ಗೌರಿಬಿದನೂರು: ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಮತದಾರರ ಪಟ್ಟಿಯ ತ್ವರಿತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಯಶಸ್ವಿಯಾಗಿ ಸಾಗುತ್ತಿದ್ದು, ಇದುವರೆಗೆ ಶೇ.90.61ರಷ್ಟು ಮತದಾರರ ಗಣಕೀಕರಣ ಪೂರ್ಣಗೊಂಡಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಶಿವಲಿಂಗಯ್ಯ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತಗಟ್ಟೆ ಅಧಿಕಾರಿಗಳು ಸಂಗ್ರಹಿಸಿದ ಮತದಾರರ ಪಟ್ಟಿಗಳನ್ನು ವಿತರಿಸಿ ಅವರು ಮಾತನಾಡಿದರು. 20 ವರ್ಷಗಳ ಬಳಿಕ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ 16, 2026ರ ಮತದಾರರ ಪಟ್ಟಿ ಯಂತೆ ಕ್ಷೇತ್ರದಲ್ಲಿ 2,14,210 ಮತದಾರರಿದ್ದಾರೆ. ಎಲ್ಲರಿಗೂ ಗಣತಿ ನಮೂನೆ ವಿತರಿಸ ಲಾಗಿದ್ದು, ಈ ಪೈಕಿ 2,07,660 (ಶೇ.96.94) ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ತಿಳಿಸಿದರು.
ವಿಶೇಷ ಮತಪಟ್ಟಿ ಪರಿಷ್ಕರಣೆಗಾಗಿ 259 ಬಿಎಲ್‌ಒಗಳನ್ನು ನಿಯೋಜಿಸಲಾಗಿದ್ದು, ಇದುವರೆಗೆ 1,94,093 (ಶೇ.90.61) ಮತದಾರರ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ. ಪರಿಶೀಲನೆ ವೇಳೆ 6,556 ಮೃತರು, 659 ಗೈರು ಹಾಜರಾತಿ, 10,986 ಶಾಶ್ವತ ಸ್ಥಳಾಂತರಗೊಂಡವರು ಹಾಗೂ 1,916 ನಕಲಿ ನೋಂದಣಿಗಳು ಸೇರಿದಂತೆ ಒಟ್ಟು 20,117 ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ ಎಂದು ವಿವರಿಸಿದರು.
ಮತದಾರರ ಪಟ್ಟಿಯಿಂದ ಯಾರಾದರೂ ಕೈಬಿಟ್ಟಿದ್ದರೆ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ರು ಪರಿಶೀಲಿಸಿ ಅಗತ್ಯ ಮಾಹಿತಿ ನೀಡಬಹುದು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಕೆ.ಎಂ. ಅರವಿಂದ್ ಮಾತನಾಡಿ, ಆಗಸ್ಟ್ 8ರವರೆಗೆ ವಿಶೇಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದ್ದು, ಬಿಎಲ್‌ಒಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಎಸ್‌ಐಆರ್ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಸೇರ್ಪಡೆಗೊಳಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ಜಿ.ಕೆ. ಹೊನ್ನಯ್ಯ, ಪೌರಾಯುಕ್ತ ಕೆ.ಜೆ. ರಮೇಶ್, ಚುನಾವಣಾ ಅಧಿಕಾರಿ ವಸಂತಕುಮಾರಿ, ಕಬೀರ್, ಸಂಜೀವ್, ಅಜಯ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.