ಚಿಕ್ಕಬಳ್ಳಾಪುರ : ಶಿಸ್ತು ಮತ್ತು ಸಂಯಮ ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸಿನ ಭದ್ರ ಬುನಾದಿಯಾಗಿದ್ದು, ಪದವಿ ಪಡೆದ ಬಳಿಕವೂ ಕಲಿಕೆಯನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ವಿ.ವೆಂಕಟೇಶ್ ಹೇಳಿದರು.
ನಗರದ ಗಾಂಧಿ ಭವನದಲ್ಲಿ ವಿಶ್ವ ವಿವೇಕ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ನಡೆದ ವಿಶ್ವ ವಿವೇಕ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಪರ್ಯಾಯ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಸಾಧನೆ ಮಾಡುವ ಮೂಲಕ ಕಾಲೇಜು ಹಾಗೂ ಜಿಲ್ಲೆಯ ಹೆಸರನ್ನು ಉಜ್ವಲಗೊಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕಮ್ಯುನಿ ಕೇಷನ್ ಸ್ಕಿಲ್ಸ್ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಟ್ರಸ್ಟ್ ಬದ್ಧವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ಆಂಜಿ ಮಾತನಾಡಿ, ಪೋಷಕರ ಕನಸುಗಳನ್ನು ನನಸಾಗಿ ಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು.ಶಿಕ್ಷಣದಿಂದ ಎಲ್ಲವೂ ಸಾಧ್ಯವಾಗಿದ್ದು, ಕಲಿಕೆ ಯನ್ನು ಎಂದಿಗೂ ನಿಲ್ಲಿಸಬಾರದು ಎಂದು ಸಲಹೆ ನೀಡಿದರು.
ಕಾಲೇಜಿನಲ್ಲಿ ವಾರಕ್ಕೊಮ್ಮೆ ವಿಶೇಷ ತರಗತಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲಾಗುತ್ತಿದೆ.ಗ್ರಾಮೀಣ ಪ್ರದೇಶದ ಬಡ ರೈತರು ಹಾಗೂ ಕೂಲಿ ಕಾರ್ಮಿ ಕರ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುತ್ತಿದೆ.ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಅದು ಕಾಲೇಜಿನ ಹೆಮ್ಮೆಯಾಗಲಿದೆ ಎಂದು ಹೇಳಿದರು.
ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷ ಗೊಳ್ಳು ಶ್ರೀನಿವಾಸ್ ಮಾತನಾಡಿ,ಪದವಿ ಶಿಕ್ಷಣದ ಮೂರು ವರ್ಷಗಳು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವ ದ್ದಾಗಿವೆ. ಶಿಕ್ಷಣವಿಲ್ಲದೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ಎಂಬುದು ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಪಠ್ಯಪುಸ್ತಕಗಳ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಹೊಸ ಹೊಸ ವಿಷಯ ಗಳನ್ನು ನಿರಂತರವಾಗಿ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡು, ಪ್ರಾಧ್ಯಾಪಕ ವರ್ಗದ ಸಹಕಾರವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ವಿವೇಕ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಕಾರ್ಯ ದರ್ಶಿ ಸುದರ್ಶನ್ ರೆಡ್ಡಿ,ಆಕಾಶ್ ಪಿಯು ಕಾಲೇಜಿನ ಪ್ರಾಂಶುಪಾಲ ಗಂಗರಾಜು ಇತರರು ಉಪಸ್ಥಿತ ರಿದ್ದರು.