ಚಿಕ್ಕಬಳ್ಳಾಪುರ: ಜಂಗಮಕೋಟೆ ಹೋಬಳಿ 13 ಹಳ್ಳಿಗಳ 2334 ಎಕರೆ ಭೂಮಿಗೆ ಸಂಬಂಧಿಸಿದಂತೆ ಕೆಐಎಡಿಬಿ(KIADB) ಅಧಿಸೂಚನೆ ವಾಪಸ್ಸು ಪಡೆಯಬೇಕು. ಫಲವತ್ತಾದ ಭೂಮಿಯಲ್ಲಿ ಕೈಗಾರಿಕೆ ಮಾಡಲು ಹೊರಟಿರುವ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಟ್ರಾಕ್ಟರ್ ಅಡ್ಡ ನಿಲ್ಲಿಸಿ ಬಿರುಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಎದುರು ಕಳೆದ 22 ದಿನಗಳಿಂದ ನಡೆಸುತ್ತಿರುವ ನಮ್ಮ ಭೂಮಿ ನಮ್ಮ ಹಕ್ಕು ಅನಿರ್ಧಿಷ್ಟ ಆಹೋರಾತ್ರಿ ಹೋರಾಟ ಸೋಮವಾರ ಉಗ್ರಸ್ವರೂಪ ತಾಳಿದ್ದು ಸರಕಾರ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ 11 ಗಂಟೆ ಯಿಂದ 2 ಗಂಟೆ ತನಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೋಡಿಹಳ್ಳಿ ಬಣದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಾವು ಕೈಗಾರಿಕೆ ಸ್ಥಾಪನೆಗೆ ವಿರೋಧಿಸುತ್ತಿಲ್ಲ. ಆದರೆ ಎಲ್ಲಾ ವರ್ಗದ ಭೂಮಿ ಜಂಗಮಕೋಟೆ ಹೋಬಳಿಯಲ್ಲಿ ಇದೆ. ಈ ಭಾಗದಲ್ಲಿ ಸರಕಾರ ಉದ್ದೇಶಿಸಿರುವ ಕೈಗಾರಿಕಾ ಪ್ರಸ್ತಾವನೆ ಕೂಡಲೇ ಕೈಬಿಡಬೇಕು. ಕಾರಣ ಈ ಭೂಮಿ ಫಲವತ್ತಾದ ಕೃಷಿ ಭೂಮಿ ಯಾಗಿದೆ. ಕೈಗಾರಿಕೆಗೆ ಯಾವ ಭೂಮಿ ಬಳಸಬೇಕು ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರವಿದೆ. ಸಿ ವರ್ಗದ ಭೂಮಿಯಲ್ಲಿ ಕೈಗಾರಿಕೆ ಮಾಡಬೇಕು. ಇದನ್ನು ಬಿಟ್ಟು ಎಲ್ಲಾ ವರ್ಗದ ಭೂಮಿ ಯಲ್ಲಿ ಮಾಡಲು ಹೊರಟಿರುವುದರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Chikkaballapur News: ರಾಷ್ಟ್ರೀಯ ನಾಯಕರಾದ ಅಂಬೇಡ್ಕರ್, ಜಗಜೀವನ್‌ರಾಂ ನಡುವೆ ತಾರತಮ್ಯ ಮಾಡಬೇಡಿ: ಆರ್.ಲೋಕೇಶ್
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ರವಿಕುಮಾರ್(MLA Ravikumar) ಕುಮ್ಮಕ್ಕಿನಿಂದ ಸರಕಾರ ರೈತ ಸಂಘದ 22 ತಿಂಗಳ ಹೋರಾಟದ ನಡುವೆ ಇಲ್ಲಿಯೇ ಕೈಗಾರಿಕೆ ಮಾಡಲು ಹೊರಟಿದೆ. ಮೇಲಾಗಿ ನಮ್ಮ ವಿರುದ್ದ ಮತ್ತೊಂದು ಸಂಘಟನೆಯನ್ನು ಎತ್ತಿ ಕಟ್ಟಿ ಹೋರಾಟ ಮಾಡಲು ಬಿಟ್ಟು ರೈತರ ನಡುವೆ ಬಿರುಕು ಉಂಟು ಮಾಡಿದ್ದಾರೆ. ಇಷ್ಟೇ ಅಲ್ಲದೆ ಏ.6ರಿಂದ 13 ಹಳ್ಳಿಗಳ ರೈತರೊಂದಿಗೆ ದರ ನಿಗದಿ ಮಾಡಲು ಮುಂದಾಗಿದೆ.
ಇಲ್ಲಿ ಭೂಮಿ ಕೊಡಲು ಸಾಧ್ಯವಿಲ್ಲ ಎಂಬ 859 ರೈತರು 22 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಿಲ್ಲ, ಶಾಸಕರು ಬಂದು ನಿಮ್ಮ ಸಮಸ್ಯೆ ಏನೆಂದು ಕೇಳಿಲ್ಲ. ಸರಕಾರವೂ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇದನ್ನು ಪ್ರತಿಭಟಿಸಿ ರಸ್ತೆ ತಡೆ ನಡೆಸಲಾಗಿದೆ ಎಂದರು.
ಜಂಗಮಕೋಟೆ ಹೋಬಳಿಯಲ್ಲಿ ಅಧಿಕಾರಿಗಳು ಕೆಐಎಡಿಬಿಗೆ ಭೂಮಿ ನೀಡುವ ಅಂಗ ವಾಗಿ ಭ್ರಷ್ಟಾಚಾರ ಮಾಡುವ ಮೂಲಕ ಪಾಲಿಹೌಸ್ ಇಲ್ಲದಿದ್ದರೂ ಇದೆ ಎಂದು ಬಿಡು ವುದು, ಇರುವ ಕಡೆ ಇಲ್ಲ ಎಂದು ಬರೆಯುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜಿ ಪ್ರಭು ಮಾತನಾಡಿ, ನಿಮ್ಮ ಆಗ್ರಹವನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡಲಾಗುವುದು. ಕೆಐಎಡಿಬಿಗೆ ಭೂಮಿ ಕೊಡುವ ವಿಷಯದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಮಾತನಾಡಿ, ಸ್ಥಳಕ್ಕೆ ಬಂದು ನಿಮ್ಮ ಬೇಡಿಕೆ ಆಲಿಸುವಂತೆ ಕೋರಲಾಗುವುದು. ದಯವಿಟ್ಟು ರಸ್ತೆತಡೆ ನಿಲ್ಲಿಸಿ ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಸಂಧಾನದಿಂದ ತೃಪ್ತರಾದ ರೈತರು ರಸ್ತೆತಡೆ ಪ್ರತಿಭಟನೆ ವಾಪಸ್ಸು ಪಡೆದರು.