂ ಸೇವಾ ಭದ್ರತೆಯ ಕೊರತೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ ಎಂದರು.
ಇದನ್ನೂ ಓದಿ: Chikkaballapur News: ಕಲಿಕಾ ಕೇಂದ್ರದಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಮರ್ಪಕ ವೇತನ ಪರಿಷ್ಕರಣೆ ಹಾಗೂ ಸೇವಾ ಭದ್ರತೆ ದೊರೆತಿಲ್ಲ. ಸರ್ಕಾರ 2026ರ ಮೇ 22ರಂದು ಹೊರಡಿಸಿರುವ ಆದೇಶದಂತೆ ವೇತನ ಪರಿಷ್ಕರಣೆ ಹಾಗೂ ವೇತನ ಶ್ರೇಣಿ ನಿಗದಿಪಡಿಸಲು ರಚಿಸಿರುವ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಹೋರಾಟ ಅನಿವಾರ್ಯವಾಗಿದೆ. ಪ್ರತಿಭಟನೆಯಿಂದ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಅನಾನುಕೂಲ ಉಂಟಾದಲ್ಲಿ ಕ್ಷಮೆಯಿರಲಿ. ಉತ್ತಮ ಸೇವೆ ಸಲ್ಲಿಸಲು ನೌಕರರ ಜೀವನಮಟ್ಟವೂ ಸುಧಾರಿಸಬೇಕಿದ್ದು, ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಬೇಡಿಕೆಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.
ಪ್ರಮುಖ ಬೇಡಿಕೆಗಳು:
- ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಪರಿಷ್ಕರಿಸಿ, ಪರಿಷ್ಕೃತ ವೇತನ ಶ್ರೇಣಿ ನಿಗದಿಪಡಿಸಬೇಕು.
- ಸೇವಾ ಹಿರಿತನದ ಆಧಾರದ ಮೇಲೆ ವೇತನ ಹಾಗೂ ವೇತನ ಹೆಚ್ಚಳದ ಆದೇಶ ಜಾರಿಗೊಳಿಸಬೇಕು.
- ಎಲ್ಲ ಗ್ರಾಮ ಪಂಚಾಯಿತಿ ನೌಕರರಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡಬೇಕು.
- ಗ್ರೇಡ್–1 ಗ್ರಾಮ ಪಂಚಾಯಿತಿಗಳಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡಬೇಕು.
- ಗ್ರಾಮ ಸಹಾಯಕರಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು.
- ಗ್ರಾಮ ಪಂಚಾಯಿತಿಗಳ ನೌಕರರಿಗೆ ಸರ್ಕಾರದಿಂದ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸಿ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಸರ್ಕಾರದ ವತಿಯಿಂದಲೇ ಒದಗಿಸಬೇಕು.
ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಿ ಸೇವಾ ಭದ್ರತೆ ಹಾಗೂ ಆರ್ಥಿಕ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸಲಾಗು ವುದು ಎಂದು ಸಂಘದ ಮುಖಂಡರು ಎಚ್ಚರಿಸಿದರು.
ಬಿಲ್ ಕಲೆಕ್ಟರ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರವಿಕುಮಾರ್, ನೀರಗಂಟಿ ಸಂಘದ ರಾಜ್ಯಾ ಧ್ಯಕ್ಷ ರಾಮಕೃಷ್ಣಪ್ಪ, ಗಜೇಂದ್ರ, ಮುರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.