ಗೌರಿಬಿದನೂರು: ನಗರದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ವಿಚಾರವಾದಿ- ಕರ್ಮ ಯೋಗಿ, ನಾಡೋಜ,ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರ ಮತ್ತು ಭಾರತೀಯ ಜ್ಞಾನಪೀಠ ಪ್ರಶಸ್ತಿಯ ಪುರಸ್ಕೃತರಾದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿಗಳನ್ನು ಒಟ್ಟಿಗೆ ಆಚರಿಸಲಾಯಿತು.
ನ್ಯಾಷನಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ,ತೀರ್ಥ ಶಾಲೆಯ ಅಧ್ಯಕ್ಷ ಪ್ರೊ. ಕೆ.ವಿ.ಪ್ರಕಾಶ್ ಡಾ. ಎಚ್. ಎನ್. ಮತ್ತು ಡಾ. ಮಾಸ್ತಿ ರವರ ಭಾವಚಿತ್ರಗಳಿಗೆ ಪುಷ್ಪ ನಮನ ಮಾಡಿ ಮಾತನಾಡಿದರು.
ಹೆಚ್.ನರಸಿಂಹಯ್ಯ ಅವರು ಸ್ವಾತಂತ್ರ‍್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ, ಬದುಕಿನುದ್ದಕ್ಕೂ ಮೌಢ್ಯದ ವಿರುದ್ಧ ಹೋರಾಡಿದ ಪವಾಡ- ವಿಭೂತಿಪುರುಷರನ್ನು ಬಯಲುಗೊಳಿಸಿದ ವಿಜ್ಞಾನಿ- ಸುಜ್ಞಾನಿ, ಶ್ರದ್ಧೆ, ಪರಿಶ್ರಮ, ಛಲ- ಸ್ವಾಭಿಮಾನದಿಂದ ದುಡಿದು, ನಾಡಿಗೆ ಮಾದರಿಯಾಗಬಲ್ಲ ಶಿಕ್ಷಣ ನೆಲೆಗಳನ್ನು ಕಟ್ಟಿ ಬೆಳೆಸಿದರು ಎಂದರು.
ಇದನ್ನೂ ಓದಿ: Gauribidanur News: ಎಸಿಸಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಜಿಲ್ಲಾಧಿಕಾರಿ ಅವಕಾಶ ನೀಡಬಾರದು : ರಕ್ಷಣಾ ವೇದಿಕೆ ಆಗ್ರಹ
ಡಾ.ಹೆಚ್.ನರಸಿಂಹಯ್ಯನವರ ಸರಳ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ನಾವು ಅಳವಡಿಸಿ ಕೊಳ್ಳಬೇಕು. ಸಾಹಿತ್ಯ ವಿಜ್ಞಾನ, ಶಿಕ್ಷಣ ಮತ್ತು ಲಲಿತ ಕಲೆಗಳಿಗೆ ಇವರು ನೀಡಿರುವ ಕೊಡುಗೆ ಅನನ್ಯವಾಗಿದೆ. ಪ್ರತಿಯೊಂದು ಶಾಲಾ ಕಾಲೇಜು, ಸರ್ಕಾರಿ ಕಚೇರಿ ಮತ್ತುಸಂಘ ಸಂಸ್ಥೆಗಳಲ್ಲಿ ಇವರ ಹುಟ್ಟುಹಬ್ಬವನ್ನು ರಾಜ್ಯಮಟ್ಟದಲ್ಲಿ ಆಚರಿಸಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಎಂ. ಶೋಭಾ ಮಾತನಾಡಿ, ಹೊಸಗನ್ನಡ ಸಾಹಿತ್ಯದ ಮಹಾ ಲೇಖಕರಲ್ಲಿ ಮಾಸ್ತಿಯವರು ಒಬ್ಬರಾಗಿದ್ದಾರೆ. ಶ್ರೀನಿವಾಸ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ನಾಡು-ನುಡಿ, ಸಂಸ್ಕೃತಿಗಾಗಿ ಸಾರ್ಥಕ ಜೀವನ ನಡೆಸಿದ ಮಹನೀಯರು. ಮಾಸ್ತಿ ಕನ್ನಡದ ಆಸ್ತಿ ಎಂದೇ ಖ್ಯಾತಿ ಪಡೆದು ಮನೆ ಮಾತಾಗಿರುವ ಮಾಸ್ತಿ ಭಾರತೀಯ ಸಾಹಿತಿಗಳ ಅಗ್ರ ಪಂಕ್ತಿಗೆ ಸೇರುತ್ತಾರೆ. ಕನ್ನಡದ ಸಣ್ಣ ಕಥೆಗಳ ಜನಕ ಮಾಸ್ತಿಯವರ ಶ್ರೇಷ್ಠ ಕಥೆಗಳು ಭಾರತದ ಕಥಾ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ..ಹೀಗೆ ಅವರ ಸಾಹಿತ್ಯ ಸಾಧನೆಗೆ ಸಂದ ಮನ್ನಣೆಗಳು ಹತ್ತು ಹಲವಾರು. ನಮಗಾಗಿ ಅವರು ಬಿಟ್ಟುಹೋದ ಸಾಹಿತ್ಯರಾಶಿ ಸದಾ ಸ್ಪೂರ್ತಿದಾಯಕ. ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ನೆನಪೇ ನಂದಾದೀಪ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಯವರಾದ ಭಾರ್ಗವಿ, ಸುಜಾತ, ವತ್ಸಲ, ಚಂದ್ರಮ್ಮ, ತಿಮ್ಮಕ್ಕ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.