ಚಿಕ್ಕಬಳ್ಳಾಪುರ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬರೆ ಬಿದ್ದಿದೆ.
ಹಬ್ಬದ ಸಿದ್ಧತೆಯಲ್ಲಿ ತೊಡಗಿರುವ ಜನಸಾಮಾನ್ಯರಿಗೆ ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬ ಉತ್ಸಾಹದಲ್ಲಿ ಜನರು ಬೆಲೆ ಏರಿಕೆಯ ನಡುವೆಯೇ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಜಿಲ್ಲಾ ಕೇಂದ್ರದಲ್ಲಿ ಕಂಡುಬಂದಿತು.
ಕಳೆದ ಒಂದು ವಾರದಿಂದ ಹೂವಿನ ಮಾರುಕಟ್ಟೆಯಲ್ಲಿ ಇಳಿಮುಖವಾಗಿದ್ದ ದರಗಳು ಹಬ್ಬದ ಮುನ್ನಾದಿನ ದಿಢೀರ್ ಏರಿಕೆ ಕಂಡವು. ಕೆ.ಜಿ. ಸೇವಂತಿಗೆ, ಗುಲಾಬಿ ತಲಾ 200 ರೂ., 100 ಗ್ರಾಂ ಮಲ್ಲಿಗೆ ಹಾಗೂ ಕನಕಾಂಬರ ತಲಾ 200 ರೂ.ಗೆ ಮಾರಾಟವಾದವು. ಹೂವಿನ ಹಾರಗಳ ಬೆಲೆ 500ರಿಂದ 1,000 ರೂ.ವರೆಗೂ ತಲುಪಿತ್ತು. ವೀಳ್ಯದೆಲೆ ಕಟ್ಟು 100 ರೂ., ಅಡಿಕೆ 100 ಗ್ರಾಂಗೆ 200 ರೂ., ಏಲಕ್ಕಿ ಬಾಳೆ ಕೆ.ಜಿ.ಗೆ 100 ರೂ. ಹಾಗೂ ಪಚ್ಚಬಾಳೆ 50 ರೂ.ಗೆ ಮಾರಾಟವಾಯಿತು.
ಇದನ್ನೂ ಓದಿ; Chikkaballapur News: ನ.12ರಂದು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಹಬ್ಬದ ಪೂಜೆಗೆ ಅಗತ್ಯವಾದ ಹಣ್ಣುಗಳ ದರವೂ ಗ್ರಾಹಕರಿಗೆ ಬಿಸಿ ಮುಟ್ಟಿಸಿತು. ಸೇಬು ಕೆ.ಜಿ.ಗೆ 280 ರೂ., ಕಿತ್ತಳೆ 100 ರೂ.ಗೆ ಮಾರಾಟವಾಗುತ್ತಿದ್ದರೆ, ಕಜ್ಜಾಯ ತಯಾರಿಕೆಗೆ ಬಳಸುವ ಅಕ್ಕಿ ಕೆ.ಜಿ.ಗೆ 100ರಿಂದ 120 ರೂ. ತಲುಪಿತ್ತು. ಅಡುಗೆ ಎಣ್ಣೆ ಐದು ಲೀಟರ್ ಡಬ್ಬಿಗೆ 1,000ರಿಂದ 1,300 ರೂ.ವರೆಗೆ ದರವಿತ್ತು. ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 60ರಿಂದ 80 ರೂ.ಗೆ ಮಾರಾಟವಾದರೆ, ಕೊತ್ತಂಬರಿ ಸೊಪ್ಪಿನ ಕಂತೆ 30ರಿಂದ 40 ರೂ. ಇತ್ತು.
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ವಿಶೇಷವಾಗಿ ಆಚರಿಸುವ ನೋಮ ಹಬ್ಬದ ಸಂಪ್ರದಾಯಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದೆ.
ನೋಮದಾರ ಒಂದಕ್ಕೆ 10ರಿಂದ 15 ರೂ., ಗೋಟಡಿಕೆ, ಮುಡಿ, ಅರಿಶಿಣದ ಕೊಂಬು ಸೇರಿದಂತೆ ಪೂಜಾ ಸಾಮಗ್ರಿಗಳ ಸೆಟ್ಗೆ 150ರಿಂದ 200 ರೂ. ಪಡೆಯಲಾಗುತ್ತಿತ್ತು. ಮಣ್ಣಿನ ಹಣತೆಗಳು 5ರಿಂದ 50 ರೂ.ವರೆಗೆ ಮಾರಾಟವಾದವು.
ಇನ್ನು ಪಟಾಕಿಗಳ ಬೆಲೆಯೂ ದುಬಾರಿಯಾಗಿದ್ದು, ಒಂದು ಬಾಕ್ಸ್ಗೆ 500 ರೂ.ನಿಂದ 2000ವರೆಗೆ ದರವಿತ್ತು. ಪರಿಸರಸ್ನೇಹಿ ಪಟಾಕಿ ಬಳಕೆಗೆ ಸರ್ಕಾರ ಸೂಚಿಸಿದ್ದರೂ, ದೊಡ್ಡ ಶಬ್ದದ ಪಟಾಕಿ ಗಳನ್ನು ಖರೀದಿಸಲು ಮಕ್ಕಳು ಹಾಗೂ ಯುವಕರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.
ಒಟ್ಟಾರೆ, ಬೆಲೆ ಏರಿಕೆ ಹಬ್ಬದ ಖರ್ಚಿನ ಲೆಕ್ಕವನ್ನು ಹೆಚ್ಚಿಸಿದ್ದರೂ, ಸಂಪ್ರದಾಯ ಮತ್ತು ಸಂಭ್ರಮಕ್ಕೆ ಧಕ್ಕೆ ಬಾರದಂತೆ ಜನತೆ ದೀಪಾವಳಿ ಆಚರಣೆಗೆ ಸಿದ್ಧತೆ ನಡೆಸಿ ಮಾವಿನ ತೋರಣ, ಬಾಳೆಕಂದು ಮತ್ತು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನತೆ ನಗರದಲ್ಲಿ ದೊಡ್ಡ ಮಟ್ಟದಲ್ಲಿಯೇ ಬಿಡು ಬಿಟ್ಟಿದ್ದರು.