ಚಿಕ್ಕಬಳ್ಳಾಪುರ: ನಗರದ ಪ್ರಮುಖ ಕುಡಿಯುವ ನೀರಿನ ಮೂಲವಾಗಿರುವ ಜಕ್ಕಲಮಡಗು ಜಲಾಶಯದಲ್ಲಿ ಸದ್ಯ ಸುಮಾರು ಮೂರು ತಿಂಗಳ ಅಗತ್ಯಕ್ಕೆ ಸಾಲುವಷ್ಟು ಮಾತ್ರ ನೀರಿನ ಸಂಗ್ರಹ ಉಳಿದಿರುವುದು ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ಮಳೆ ಯಾಗದಿದ್ದರೆ ಕುಡಿಯುವ ನೀರಿನ ಲಭ್ಯತೆ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಪ್ರಕೃತಿಯ ಮಳೆಯನ್ನೇ ಅವಲಂಬಿಸಿರುವ ಜಕ್ಕಲಮಡಗು ಜಲಾಶಯದಲ್ಲಿ ಪ್ರಸ್ತುತ ಲಭ್ಯವಿರುವ ನೀರು ಇನ್ನೂ ಮೂರು ತಿಂಗಳ ಅವಶ್ಯಕತೆಯನ್ನು ಮಾತ್ರ ಪೂರೈಸಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಸಮರ್ಪಕ ಮಳೆಯಾಗದಿದ್ದರೆ ನಗರದ ನೀರು ಪೂರೈಕೆ ನಿರ್ವಹಣೆ ಸವಾಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Chikkaballapur News: ಸಮುದಾಯದ ಸೇವೆಯೇ ನನ್ನ ಜೀವನದ ಧ್ಯೇಯ: ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅಭಿಮತ
ಇದರ ನಡುವೆ ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ನೀರು ಪೂರೈಸುವ ಮುಖ್ಯ ಪೈಪ್‌ಲೈನ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಜು.8ರಿಂದ 13ರವರೆಗೆ ಆರು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಹಾಗೂ ನಗರಸಭೆಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಜಲಾಶಯದ ನೀರು ಲಭ್ಯವಾಗದ ಸಂದರ್ಭದಲ್ಲಿ ನಗರವು ತಾತ್ಕಾಲಿಕವಾಗಿ ಕೊಳವೆಬಾವಿಗಳ ನೀರನ್ನು ಅವಲಂಬಿಸಬೇಕಾಗುವ ಸಾಧ್ಯತೆ ಇದೆ. ಆದರೆ ಅಂತರ್ಜಲದ ಗುಣಮಟ್ಟ ಕುರಿತು ಈಗಾಗಲೇ ಸಾರ್ವಜನಿಕರಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಜಿಲ್ಲಾಡಳಿತ ಮತ್ತು ನಗರಸಭೆಗೆ ಸವಾಲಾಗುವ ಸಾಧ್ಯತೆಯಿದೆ.
![]()
"ಜಕ್ಕಲಮಡಗು ಜಲಾಶಯದಿಂದ ಬರುವ ಕುಡಿಯುವ ನೀರಿನ ಪೈಪ್‌ಲೈನ್ ಬದಲಾವಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜು.8ರಿಂದ 13ರವರೆಗೆ ಒಟ್ಟು ಆರು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಅಗತ್ಯ ನೀರನ್ನು ಮುಂಚಿತ ವಾಗಿ ಸಂಗ್ರಹಿಸಿಕೊAಡು ನಗರಸಭೆಯೊಂದಿಗೆ ಸಹಕರಿಸಬೇಕು."
– ಮನ್ಸೂರ್ ಅಲಿ, ಪೌರಾಯುಕ್ತರು, ಚಿಕ್ಕಬಳ್ಳಾಪುರ ನಗರಸಭೆ.