ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kannada Sahithya Sammelana: ಚಿಂತಾಮಣಿಯಲ್ಲಿ ನ.19, 20 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಶಾಸಕ ಡಾ.ಎಂ.ಸಿ.ಸುಧಾಕರ್ ಘೋಷಣೆ

ವಿವಿಧ ಭಾಷಾವಾರು ಪ್ರಾಂತ್ಯಗಳು,ವಿವಿಧ ಸಂಸ್ಕೃತಿಯ ವೈವಿಧ್ಯಮಯ ಆಚರಣೆಯನ್ನು ದೇಶದಲ್ಲಿ ಕಾಣಬಹುದು. ಆಯಾ ಪ್ರಾಂತ್ಯದ ಭಾಷೆಯ ಬಗ್ಗೆ ಅಭಿಮಾನ ಮತ್ತು ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನದ ಜತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಭಾಷೆಯ ಮೂಲಕ ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ

ಚಿಂತಾಮಣಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahithya Sammelana)ವನ್ನು ನ.19 ಮತ್ತು 20 ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್(MLA Dr M C Sudhakar) ತಿಳಿಸಿದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಮೈದಾನದಲ್ಲಿ ಅಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ(Kannada rajyotsava) ಸಮಾರಂಭದಲ್ಲಿ ಮಾತನಾಡಿದರು.

ವಿವಿಧ ಭಾಷಾವಾರು ಪ್ರಾಂತ್ಯಗಳು,ವಿವಿಧ ಸಂಸ್ಕೃತಿಯ ವೈವಿಧ್ಯಮಯ ಆಚರಣೆಯನ್ನು ದೇಶದಲ್ಲಿ ಕಾಣಬಹುದು. ಆಯಾ ಪ್ರಾಂತ್ಯದ ಭಾಷೆಯ ಬಗ್ಗೆ ಅಭಿಮಾನ ಮತ್ತು ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನದ ಜತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಭಾಷೆಯ ಮೂಲಕ ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Kannada Sahithya Sammelana: 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಮಾಲೋಚನೆ

ಸಾಹಿತ್ಯದಲ್ಲಿ ಪಾಂಡಿತ್ಯ ಪಡೆದ ಮಹಾನುಭಾವರು ರಾಜ್ಯದಲ್ಲಿ ಅನೇಕರಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಲಬಿಸಿವೆ. ಮಾತನಾಡುವ ಶೈಲಿ ಬೇರೆ ಬೇರೆ ಯಾಗಿದದ್ದರೂ, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಮೂಲ ಕನ್ನಡವನ್ನು ಬಳಸಿಕೊಳ್ಳಬೇಕು. ಭಾಷೆಯ ವಿಷಯದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದರು.

ಕರ್ನಾಟಕ ವಿಶೇಷವಾಗಿ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಬೇರೆ ಬೇರೆ ರಾಜ್ಯ ಗಳಿಂದ ಬಂದಿರುವವರು ಕನ್ನಡ ಭಾಷೆಯನ್ನು ಕಲಿಯಬೇಕು. ಜಾಗತಿಕ ಬದಲಾವಣೆಯ ಪರಿಣಾಮ ವಿಶ್ವದ ನಾನಾ ದೇಶಗಳಿಂದ ಬಂದಿರುವ ಜನರು ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಇವುಗಳ ನಡುವೆಯೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ತಿಳಿಸಿದರು.

ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಈ ಕಾರ್ಯಕ್ರಮವನ್ನು ಪಾಲಿಟೆಕ್ನಿಕ್ ಮೈದಾನದಲ್ಲಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮೈದಾನವನ್ನೂ ಅಭಿವೃದ್ಧಿಪಡಿಸಲಾಗುವುದು. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಅತ್ಯುತ್ತಮ ಕ್ರಿಕೆಟ್ ಕ್ರೀಡಾಂಗಣದ ಕಾಮಗಾರಿಯು ಆರಂಭವಾಗಲಿದೆ ಎಂದರು.

ಡಿವೈಎಸ್ಪಿ ರಘು ಮಾತನಾಡಿ ದ್ರಾವಿಡ ಭಾಷೆಗಳಲ್ಲಿ ಕನ್ನಡ ಪ್ರಮುಖ ಭಾಷೆಯಾಗಿದೆ. ಕನ್ನಡ ಭಾಷೆ ಬೆಳವಣಿಗೆಗೆ ಅನೇಕ ಮಹನೀಯರ, ಹೋರಾಟಗಾರರ ಕೊಡುಗೆ ಮಹತ್ವದ್ದಾಗಿದೆ. 1956 ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಗುತ್ತದೆ. 1973 ರ ನವೆಂಬರ್ 1 ರಂದು ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಎಂದು ಬದಲಾವಣೆಯಾಗುತ್ತದೆ. ಕರ್ನಾಟಕದ ದಾಸ ಸಾಹಿತ್ಯ ವಚನ ಸಾಹಿತ್ಯ, ಇತ್ತೀಚಿನ ಬಂಡಾಯ ಸಾಹಿತ್ಯ, ಕರ್ನಾಟಕದ ಏಕೀಕರಣ ಸೇರಿದಂತೆ ಕನ್ನಡ ಸಾಹಿತ್ಯ ಇತಿಹಾಸದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.

ತಹಶೀಲ್ದಾರ್ ಸುದರ್ಶನ ಯಾದವ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ಭಾಷೆ ಯನ್ನು ಕೇವಲ ಶಿಕ್ಷಣ ಮತ್ತು ಆಡಳಿತಕ್ಕೆ ಮಾತ್ರ ಸೀಮಿತಗೊಳಿಸದೆ ವಿಜ್ಞಾನ, ತಂತ್ರಜ್ಞಾನದಲ್ಲೂ ಅಳವಡಿಸಿಕೊಳ್ಳಬೇಕು. ರೈತರ ಸಬಲೀಕರಣ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸಮಾನತೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಅಸಮತೋಲನ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಭಾಷೆ, ಜಾತಿ, ಧರ್ಮ ಮತ್ತು ಪ್ರಾಂತೀಯ ಭೇದವನ್ನು ಮೀರಿ ಸೌಹಾರ್ಧಯುತ, ಸಂವೃದ್ಧ ಹಾಗೂ ಪ್ರಗತಿಪರ ಕರ್ನಾಟವನ್ನು ಕಟ್ಟಬೇಕಾಗಿದೆ. ಭಾರತಾಂಬೆ ನಮ್ಮ ತಾಯಿ, ಕನ್ನಡ ಅದರ ಕೂಸು. ಕನ್ನಡ ನಮ್ಮ ಹೆಮ್ಮೆ,ಗುರುತು, ಹಾಗೂ ಅಸ್ಮಿತೆಯಾಗಿದೆ ಎಂದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಗೃಹರಕ್ಷಕ ದಳ, ಪೊಲೀಸ್ ತಂಡಗಳಿಂದ ಧ್ವಜವಂಧನೆ, ಪಥಸಂಚಲನೆ ನಡೆಯಿತು. ವಿವಿಧ ಕ್ರೀಡಾಕೂಟ ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು, ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಃಣಾಧಿಕಾರಿ ಎಸ್.ಆನಂದ್,ಪೌರಾಯುಕ್ತ ಜಿ.ಎನ್.ಚಲಪತಿ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುನಿನಾರಾಯಣಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಶ್ರೀನಾಥ್,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಅಶೋಕ್,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್,ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.