ಗೌರಿಬಿದನೂರು: ಮಾನವನ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಆತನ ಉನ್ನತಿಗೆ ಶಿಕ್ಷಣವೇ ಅತ್ಯಂತ ಪ್ರಮುಖವಾದ ಶಕ್ತಿಯಾಗಿದೆ ಎಂದು ಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಸಂಕಲ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತೋತ್ಸವದ ಅಂಗವಾಗಿ 2025 - 26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ನಮ್ಮ ಬದುಕಿನಲ್ಲಿ ಜ್ಞಾನ ಮತ್ತು ವಿದ್ಯೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ರಾಮಾಯಣ, ಮಹಾಭಾರತ ಗಳಂತಹ ಮಹಾಕಾವ್ಯಗಳು ನಮಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿವೆ. ಅಂತಹ ಮಹಾನ್ ಗ್ರಂಥಗಳ ಆಶಯ ಮತ್ತು ಶಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಜ್ಞಾನವೆಂಬ ಅಂಧಕಾರವನ್ನು ದೂರವಾಗಿಸಿ ಜ್ಞಾನದ ಬೆಳಕನ್ನು ಪಸರಿಸುವ ಶಕ್ತಿ ಕೇವಲ ಶಿಕ್ಷಣಕ್ಕೆ ಮಾತ್ರ ಇದೆ ಎಂದು ನುಡಿದರು.
ಸಾಮಾಜಿಕ ಕಳಕಳಿಯಿಂದ ನಿರಂತರವಾಗಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸು ತ್ತಿರುವ ಟ್ರಸ್ಟ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ವರ್ಷದ ನೆನಪಿನ ಅಂಗವಾಗಿ, ಶಿಕ್ಷಣದ ಮಹತ್ವವನ್ನು ಸಾರುವ ಇಂತಹ ಮಹೋನ್ನತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಸರ್ವರಿಗೂ ಸುಖ, ಶಾಂತಿ ಮತ್ತು ಸಮೃದ್ಧಿ ಸಿಗಲಿ ಎಂಬ ಆಶಯದೊಂದಿಗೆ ಈ ಸಂಸ್ಥೆಗಳು ಮತ್ತಷ್ಟು ಬೆಳೆಯಲಿ ಎಂದು ಹರಸಿದರು.
ಇದನ್ನೂ ಓದಿ: Chikkaballapur News: ಸರ್ಕಾರಿ ಶಾಲೆಗೇ ಮಕ್ಕಳನ್ನು ದಾಖಲಿಸಿ, ಉತ್ತಮ ಭವಿಷ್ಯ ಕಲ್ಪಿಸಿ: ಉಪನಿರ್ದೇಶಕ ರಮೇಶ್.ವಿ ಮನವಿ
ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್ ಮಾತನಾಡಿ, ಪ್ರತಿಭಾ ಪುರಸ್ಕಾರ ಎಂಬುದು ಕೇವಲ ಒಂದು ಕಾರ್ಯಕ್ರಮವಲ್ಲ; ಅದು ಜ್ಞಾನ, ಪರಿಶ್ರಮ, ಶಿಸ್ತು, ಸಂಸ್ಕಾರ ಮತ್ತು ಸಾಧನೆಯ ಮಹತ್ವ ವನ್ನು ಆಚರಿಸುವ ದಿನವಾಗಿದೆ. ಪ್ರತಿ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಅಪಾರ ಕಷ್ಟ ಮತ್ತು ಪರಿಶ್ರಮ ಅಡಗಿರುತ್ತದೆ. ಈ ಲೋಕದಲ್ಲಿ ಜ್ಞಾನಕ್ಕಿಂತ ಪವಿತ್ರವಾದದ್ದು ಮತ್ತೊಂದಿಲ್ಲ, ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕಗಳ ಸ್ಪರ್ಧೆ, ತಂತ್ರಜ್ಞಾನ, ಮೊಬೈಲ್, ಸಾಮಾಜಿಕ ಜಾಲತಾಣಗಳು ಹಾಗೂ ಮಾನಸಿಕ ಒತ್ತಡಗಳ ನಡುವೆ ಬೆಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣವು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಮೌಲ್ಯಾಧಾರಿತ, ಕೌಶಲ್ಯಾಧಾರಿತ ಹಾಗೂ ಜೀವನಾಧಾರಿತವಾಗಿರಬೇಕು ಹಾಗೂ ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಆಚಾರ, ವಿಚಾರ, ಶಿಸ್ತು, ಮಾನವೀಯತೆ ಹಾಗೂ ದೇಶಭಕ್ತಿಯಲ್ಲಿಯೂ ಮುಂಚೂಣಿಯಲ್ಲಿರಬೇಕು.
ಈ ಪ್ರಶಸ್ತಿ ನಿಮ್ಮ ಪರಿಶ್ರಮದ ಅಂತ್ಯವಲ್ಲ. ಬದಲಿಗೆ, ಇದು ನಿಮ್ಮ ಮೇಲಿರುವ ಜವಾಬ್ದಾರಿಯ ಆರಂಭ ಎಂಬುದನ್ನು ಮರೆಯಬಾರದು. ನಿಮ್ಮ ಸಾಧನೆ ನಿಮ್ಮ ಸುತ್ತಮುತ್ತಲಿನ ಹಾಗೂ ನಿಮ್ಮ ಗ್ರಾಮದ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ಸಂಕಲ್ಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಾಂತರಾಜು.ಸಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಭೌತಿಕ ಆಸ್ತಿ, ಅಂತಸ್ತು, ಚಿನ್ನಾಭರಣಗಳಿಗಿಂತ ಜನ್ಮ ನೀಡಿದ ಪೋಷಕರೇ ಅತ್ಯಂತ ಅಮೂಲ್ಯ, ಪ್ರತಿಯೊಬ್ಬರು ತಾವು ಈ ಜಗತ್ತಿಗೆ ಬರಲು ಕಾರಣರಾದ ಪೋಷಕರನ್ನು ಸ್ಮರಿಸಬೇಕು. ಇಂದು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ನಿಂತಿದ್ದರೆ ಅದಕ್ಕೆ ನನ್ನ ಪೋಷಕರೇ ಕಾರಣ. ವಿದ್ಯಾರ್ಥಿ ಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಜೀವನದಲ್ಲಿ ಶಿಸ್ತು ಮತ್ತು ಛಲವನ್ನು ರೂಢಿಸಿ ಕೊಂಡಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ.
ಇದೇ ವೇಳೆ, ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಪ್ರೊ.ಹರಿರಾಮ್, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಬೈರೇಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್, ದಲಿತ ಒಕ್ಕೂಟಗಳ ಅಧ್ಯಕ್ಷ ಎಂ.ಆರ್.ಸತ್ಯನಾರಾಯಣ, ವಕೀಲ ನರಸಿಂಹರೆಡ್ಡಿ, ಬಿ.ಕೆ.ನರಸಿಂಹಮೂರ್ತಿ, ಸನಂದಪ್ಪ, ಹಾಲಗಾನಹಳ್ಳಿ ಗಂಗಾಧರಪ್ಪ, ಕೆ.ವಿ.ಪ್ರಕಾಶ್, ರಾಮಾಂಜಿ ನಪ್ಪ, ಬಾಲಯ್ಯ, ಲಕ್ಷ್ಮೀನಾರಾಯಣ, ಕದಿರಪ್ಪ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.