ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ರೈತರ ಭೂಮಿ ವಿವಾದ: ಜು.13ಕ್ಕೆ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ: ಕೆ.ಸಿ.ರಾಜಾಕಾಂತ್

1972–73ರಲ್ಲಿ ಕಂದಾಯ ಇಲಾಖೆಯೇ ಸರ್ವೆ ನಂಬರ್ 67ರಲ್ಲಿ ಸಿಂಗಾಟಿಕದಿರೇನಹಳ್ಳಿ,ಕಣಿವೆ ನಾರಾ ಯಣಪುರ, ಸುದ್ದಹಳ್ಳಿಯ ಪ್ರತಿಫಲಾನುಭವಿಗೆ 2 ರಿಂದ 3 ಎಕರೆ ಭೂ ಮಂಜೂರಾತಿ ಮಾಡಿ ಇವರ ಹೆಸರಿಗೆ ಖಾತೆ ಪಹಣಿ ಸೇರಿ ಎಲ್ಲಾ ದಾಖಲೆಗಳನ್ನು ವಿತರಣೆ ಮಾಡಿದೆ.ಇದರಲ್ಲಿ ಬೆಳೆ ಬೆಳದುಕೊಂಡು ಸ್ವಾಧೀನದಲ್ಲಿರುತ್ತಾರೆ.

ಚಿಕ್ಕಬಳ್ಳಾಪುರ: ಐವತ್ತು ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿರುವ ಭೂಮಿಯನ್ನು ಅರಣ್ಯ ಇಲಾಖೆಯದ್ದು ಎಂದು ಹೇಳಿ ಒಕ್ಕಲೆಬ್ಬಿಸಲು ನಡೆಸುತ್ತಿರುವ ಪ್ರಯತ್ನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಜು.13ರಂದು ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್ ತಿಳಿಸಿದ್ದಾರೆ.

ನಗರದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

1972–73ರಲ್ಲಿ ಕಂದಾಯ ಇಲಾಖೆಯೇ ಸರ್ವೆ ನಂಬರ್ 67ರಲ್ಲಿ ಸಿಂಗಾಟಿಕದಿರೇನಹಳ್ಳಿ,ಕಣಿವೆ ನಾರಾಯಣಪುರ, ಸುದ್ದಹಳ್ಳಿಯ ಪ್ರತಿಫಲಾನುಭವಿಗೆ 2 ರಿಂದ 3 ಎಕರೆ ಭೂ ಮಂಜೂರಾತಿ ಮಾಡಿ ಇವರ ಹೆಸರಿಗೆ ಖಾತೆ ಪಹಣಿ ಸೇರಿ ಎಲ್ಲಾ ದಾಖಲೆಗಳನ್ನು ವಿತರಣೆ ಮಾಡಿದೆ.ಇದರಲ್ಲಿ ಬೆಳೆ ಬೆಳದುಕೊಂಡು ಸ್ವಾಧೀನದಲ್ಲಿರುತ್ತಾರೆ.

ಇದನ್ನೂ ಓದಿ: Chikkaballapur News: ನಮ್ಮದು ನುಡಿದಂತೆ ನಡೆದ ಸರಕಾರ: ಜಿಲ್ಲೆಯಲ್ಲಿ 7845 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ : ಯಲುವಳ್ಳಿ ಎನ್.ರಮೇಶ್

ಆದರೆ ದಲಿತರಿಗೆ ಕಿರುಕುಳ ನೀಡುವ ಸಲುವಾಗಿಯೇ 1991-92ರಲ್ಲಿ ಆಡಳಿತಾತ್ಮಕ ಲೋಪ ಗಳಿಂದಾಗಿ ಅರಣ್ಯ ಇಲಾಖೆಗೆ ಈ ಭೂಮಿಯನ್ನು ಕಂದಾಯ ಇಲಾಖೆ ಮಾಡಿಕೊಟ್ಟಿದೆ ಎಂದು ಹೇಳಿಕೊಂಡು ದಲಿತ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? 91ರಿಂದ ಈವರೆಗೆ ಅರಣ್ಯ ಇಲಾಖೆ ಯಾಕೆ ಹದ್ದುಬಸ್ತು ಗುರುತಿಸಿಕೊಂಡು ಬೇಲಿ ಹಾಕಿಲ್ಲ. ಈಗ ದಿಢೀರ್ ಎಂದು ನಮ್ಮ ಎನ್ನುವುದು ಇದು ದಲಿತ ವಿರೋಧಿ ಧೋರಣೆ ಅಲ್ಲವೆ? ತಮ್ಮದಲ್ಲದ ತಪ್ಪುಗಳಿಗೆ ದಲಿತರನ್ನು ಬೀದಿಗೆ ತಳ್ಳಿರುವುದು ಅನ್ಯಾಯ. ಈ ಅನ್ಯಾಯ ಎಸಗಿರುವ ಅಧಿಕಾರಿಗಳ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕಿಡಿ ಕಾರಿದರು.

ಬಡ ದಲಿತ ರೈತರನ್ನು ರಕ್ಷಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳೇ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಈ ಸಮಸ್ಯೆ ಇಟ್ಟುಕೊಂಡು 25 ದಿನಗಳಿಂದ ಅರಣ್ಯ ಇಲಾಖೆ ಎದುರು ಹೋರಾಟ ಮಾಡುತ್ತಿದ್ದರೂ ಹೋರಾಟಕ್ಕೆ ಬೆಲೆ ನೀಡದೆ, ಜಾಣಕುರುಡುತನ ಪ್ರದರ್ಶನ ಮಾಡು ತ್ತಿರುವುದು ಸರ್ವಥಾ ಸರಿಯಲ್ಲ.ತಹಶೀಲ್ದಾರ್ ಮನಸ್ಸು ಮಾಡಿದರೆ ಅರ್ಧಗಂಟೆಯಲ್ಲಿ ಈ ಸಮಸ್ಯೆ ಪರಿಹರಿಸಬಹುದು ಎಂದರು.

ಚಿಕ್ಕಬಳ್ಳಾಪುರ ತಹಶೀಲ್ದಾರ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಕೂಡ ಈ ನೆಲದ ಕಾನೂನಿಗೆ ಬೆಲೆ ನೀಡುತ್ತಿಲ್ಲ, ಬದಲಿಗೆ ಬಲಾಢ್ಯರ ಪರವಾಗಿ ನಿಂತಿರಬಹುದು ಎಂಬ ಅನುಮಾನ ನಮಗೆ ಬರುತ್ತಿದೆ. ಏಕೆಂದರೆ ಪ್ರತಿಭಟನೆಯ 17 ದಿನ ಸ್ಥಳಕ್ಕೆ ಬಂದ ತಹಶೀಲ್ದಾರ್ ಅವರನ್ನು ನಾವು ಈ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಕಂದಾಯ ಇಲಾಖೆ ಕೊಟ್ಟಿದೆಯೋ ಇಲ್ಲವೋ ಉತ್ತರಕೊಡಿ ಎಂದರೆ ನಾನು ಸಿಂಗಾಟಕದಿರೇನಹಳ್ಳಿ ಭೂ ದಾಖಲೆಗಳನ್ನೇ ನೋಡಿಲ್ಲ, ನೋಡಿ ಹೇಳುತ್ತೇನೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ.

ಇಂತಹ ಅಂತಃಕರಣ ಇಲ್ಲದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬಡವರ ಮೇಲೆ ಮಾತ್ರ ಅಧಿಕಾರ ಚಲಾಯಿಸುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನಾಂದೋಲನ ರೂಪದ ಪ್ರತಿಭಟನೆಯನ್ನು ಜು.13ರಂದು ತಹಸೀಲ್ದಾರ್ ಕಚೇರಿ ಎದುರು ನಡೆಸಲಾಗುವುದು ಎಂದರು.

ಇನ್ನೂ ವಿಶೇಷ ಎಂದರೆ ಅರಣ್ಯ ಇಲಾಖೆಗೆ ಸೇರಬೇಕಾದ ಭೂಮಿಯಲ್ಲಿಯೇ ವಿಐಟಿ,ಇಶಾ,ನಂದಿ ಮೆಡಿಕಲ್ ಕಾಲೇಜು ಇತರೆ ಸಂಸ್ಥೆಗಳ ಒತ್ತುವರಿಗಳ ವಿರುದ್ಧ ಕ್ರಮ ಕೈಗೊಳ್ಳದ ರಣ್ಯ ಇಲಾಖೆ ಅಧಿಕಾರಿಗಳು, ಕೇವಲ ಬಡವರನ್ನು,ಅಸಹಾಯಕ ದಲಿತ ರೈತರನ್ನೇ ಗುರಿಯಾಗಿಸುತ್ತಿರುವುದು ಯಾಕೆ? ಬಡವರಿಗೆ ಒಂದು ಕಾನೂನು ಬಲಾಢ್ಯರಿಗೆ ಒಂದು ಕಾನೂನು ಇದೆಯಾ? ಎಂದು ಆರೋಪಿಸಿದರು.

ಜು.13ರಂದು ತಾಲೂಕು ಕಛೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ 8 ತಾಲ್ಲೂಕುಗಳ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು ಇದು ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಿಳಿಸಿದ ಪ್ರತಿಭಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಸ್ವತಃ ಬಂದು ಮನವಿ ಸ್ವೀಕರಿಸಿ ನ್ಯಾಯ ಒದಗಿಸಬೇಕು. ಬಹುಮುಖ್ಯವಾಗಿ ದಲಿತ ರೈತರು ಉಳುಮೆ ಮಾಡುತ್ತಿರುವ ಅವರ ಜಮೀನಿನಲ್ಲಿ ನಿರಾತಂಕವಾಗಿ ಕೃಷಿ ಮಾಡಲು ಅವಕಾಶ ಕಲ್ಪಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಗೋಷ್ಠಿಯಲ್ಲಿ ಕೆ.ಸಿ.ರಾಜಕಾಂತ್, ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕ ಎನ್.ಪರಮೇಶ್, ಜಿಲ್ಲಾ ಸಂಚಾಲಕ ಶ್ರೀರಂಗಪ್ಪ, ಚಿಕ್ಕಬಳ್ಳಾಪುರ ತಾಲೂಕು ಸಂಘಟನಾ ಸಂಚಾಲಕ ಎನ್.ಮುನಿರಾಜು, ತ್ಯಾಗರಾಜು, ಚಿನ್ನಪ್ಪ, ಕಣಿತಹಳ್ಳಿ ಮುನಿಯಪ್ಪ, ದಿನ್ನೆ ಹೊಸಳ್ಳಿ ವೆಂಕಟೇಶ್, ರಾಮಕೃಷ್ಣ, ಲಕ್ಷ್ಮಯ್ಯ ಇತರರು ಇದ್ದರು.