ಚಿಕ್ಕಬಳ್ಳಾಪುರ: ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ನಿರಂತರ ನಿಗಾ, ತುರ್ತು ಚಿಕಿತ್ಸೆ ಹಾಗೂ ವಿಶೇಷ ಆರೈಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರದ ಹೊರವಲಯದ ಜೈನ್ ಮಿಷನ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಸರ್ಜಿಕಲ್ ಇಂಟೆನ್ಸಿವ್ ಕೇರ್ ಯೂನಿಟ್ (SICU) ಜಿಲ್ಲೆಯ ರೋಗಿಗಳಿಗೆ ಮಹತ್ವದ ಸೌಲಭ್ಯವಾಗಲಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ನರ್ಪತ್ ಸೋಲಂಕಿ ತಿಳಿಸಿದರು.
ಬೆಂಗಳೂರಿನ ಸುಪ್ರಜಿತ್ ಫೌಂಡೇಶನ್ ಹಾಗೂ ಇಂದಿರಾನಗರದ ರೋಟರಿ ಫೌಂಡೇಶನ್ ಇಂಡಿಯಾ ಸಹಯೋಗದಲ್ಲಿ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಸರ್ಜಿಕಲ್ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಸ್ತ್ರಚಿಕಿತ್ಸೆಯ ನಂತರ ರೋಗಿಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಮತ್ತು ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಹಿನ್ನೆಲೆ ಯಲ್ಲಿ ಅತ್ಯಾಧುನಿಕ ಉಪಕರಣಗಳು ಹಾಗೂ ತೀವ್ರ ನಿಗಾ ವ್ಯವಸ್ಥೆ ಹೊಂದಿರುವ ಘಟಕವನ್ನು ಆರಂಭಿಸಲಾಗಿದೆ. ಹೃದಯದ ತೆರೆದ ಶಸ್ತ್ರಚಿಕಿತ್ಸೆ, ಮೆದುಳಿನ ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಸೇರಿದಂತೆ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ರೋಗಿಗಳಿಗೆ ಹಾಗೂ ಇತರ ಪ್ರಮುಖ ಶಸ್ತ್ರ ಚಿಕಿತ್ಸೆಗಳ ನಂತರ ವಿಶೇಷ ಆರೈಕೆ ಅಗತ್ಯವಿರುವವರಿಗೆ ಈ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯ ಜನರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನ ಇಂದಿರಾನಗರದ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಸುಪ್ರಜಿತ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಅಜಿತ್ ರೈ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಎರಡು ಸಂಸ್ಥೆಗಳ ಸಹಕಾರದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. ತೀವ್ರ ನಿಗಾ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳನ್ನು ಸ್ಥಳೀಯ ವಾಗಿಯೇ ಒದಗಿಸುವುದರಿಂದ ರೋಗಿಗಳು ದೂರದ ನಗರಗಳ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ. ಆರ್ಥಿಕವಾಗಿ ಹಿಂದುಳಿದವರಿಗೂ ಅನುಕೂಲವಾಗುವಂತೆ ಈ ಸೌಲಭ್ಯವನ್ನು ರೂಪಿಸಿದ್ದು, ಅಗತ್ಯವಿರುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸರ್ಜಿಕಲ್ ಐಸಿಯುನಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಮೂಲಕ ರೋಗಿಗಳ ಜೀವಚಿಹ್ನೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಎದುರಾಗಬಹುದಾದ ಗಂಭೀರ ತೊಂದರೆಗಳನ್ನು ತ್ವರಿತವಾಗಿ ಗುರುತಿಸಿ ಚಿಕಿತ್ಸೆ ನೀಡಲು ಈ ವ್ಯವಸ್ಥೆ ನೆರವಾಗಲಿದೆ. ತೀವ್ರ ನಿಗಾ ಚಿಕಿತ್ಸೆಯ ಮೂಲಕ ರೋಗಿಗಳ ಚೇತರಿಕೆಗೆ ಸಹಕಾರಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜೈನ್ ಮಿಷನ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಜೈನ್ ಮಾತನಾಡಿ, ನೂತನ ಘಟಕದಲ್ಲಿ ರೋಗಿಗಳಿಗೆ ಉಸಿರಾಟದ ತೊಂದರೆ ಉಂಟಾದಾಗ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಹೃದಯ ಬಡಿತ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಪರಿಶೀಲಿಸಲು ಅವಕಾಶವಿದೆ. ತೀವ್ರ ನಿಗಾ ತಜ್ಞರು, ಶಸ್ತ್ರಚಿಕಿತ್ಸಕರು ಹಾಗೂ ಶುಶ್ರೂಷಾ ಸಿಬ್ಬಂದಿ ರೋಗಿಗಳ ಆರೋಗ್ಯದ ಮೇಲೆ ನಿಗಾ ವಹಿಸಿ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಸಾಮಾನ್ಯ ವೈದ್ಯಕೀಯ ತೀವ್ರ ನಿಗಾ ಘಟಕದಲ್ಲಿ ಹೃದಯಾಘಾತ, ಪಾರ್ಶ್ವವಾಯು ಹಾಗೂ ತೀವ್ರ ಸೋಂಕಿನಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಸರ್ಜಿಕಲ್ ಐಸಿಯು ಮುಖ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಮತ್ತು ಶಸ್ತ್ರಚಿಕಿತ್ಸೆಯ ನಂತರ ವಿಶೇಷ ಮೇಲ್ವಿಚಾರಣೆ ಅಗತ್ಯವಿರುವ ರೋಗಿಗಳ ಆರೈಕೆಗೆ ಮೀಸಲಾಗಿರುತ್ತದೆ. ಇಂತಹ ಘಟಕದ ಆರಂಭದಿಂದ ಈ ಭಾಗದ ಜನರಿಗೆ ಸುಧಾರಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಫೌಂಡೇಶನ್ ಇಂದಿರಾನಗರದ ಅಧ್ಯಕ್ಷ ಗೋಪಿನಾಥ್ ನಾಯಕ್ ಹಾಗೂ ವಿಪಿನ್ ಲಬರೋ ಅವರನ್ನು ಜೈನ್ ಮಿಷನ್ ಆಸ್ಪತ್ರೆಯ ಅಧ್ಯಕ್ಷ ಡಾ. ನರ್ಪತ್ ಸೋಲಂಕಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಭಾಸ್ಕರಮೂರ್ತಿ ಡಿ., ಪಿಯೂಶ್ ಜೈನ್, ಜಗದೀಶ್, ಪಿ.ಎಂ. ಬನ್ಸಾಲಿ, ಸುರೇಶ್ ಹರಿ, ಡಾ. ಕೆ. ಮೇನನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.