ಚಿಕ್ಕಬಳ್ಳಾಪುರ : ಸರಕಾರಿ ಶಾಲೆಗಳಲ್ಲಿ ಅರ್ಹತೆಯುಳ್ಳ ಗುಣಮಟ್ಟದ ಶಿಕ್ಷಕರು, ಮೂಲಭೂತ ಸೌಕರ್ಯಗಳು ಸೇರಿದಂತೆ ಕಲಿಕೆಗೆ ಪೂರಕವಾದ ವಾತಾವರನ ಇರುವ ಕಾರಣ ಜಿಲ್ಲೆಯ ಪೋಷಕರು ತಪ್ಪದೆ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಮಾತ್ರ ದಾಖಲಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ವಿ.ರಮೇಶ್ ಮನವಿ ಮಾಡಿದರು.
ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಎಲ್ಲಾ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಲಾಗುತ್ತಿದೆ.ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳ ಅನಾವರಣಕ್ಕಾಗಿ ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ ಮತ್ತು ಕಲೋತ್ಸವ ಕಾರ್ಯಕ್ರಗಳು, ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಗಳನ್ನು ನಡೆಸುವ ಮೂಲಕ ಸರ್ಕಾರಿ ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸಲಾಗುತ್ತಿದೆ. ಆಸಕ್ತ ಹಳೆಯ ವಿದ್ಯಾರ್ಥಿಗಳು, ದಾನಿಗಳು ಹಾಗೂ ಎನ್.ಜಿ.ಓ ಗಳು ಶಾಲೆಗಳನ್ನು ದತ್ತು ಪಡೆದು ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆ ಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ರಚಿಸಿ ಸಕ್ರಿಯಗೊಳಿಸಲಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು
ಜಿಲ್ಲೆಯ ಸರ್ಕಾರಿ ಶಾಲೆಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.
ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸೃಜನಾತ್ಮಕವಾದ ಗುಣ ಮಟ್ಟ ಶಿಕ್ಷಣ ನೀಡುವ ಜೊತೆಗೆ ಉಚಿತವಾಗಿ ವಿಶೇಷ ಸೌಲಭ್ಯಗಳನ್ನು ನೀಡುತ್ತಿವೆ. ಈ ಅಂಶ ಗಳನ್ನು ಮನವರಿಕೆ ಮಾಡಿಕೊಡಲು ಸಾರ್ವಜನಿಕವಾಗಿ ದಾಖಲಾತಿ ಆಂದೋಲನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವುದರಿಂದ ಸಿಗುವ ವಿಶೇಷ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿ ಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸುವಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.
10ರ ಒಳಗಿನ ಅಚ್ಚರಿ ಫಲಿತಾಂಶದ ಭರವಸೆ !!!
ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಲಾಗಿದ್ದು 10ರ ಒಳಗೆ ಸ್ಥಾನ ಬರುವ ನಿರೀಕ್ಷೆಯಿಟ್ಟುಕೊಳ್ಳಲಾಗಿದೆ.ಈ ಬಾರಿ ಜಿಲ್ಲೆಯಲ್ಲಿ 56 ಪರೀಕ್ಷಾ ಕೇಂದ್ರ ಗಳಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಸಲಾಗಿದೆ.ಸರಕಾರಿ, ಅನುದಾನಿತ ಅನುದಾನರಹಿತ ಹೀಗೆ 15021 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈಗಾಗಲೇ ಮೌಲ್ಯಮಾಪನವೂ ಮುಗಿದಿದೆ. ಕಳೆದ ಬಾರಿ 22ನೇ ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶವಿತ್ತು.
ಇದನ್ನು ಮನಗಂಡು ಶಿಕ್ಷಕರನ್ನು ಹುರಿದುಂಬಿಸಿ, ಬಹಳ ತಯಾರಿ ಮಾಡಿಕೊಂಡು ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗೂ ಮೊದಲು ಜಿಲ್ಲೆಯ ಎಲ್ಲಾ 111 ಸರಕಾರಿ ಪ್ರೌಢಶಾಲೆಗಳಿಗೆ ಪದೇ ಪದೇ ಭೇಟಿ ನೀಡಿ, ಉತ್ತೇಜನ ನೀಡಿ ಮಕ್ಕಳ ಕಲಿಕೆಯ ಸಮರ್ಪಕವಾಗಿರುವಂತ ನೋಡಿಕೊಳ್ಳಲಾಗಿದೆ.
ಈ ಬಾರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹಕಾರದಲ್ಲಿ ಇಲಾಖಾ ಮಾರ್ಗಸೂಚಿಗಳನ್ವಯ ವೆಬ್ ಕ್ಯಾಸ್ಟಿಂಗ್ ನೆರವಿನಲ್ಲಿ ಎಲ್ಲೂ ಲೋಪವಾಗದಂತೆ ಪರೀಕ್ಷೆ ನಡೆಸಲಾಗಿದೆ. 3 ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದು ಮೊದಲ ಪರೀಕ್ಷೆಯಲ್ಲಿ ಶೇ.74, ಎರಡನೇ ಪರೀಕ್ಷೆಯಲ್ಲಿ-85, ಮೂರನೇ ಪರೀಕ್ಷೆ 89ರಷ್ಟು ಫಲಿತಾಂಶ ದಾಖಲಿಸಿದೆ. ಇದರ ಜತೆಗೆ 3 ಎಕ್ಸಾಂ ಪೇಪರ‍್ಸ್, 4 ಮಾಡೆಲ್ ಪೇಪರ್‌ಗಳನ್ನು ಬೋರ್ಡ್ʼನಿಂದ ಒದಗಿಸಲಾಗಿದ್ದು ಉಪಯುಕ್ತ ವಾಯಿತು. ಇವೆಲ್ಲಾ ಕಾರಣವಾಗಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದರು.
ಜನಪ್ರತಿನಿಧಿಗಳ ಬೆಂಬಲವಿದೆ
ಶಾಸಕ ಪ್ರದೀಪ್ ಈಶ್ವರ್ 2 ಸಾವಿರ ಮಕ್ಕಳಿಗೆ ಮೋಟಿವೇಷನಲ್ ಕ್ಲಾಸ್ ನೀಡಿ ಮಕ್ಕಳಲ್ಲಿ ಸಾಧಿಸುವ ಛಲ ತುಂಬಿದ್ದಾರೆ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಭೆಗಳನ್ನು ನಡೆಸಿ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಶಿಡ್ಲಘಟ್ಟ ಶಾಸಕರು ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಇದೇ ರೀತಿ ಸಚಿವರು, ಗೌರಿಬಿದನೂರು ಶಾಸಕರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
16 ಶಾಲೆಗಳಲ್ಲಿ ಬೇಸಿಗೆ ಶಿಬಿರ
ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವಂತೆ ಪೋಷಕರ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯ 16 ಸರಕಾರಿ ಶಾಲೆಗಳಲ್ಲಿ 1700 ಮಕ್ಕಳನ್ನು ಒಳಗೊಂಡAತೆ ಬೇಸಿಗೆ ಶಿಬಿರವನ್ನು ಕೂಡ ಆಯೋಜಿಸಲಾಗಿದೆ. ಇಲ್ಲಿ ಬರುವ ಮಕ್ಕಳಿಗೆ ಹಾಡು, ಕುಣಿತ, ಡ್ರಾಯಿಂಗ್,ಕ್ಲೇ ಮಾಡೆಲಿಂಗ್ ಇತ್ಯಾದಿ ಕಲಿಸಿಕೊಡಲಾಗುವುದು.
ಏ.22ರಿಂದ ದಾಖಲಾತಿ ಆಂದೋಲನವನ್ನು ಹಬ್ಬದ ಮಾದರಿಯಲ್ಲಿ ನಡೆಸಲು ಕೂಡ ತೀರ್ಮಾನಿಸಲಾಗಿದೆ. ಉದ್ದೇಶ ಸರಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಸೆಳೆಯುವುದೇ ಆಗಿದೆ ಎಂದು ತಿಳಿಸಿದರು.