ಚಿಕ್ಕಬಳ್ಳಾಪುರ: ಸಾಹಿತ್ಯದ ನವರತ್ನಗಳಲ್ಲಿ ಒಬ್ಬರಾದ ಡಿ.ವಿ.ಗುಂಡಪ್ಪ ಅವರು ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದರೂ ಅವರ ಪ್ರತಿಭಾ ಸಂಪತ್ತು ಶ್ರೀಮಂತವಾಗಿತ್ತು. ಅವರ ಸಾಹಿತ್ಯದಲ್ಲಿ ಕಾವ್ಯ ತತ್ವ, ಸಿದ್ಧಾಂತ ಸೂತ್ರ, ಕಾವ್ಯ ಪರಂಪರೆ, ಆಧುನಿಕತೆ ಮತ್ತು ವಿಜ್ಞಾನಗಳನ್ನು ಒಳಗೊಂಡ ಸಮನ್ವಯತೆ ಕಾಣಬಹುದು. ಉನ್ನತ ಶಿಕ್ಷಣ ಪಡೆಯದಿದ್ದರೂ ಅವರ ಪ್ರತಿಭೆ ಶ್ರೀಮಂತಿಕೆ ವಿಶ್ವ ಮಾನ್ಯವಾಗಿತ್ತು ಎಂದು ಡಾ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ನಡೆದ ಡಿವಿಜಿ ಸಂಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ಜನಿಸಿದ ಡಿವಿಜಿ ಅಪಾರ ಶಿಸ್ತಿಗೆ ಹೆಸರಾದ ಸಾತ್ವಿಕ ವ್ಯಕ್ತಿತ್ವದವರು. ಅವರ ಬದುಕಿನಲ್ಲಿ ಎಂದಿಗೂ ಹಣಕ್ಕೆ ಮಹತ್ವ ನೀಡದೆ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ಸಮಾಜ ಸುಧಾರಣೆಗಾಗಿ ಇಡೀ ಜೀವನ ಮುಡುಪಾಗಿಟ್ಟ ವರು’ ಎಂದರು.
ಡಿವಿಜಿ ಅವರು ಶ್ರೇಷ್ಟ ಕವಿ, ಚಿಂತಕ ವಿಮರ್ಶಕ, ಅನುವಾದಕರಷ್ಟೇ ಆಗಿರಲಿಲ್ಲ ಬದಲಿಗೆ ಶ್ರೇಷ್ಟ ಪತ್ರಕರ್ತರೂ ಆಗಿದ್ದ ಬಹುಮುಖ ಪ್ರತಿಭೆಯ ಮೇರು ಶಿಖರವಾಗಿದ್ದರು. ಅವರು ಬರೆದ ಮಂಕು ತಿಮ್ಮನ ಕಗ್ಗವು ಕನ್ನಡ ಸಾರಸ್ವತ ಲೋಕದಲ್ಲಿ ಸಾರ್ವಕಾಲಿಕವಾದ ಮೇರುಕೃತಿ. ಈ ಕೃತಿಯು ಬದುಕಿಗೆ ದಾರಿದೀಪವಾಗಿದೆ.’ ಡಿವಿಜಿ 95 ಕನ್ನಡ ಕೃತಿಗಳು 40 ಇಂಗ್ಲೀಷ್ ಕೃತಿಗಳು, ೪೦ ಅವರಿವರ ಮೇಲೆ ಕೃತಿಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಡಿ.ವಿ. ಗುಂಡಪ್ಪನವರನ್ನು ಆಧುನಿಕ ಕನ್ನಡ ಸಾಹಿತ್ಯದ ನವರತ್ನಗಳಲ್ಲಿ ಒಬ್ಬರೆಂದು ಯು.ಆರ್. ಅನಂತಮೂರ್ತಿ ಕರೆದಿರುವುದು ಸರಿಯಾಗಿಯೇ ಇದೆ.ಕನ್ನಡ ಗದ್ಯಕ್ಕೊಂದು ಅನನ್ಯ ಸೊಗಸು ತಂದ ಡಿವಿಜಿ ಇದ್ದಿದ್ದರೆ ಅವರು ಪ್ರತಿಪಾದಿಸಿದ ವಿಚಾರ, ನಡೆದು ಹೋದ ದಾರಿ-ಎರಡೂ ಧೀಮಂತ ಮತ್ತು ಉದಾರ ಎಂದರು.
‘ಆರಿಸಿದ ಯಾವುದೇ ಗುಂಪಿನ ಉಲ್ಲಾಸವಂತ ಸದಸ್ಯ’ ಎಂದು ಮಾಸ್ತಿಯವರು ಡಿವಿಜಿ ಬಗೆಗೆ ಹೇಳಿದ್ದಾರೆ. ಡಿವಿಜಿ ವ್ಯಕ್ತಿತ್ವವೇ ಎಲ್ಲರೊಡನೆ ಬೆರೆಯುವಂಥದು. ಭಾರತ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದರು. ಅಭಿಪ್ರಾಯ ಸ್ವಾತಂತ್ರ್ಯದ ಅಗತ್ಯವನ್ನು ಎಲ್ಲ ಕಾಲದಲ್ಲೂ ಎತ್ತಿ ಹಿಡಿದು ಬೆಂಗಳೂರಿನ ಇಂಗ್ಲಿಷ್ ರೆಸಿಡೆಂಟರ ಕೋಪಕ್ಕೆ ಗುರಿಯಾಗಿದ್ದರು ಸಾಹಿತಿ ಡಿವಿಜಿ.
ಪೋಲೆಪಲ್ಲಿ ಚಿನ್ನಪ್ಪಶೆಟ್ಟಿ, ಸೊಣ್ಣೇಗೌಡ, ಕಾಷ್ಠಿ ಹೈದರ್‌ಸಾಬ್ ಅವರೊಂದಿಗೆ ಬೆರೆತಂತೆಯೇ ಮಿರ್ಜಾ ಇಸ್ಮಾಯಿಲ್, ಸರ್.ಎಂವಿ, ರೈಟ್ ಆನರಬಲ್, ಶ್ರೀನಿವಾಸ ಶಾಸ್ತ್ರಿ ಮೊದಲಾದವರೊಂದಿಗೆ ಚರ್ಚೆ ನಡೆಸುವ ಸಂವಾದ ಕುಶಲಿಗಳಾಗಿದ್ದರು.
ತಾವು ತರುತ್ತಿದ್ದ ಒಂದು ಪತ್ರಿಕೆಗೆ ‘ಸಾರ್ವಜನಿಕ’ ಎಂದೇ ಹೆಸರಿಟ್ಟಿದ್ದರು. ಡಿವಿಜಿ ಉಲ್ಲಾಸವಂತ ರಾದ ಶಿಷ್ಯರನ್ನೂ ಗೆಳೆಯರನ್ನೂ ಚಿಂತಕರನ್ನೂ ತಯಾರು ಮಾಡಿದ್ದರು.ಅಂತಹ ಪರಂಪರೆ ಚಿಕ್ಕಬಲ್ಳಾಪುರದಲ್ಲಿಯೂ ಬೆಳೆಯಲಿ.ಪತ್ರಿಕೋಧ್ಯವು ಮತ್ತು ಪತ್ರಿಕಾ ಧರ್ಮವು ಆಳವಾದ ಬದ್ಧತೆ ಮತ್ತು ಬೇಡುತ್ತದೆ.ಏನೇ ಆಗಲಿ ಪತ್ರಕರ್ತರು ಜನಪರವಾಗಿದ್ದು ಅಂಚಿನ ವರ್ಗಗಳ ದನಿಯಾಗ ಬೇಕೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರವಿಕುಮಾರ್, ಹಿರಿಯ ಸಾಹಿತಿ ಟಿ.ಎಸ್.ನಾಗೇಂದ್ರ ಬಾಬು, ಡಿವಿಜಿ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಖಜಾಂಚಿ ಮುದ್ದುಕೃಷ್ಣ, ಗುಡಿಬಂಡೆ ತಾಲೂಕು ಮಾಜಿ ಅಧ್ಯಕ್ಷ ಮಂಜುನಾಥ್,ಹಾಲಿ ಅಧ್ಯಕ್ಷ ಶಿವಪ್ಪ, ಸೇರಿದಂತೆ ಜಿಲ್ಲಾ ಕೇಂದ್ರದ ಬಹುತೇಕ ಪತ್ರಕರ್ತರು ಇದ್ದರು.