ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ರಸಗೊಬ್ಬರ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘ ಪ್ರತಿಭಟನೆ

"ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಕೃಷಿ ಸಿದ್ಧತೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ದರ ಏರಿಕೆ ಮಾಡಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ ನಡೆಸುವುದು ದುಸ್ತರವಾಗಿದೆ. ಕಳೆದ ಒಂದೇ ವಾರದಲ್ಲಿ ನಾಲ್ಕು ಬಾರಿ ದರ ಹೆಚ್ಚಳ ಮಾಡಿರುವ ಪರಿಣಾಮ ಟ್ರ‍್ಯಾಕ್ಟರ್ ಉಳುಮೆ, ನೀರಾವರಿ ಪಂಪ್‌ಸೆಟ್ ಬಳಕೆ ಹಾಗೂ ಬೆಳೆ ಸಾಕಾಣಿಕೆ ವೆಚ್ಚ ದುಪ್ಪಟ್ಟಾಗಿದೆ.

ಕೇಂದ್ರ ಸರಕಾರವು  ರಸಗೊಬ್ಬರ, ಡೀಸೆಲ್ ಹಾಗೂ ಪೆಟ್ರೋಲ್ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರ: ಕೇಂದ್ರ ಸರಕಾರ(Union Govt)ವು ರಸಗೊಬ್ಬರ, ಡೀಸೆಲ್ ಹಾಗೂ ಪೆಟ್ರೋಲ್(Fertilizer, Diesel and Petrol) ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುಟ್ಟಣ್ಣಯ್ಯ ಬಣದ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಟಿ.ಲಕ್ಷ್ಮೀನಾರಾಯಣ ರೆಡ್ಡಿ, ಮುಂಗಾರು ಹಂಗಾಮು ಪ್ರಾರಂಭದಲ್ಲಿಯೇ ಕೇಂದ್ರ ಸರ್ಕಾರ ರಸಗೊಬ್ಬರ, ಡೀಸೆಲ್ ಹಾಗೂ ಪೆಟ್ರೋಲ್ ದರಗಳನ್ನು ಏರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಕೃಷಿ ಸಿದ್ಧತೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ದರ ಏರಿಕೆ ಮಾಡಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ ನಡೆಸುವುದು ದುಸ್ತರವಾಗಿದೆ. ಕಳೆದ ಒಂದೇ ವಾರದಲ್ಲಿ ನಾಲ್ಕು ಬಾರಿ ದರ ಹೆಚ್ಚಳ ಮಾಡಿರುವ ಪರಿಣಾಮ ಟ್ರ‍್ಯಾಕ್ಟರ್ ಉಳುಮೆ, ನೀರಾವರಿ ಪಂಪ್‌ಸೆಟ್ ಬಳಕೆ ಹಾಗೂ ಬೆಳೆ ಸಾಕಾಣಿಕೆ ವೆಚ್ಚ ದುಪ್ಪಟ್ಟಾಗಿದೆ. ಇದರ ಜೊತೆಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದು ದೂರಿದರು.

ಇದನ್ನೂ ಓದಿ: Chikkaballapur News: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಎಸ್‌ಐಆರ್ ವಿರೋಧಿಸಿ ಮೆ.30ಕ್ಕೆ ಬೃಹತ್ ಪ್ರತಿಭಟನೆ : ಎದ್ದೇಳು ಕರ್ನಾಟಕದ ಶ್ರೀರಂಗಾಚಾರಿ

ಪಂಚರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ದಿಢೀರೆಂದು ಗ್ಯಾಸ್ ಬೆಲೆ ಒಂದೇ ಬಾರಿ 999 ರೂ ಹೆಚ್ಚಿಸಿ ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡಿದೆ. ಇದನ್ನು ತಾಳಿಕೊಳ್ಳುವ ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ವಾರದಲ್ಲಿ 4 ಬಾರಿ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರು ಈ ದೇಶದಲ್ಲಿ ಬದುಕಲೇಬಾರದು ಎಂಬ ಸಂದೇಶ ನೀಡಿರುವುದು ಸರ್ವಾಧಿಕಾರಿ ಮನೋಭಾವವನ್ನು ಸೂಚಿಸುತ್ತದೆ ಎಂದರು.

ಕಳೆದ 3 ವರ್ಷಗಳಿಂದ ತೆಪ್ಪಗಿದ್ದ ಕೇಂದ್ರ ಸರಕಾರವು ಯುದ್ದದ ನೆಪವೊಡ್ಡಿ ತೈಲಬೆಲೆ ಹೆಚ್ಚಿಸಿರು ವುದು ಅಮಾನವೀಯವಾಗಿದೆ. ಶ್ರೀಮಂತರ ಬಳಕೆಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುವ ಬದಲಿಗೆ ಬಡವರು, ರೈತರು, ಕೃಷಿ ಕೂಲಿಕಾರ್ಮಿಕ ವರ್ಗದ ಜೇಬಿಗೆ ಕೈಹಾಕಿದೆ. ದೇಶದ ಬೆನ್ನೆಲುಬಾದ ರೈತರಿಗೆ ತೊಂದರೆ ಕೊಡುವ ದುರುದ್ದೇಶದಿಂದಲೇ ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆಯನ್ನು ಹೆಚ್ಚಳ ಮಾಡಿದೆ. ರೈತರಿಗೆ 2 ಸಾವಿರ ಕೊಡುವ ಬಗ್ಗೆ ಮಾತನಾಡುವ ಇವರು ಬೆಲೆಯೇರಿಕೆ ಬಗ್ಗೆಯೂ ಮಾತನಾಡಬೇಕು ಎಂದರು.

cbpm1..

ರಸಗೊಬ್ಬರ ದರ ಏರಿಕೆಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಬಿತ್ತನೆ ನಡೆಸುವುದೇ ಕಷ್ಟಕರವಾಗಿದ್ದು, ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ಸಿಗದಿರುವ ಸಂದರ್ಭದಲ್ಲೇ ಕೃಷಿ ವೆಚ್ಚದ ಹೆಚ್ಚುವರಿ ಹೊರೆ ರೈತರ ಬೆನ್ನುಮೂಳೆ ಮುರಿದಂತಾಗಿದೆ ಎಂದು ಆರೋಪಿಸಿದರು.
ಪ್ರಮುಖ ಬೇಡಿಕೆಗಳು:
1.ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಇಳಿಕೆ ಮಾಡಬೇಕು.

2.ಬೆಲೆಯೇರಿಕೆಯಿಂದ ಕಂಗಾಲಾಗಿರುವ ರೈತರಿಗೆ ಡಿಬಿಟಿ ಮೂಲಕ ಹೆಚ್ಚುವರಿ ಸಹಾಯಧನ ನೀಡಬೇಕು.

3. ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸಬೇಕು.

4. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. 5.ರಸಗೊಬ್ಬರ ಸಬ್ಸಿಡಿ ಹೆಚ್ಚಿಸಬೇಕು.

6.ಗೊಬ್ಬರ ಮಾರಾಟದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಬೇಕು ಹಾಗೂ ಕಾಳಸಂತೆ ಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಪಿಟಿಸಿಎಲ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕು.

ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ದರ್ಶನ್ ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ ನೇತೃತ್ವ ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ಗೌರವಾಧ್ಯಕ್ಷ ಕೋಟೆ ಚನ್ನೇಗೌಡ, ಕಾರ್ಯಾಧ್ಯಕ್ಷ ಪಿ.ಎಂ.ಮಾರುತಿ, ಸಂಚಾಲಕ ರಾಮಾಂಜಿ ಜಿಲ್ಲಾ ಘಟಕದ ಅರುಣ್ ಕುಮಾರ್, ಸಿ.ಎಂ.ಮಾರುತಿ ನಾರಾಯಣಪ್ಪ, ಈಶ್ವರ ರೆಡ್ಡಿ, ರಮೇಶ್ ಬಾಬು, ನಂದಿ ಶ್ರೀನಿವಾಸ್ ರೆಡ್ಡಪ್ಪ, ಜಿ.ಎನ್.ಲಕ್ಷ್ಮಣರೆಡ್ಡಿ, ಪೆದ್ದಪ್ಪಯ್ಯ, ರಮಣ.ಸಿ.ಎಂ, ಶ್ರೀಧರ.ಎನ್, ನಾಗರಾಜ, ಹೆಚ್.ವೆಂಕಟರೆಡ್ಡಿ, ಸಿ.ಬಿ.ಶ್ರೀನಿವಾಸ್, ಗೌಸ್ಪೀರ್, ನಾಗಜಾಚಾರಿ, ಮುನಿರೆಡ್ಡಿ, ವೆಂಕಟ್‌ರೆಡ್ಡಿ, ನಾಗರಾಜ, ಗೌಡಪ್ಪ, ಮುನಿರಾಜು, ಶ್ರೀನಿವಾಸ, ನಾರಾಯಣಸ್ವಾಮಿ, ಯರಪ್ಪ, ಕೆ.ನಾರಾಯಣ ಸ್ವಾಮಿ, ಕೆ.ವಿ.ವೆಂಕಟೇಶಪ್ಪ, ಮನೋಜ್‌ಕುಮಾರ್, ದ್ಯಾವಪ್ಪ, ಶ್ರೀನಾಥ್, ಆಂಜಿನಪ್ಪ, ಕೃಷ್ಣಪ್ಪ, ಗಂಗಪ್ಪ, ಶಾಂತ, ಇತರ ಪದಾಧಿಕಾರಿಗಳು ಭಾಗಿಯಾಗಿದ್ದರು.