ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Mohan Alva: ಆರ್ಥಿಕ, ಶೈಕ್ಷಣಿಕ ಅಸಮಾನತೆ ನಿವಾರಣೆ ತುರ್ತು ಅಗತ್ಯ: ಡಾ. ಮೋಹನ್ ಆಳ್ವ

ಆರೋಗ್ಯ ಕ್ಷೇತ್ರ ವ್ಯಾಪಾರದ ಕೇಂದ್ರವಾಗುತ್ತಿರುವುದು ಕಳವಳಕಾರಿ ಸಂಗತಿ. ಚಿಕಿತ್ಸೆಯ ಹೆಸರಿನಲ್ಲಿ ಜನರಿಂದ ಅಪಾರ ಹಣ ವಸೂಲಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ: ಅಪಾರ ಯುವ ಸಂಪತ್ತು ಹೊಂದಿರುವ ಭಾರತದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಯ ಕಂದಕವನ್ನು ನಿವಾರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ(Dr Mohan Alva) ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 1,500 ವಿಶ್ವ ವಿದ್ಯಾಲಯಗಳು, 50 ಸಾವಿರಕ್ಕೂ ಅಧಿಕ ಕಾಲೇಜುಗಳು ಹಾಗೂ ಕೋಟ್ಯಂತರ ವಿದ್ಯಾರ್ಥಿಗಳಿ ದ್ದರೂ ಸಾಮಾಜಿಕ ಅಸಮಾನತೆ ನಿವಾರಣೆಯಾಗದಿರುವುದು ವಿಷಾದನೀಯ ಎಂದರು.

ಸಮಾಜದಲ್ಲಿನ ಅಸಮಾನತೆಯ ಕಂದಕ ಹೋಗಲಾಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಮಾಜದ ಸಮಸ್ಯೆಗಳನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ಇರಬಾರದು ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ; ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ

ಆರೋಗ್ಯ ಕ್ಷೇತ್ರ ವ್ಯಾಪಾರದ ಕೇಂದ್ರವಾಗುತ್ತಿರುವುದು ಕಳವಳಕಾರಿ ಸಂಗತಿ. ಚಿಕಿತ್ಸೆಯ ಹೆಸರಿನಲ್ಲಿ ಜನರಿಂದ ಅಪಾರ ಹಣ ವಸೂಲಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣದಲ್ಲಿ ಪರಾವಿದ್ಯೆಗೂ ಆದ್ಯತೆ ಅಗತ್ಯ: ಸದ್ಗುರು

ಶಿಕ್ಷಣದ ಜವಾಬ್ದಾರಿ ಕೇವಲ ಸರ್ಕಾರಕ್ಕೆ ಸೀಮಿತವಾಗಬಾರದು. ಧಾರ್ಮಿಕ ಸಂಸ್ಥೆಗಳು, ಮಠಗಳು ಹಾಗೂ ವಿವಿಧ ಸಂಘಟನೆಗಳೂ ಶಿಕ್ಷಣದ ವಿಸ್ತರಣೆಗೆ ಕೈಜೋಡಿಸಬೇಕು ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಶಿಕ್ಷಣವು ಲೌಕಿಕ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಭಾರತೀಯ ಮೌಲ್ಯಗಳು, ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಪರಂಪರೆಯ ಪರಿಚಯವನ್ನೂ ಒಳಗೊಂಡಿರಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಲೌಕಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರು ವುದು ಶ್ಲಾಘನೀಯ ಎಂದರು.

16cbpm4k alva

ಭಾರತೀಯ ನೃತ್ಯ, ಸಂಗೀತ, ಚಿತ್ರಕಲೆ ಸೇರಿದಂತೆ ಪ್ರತಿಯೊಂದು ಸಾಂಸ್ಕೃತಿಕ ಕಲೆಯ ಹಿಂದಿರುವ ಆಧ್ಯಾತ್ಮಿಕ ತತ್ವಗಳನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ತಿಳಿಸಿದರು.

ವಿವೇಚನೆ ಬೆಳೆಸಲು ಸರಸ್ವತಿಯ ಅನುಗ್ರಹ ಅಗತ್ಯ

ಶೃಂಗೇರಿಯ ಋತ್ವಿಜರ ತಂಡದಿಂದ ಮೇಧಾ ದಕ್ಷಿಣಾಮೂರ್ತಿ ಯಾಗ ಹಾಗೂ ಸರಸ್ವತಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಋತ್ವಿಜ ವಿದ್ವಾನ್ ವಿಕ್ರಮ್ ಭಟ್, ವಿವೇಚನಾಶಕ್ತಿಯನ್ನು ಕಳೆದುಕೊಂಡರೆ ಮಾನವ ಜನ್ಮದ ಸಾರ್ಥಕತೆ ಕುಂದುತ್ತದೆ. ಮನುಷ್ಯನಲ್ಲಿನ ಜಡತ್ವವನ್ನು ದೂರಮಾಡಿ ವಿವೇಕವನ್ನು ಜಾಗೃತಗೊಳಿಸಲು ಸರಸ್ವತಿ ದೇವಿಯ ಅನುಗ್ರಹ ಅಗತ್ಯ ಎಂದು ಹೇಳಿದರು. ಜ್ಞಾನ ಮತ್ತು ಅನ್ವೇಷಣೆಯ ಹಾದಿಯಲ್ಲಿ ಶಕ್ತಿ ನೀಡುವ ಮೇಧಾ ದಕ್ಷಿಣಾಮೂರ್ತಿ ಯಾಗದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.

ನ.25ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

ಮುದ್ದೇನಹಳ್ಳಿಯಲ್ಲಿ ನವೆಂಬರ್ 25ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಡಾ. ಮೋಹನ್ ಆಳ್ವ ತಿಳಿಸಿದರು.

500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಾಸ್ತ್ರೀಯ ಹಾಗೂ ಜನಪದ ಕಲಾಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅ.17ರಂದು ಲಕ್ಷ್ಮೀ ನರಸಿಂಹ ಹೋಮ

ನವರಾತ್ರಿ ಉತ್ಸವದ ಏಳನೇ ದಿನವಾದ ಅ.17ರಂದು ಸತ್ಯಸಾಯಿ ಗ್ರಾಮದ ಯಾಗಶಾಲೆಯಲ್ಲಿ ಬೆಳಿಗ್ಗೆ 7.30ರಿಂದ ಲಕ್ಷ್ಮೀ ನರಸಿಂಹ ಹೋಮ ಹಾಗೂ ಗಾಯತ್ರಿ ಹೋಮ ನಡೆಯಲಿದೆ.

ಸಂಜೆ 4 ಗಂಟೆಗೆ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಚಂಡಿಕಾ ಪಾರಾಯಣ ಹಾಗೂ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ನೃತ್ಯ ಕಲಾವಿದೆ ಸೋನಲ್ ಮಾನ್ ಸಿಂಗ್ ಅವರ ತಂಡದಿಂದ ‘ನಾಟ್ಯಕಥಾ’ ಕಾರ್ಯಕ್ರಮ ನಡೆಯಲಿದೆ.