ಚಿಕ್ಕಬಳ್ಳಾಪುರ: ಜೂ.27ಕ್ಕೆ ಶ್ರೀಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಡಾ| ಕೆ. ಸುಧಾಕರ್ ಫೌಂಡೇಷನ್ ವತಿಯಿಂದ ಪಿಯುಸಿ, ಪದವಿ, ಸ್ನಾತಕಪದವಿ ವಿದ್ಯಾರ್ಥಿಗಳಿಗೆ 5 ಸಾವಿರ ನಗದು ಪುರಸ್ಕಾರ ನೀಡಿ ಸತ್ಕರಿಸುವ ಮೂಲಕ ಶೈಕ್ಷಣಿಕ ಜೀವನಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ತಿಳಿಸಿದರು.
ನಗರದ ಸಂಸದರ ಗೃಹಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರೋತ್ಸಾಹ ಧನದ ಕ್ಯೂಆರ್ ಕೋಡ್‌ವುಳ್ಳ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶ್ರೀಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಡಾ| ಕೆ. ಸುಧಾಕರ್ ಫೌಂಡೇಷನ್ ವತಿಯಿಂದ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡಿ ಕೊಂಡು ಬರಲಾಗುತ್ತಿದೆ.
ವಿದ್ಯಾರ್ಥಿಗಳ ಮತ್ತು ಯುವಕರ ಶಿಕ್ಷಣ ಗುಣಮಟ್ಟವನ್ನು ವೃದ್ಧಿಗೊಳಿಸುವ ಮತ್ತು ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ನೋಟ್ ಪುಸ್ತಕಗಳು, ಮೆರಿಟ್ ಸ್ಕಾಲರ್‌ಶಿಪ್, ಉನ್ನತ ಶಿಕ್ಷಣಕ್ಕೆ ನೆರವು. ಕೋವಿಡ್ ಸಂದರ್ಭದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದು ಅವರಿಗೆ ನಿರಂತರ ಪೂರ್ಣಾವಧಿಯ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಿ ನೈತಿಕ ಬೆಂಬಲ ನೀಡಲಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಪಿಯು ಉಪನ್ಯಾಸಕ ಸಂಘದ ಚುನಾವಣೆ: ಅಧ್ಯಕ್ಷರಾಗಿ ಡಾ.ಸಿ.ಶಂಕರಪ್ಪ ಪ್ರ.ಕಾರ್ಯದರ್ಶಿ ಮಧುಸೂಧನ್ ಆಯ್ಕೆ
ಕೆ.ವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಚಿಕ್ಕಬಳ್ಳಾ ಪುರವು ಪ್ರತಿಭೆಗೆ, ಸಾಮರಸ್ಯಕ್ಕೆ ಮತ್ತು ಅನುಭಾವಿಗಳಿಗೆ ಹೆಸರಾಗಿದ್ದು, ಜಗದ್ವಿಖ್ಯಾತ ಮಹನೀ ಯರು ಇಲ್ಲಿ ಹುಟ್ಟಿ ಬೆಳೆದಿದ್ದಾರೆ. ಬೌದ್ಧಿಕ ಹಾಗೂ ಅನುಭಾವಿ ಅಂಶಗಳು ನಮ್ಮ ಪರಂಪರೆ ಯಲ್ಲಿವೆ ಎಂದ ಅವರು ಇಲ್ಲಿನ ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಶಿಕ್ಷಣ ಉತ್ತೇಜಿಸುವ ಒಂದು ಭಾಗವಾಗಿ ಡಾ.ಕೆ.ಸುಧಾಕರ್ ಫೌಂಡೇಷನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಅಹರ್ನಿಶಿ ಶ್ರಮಿಸುತ್ತಿದೆ ಎಂದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದ್ವಿತೀಯ ಪಿ.ಯು ಓದುತ್ತಿರುವ ಹಾಗೂ ಉತ್ತೀರ್ಣ ರಾಗಿರುವ ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ, ಬಿ.ಎಡ್, ಬಿ.ಪಿ.ಎಡ್, ಸ್ನಾತ್ತಕೋತ್ತರ ಪದವಿ, ಕಾನೂನು ಶಿಕ್ಷಣ, ಇಂಜಿನಿಯರಿAಗ್ ಹಾಗೂ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ನೆರವಾಗಲು ಪ್ರತಿ ವಿದ್ಯಾರ್ಥಿಗೆ ರೂ.5000 ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ತಮ್ಮ ವಿವರಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.
ಚಿಮುಲ್ ನಿರ್ಧೇಶಕ ಕೆ.ವಿ.ನಾಗರಾಜ್ ಮಾತನಾಡಿ, ಜೂ.27ರಂದು ನಾಡಪ್ರಭು ಕೆಂಪೇಗೌಡರ ಜನ್ಮದಿನದ ಸಮಾರಂಭ ಹಾಗೂ ಡಾ.ಕೆ.ಸುಧಾಕರ್ ಜನ್ಮದಿನವೂ ಅಂದೇ ಇದ್ದು ಅಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಇದೇ ದಿನ ಡಾ.ಕೆ.ಸುಧಾಕರ್ ಫೌಂಡೇಷನ್ ವತಿಯಿಂದ ಬೃಹತ್ ಮೆಗಾ ವೇದಿಕೆಯಲ್ಲಿ ಬೆಳಗ್ಗೆ 9 ರಿಂದ 2 ವರೆಗೆ ಬೃಹತ್ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಮತ್ತು ಸಂಜೆ: 5 ಗಂಟೆಯಿಂದ ವೇದಿಕೆ ಕಾರ್ಯಕ್ರಮದಲ್ಲಿ ಮನರಂಜಿನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ನಾಡಿನ ಹೆಸರಾಂತ ಕಲಾವಿದರು, ಗಾಯನ ಮತ್ತು ನೃತ್ಯ ಪ್ರದರ್ಶನ ಪ್ರಸ್ತುತ ಪಡಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಇರುತ್ತದೆ ಹಾಗೂ ಮುಕ್ತಾಯದ ನಂತರ ಆಗಮಿಸಿರುವ ಸರ್ವರಿಗೂ ಸ್ವಗ್ರಾಮಕ್ಕೆ ತೆರಳಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಯೋಜಿಸಲಾಗಿದೆ. ಫೌಂಡೇಷನ್‌ನ ಅಧ್ಯಕ್ಷರಾದ ಡಾ.ಕೆ. ಸುಧಾಕರ್ ಅವರು ರಕ್ತ ನೀಡುವ ಮೂಲಕ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ರಕ್ತದಾನ ಶಿಬಿರದಲ್ಲಿ ಕನಿಷ್ಠ 1000 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದೆ. ಹೆಚ್ಚು ಸಂಖ್ಯೆಯ ರಕ್ತದಾನಿಗಳು ಆಗಮಿಸಿ ರಕ್ತನೀಡಿ ಸಂಕಷ್ಟದಲ್ಲಿರುವವರನ್ನು ಉಳಿಸಲು ನೆರವಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ ಮುಖಂಡರಾದ ರಾಮಸ್ವಾಮಿ, ನಾರಾಯಣಸ್ವಾಮಿ ಪಾಪುತೇಜ,ಸುಬ್ಬಾರೆಡ್ಡಿ,ಶ್ರೀನಿವಾಸ್, ಅನುಆನಂದ್, ಎಸ್.ಆರ್.ಎಸ್. ದೇವರಾಜ್, ಕೃಷ್ಣಾರೆಡ್ಡಿ ಮತ್ತಿತರರು ಇದ್ದರು.