ಚಿಂತಾಮಣಿ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕೆಐಎಡಿಬಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಬೆಂಬಲಿಸಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೂ.4ರಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಕದಿರೇಗೌಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಪ್ರತಿಶ್ ಹೇಳಿದರು.
ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೂ.4ರಿಂದ ಪಂಜಿನ ಮೆರವಣಿಗೆ, ಜೂ.5ರಿಂದ 13 ಹಳ್ಳಿಗಳ ರೈತ ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಲಿದೆ. ಈ ಹೋರಾಟಕ್ಕೆ ತಾಲ್ಲೂಕಿನ ಎಲ್ಲಾ ಪಕ್ಷಾತೀತ,ಜಾತೀತ, ದಲಿತ ಪರ ಹಾಗೂ ಕನ್ನಡ ಪರ ಸಂಘಟನೆಗಳು ಮತ್ತು ರೈತ ಬಾಂಧವರು ಬೆಂಬಲ ನೀಡಿ ಭಾಗವಹಿಸಬೇಕಾಗಿ ಕೋರಿದರು.
ರೈತರ ಹಕ್ಕುಗಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು ಜೂ.5ರಂದು ಶಿಡ್ಲಘಟ್ಟ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು,ಇಲ್ಲಿ ಯಾವುದೇ ನದಿ-ನಾಲೆಗಳ ಆಶ್ರಯವಿಲ್ಲದೆ ಬರದ ಭೂಮಿಯಾಗಿದೆ. ಇಂತಹ ಸಂದರ್ಭದಲ್ಲಿ ಜಂಗಮ ಕೋಟೆ ಹೋಬಳಿಯ ಬಸವಪಟ್ಟಣ, ತಾದೂರು, ನಡುಪಿನಾಯಕನಹಳ್ಳಿ, ಯಣ್ಣಂಗೂರು, ಹೊಸಪೇಟೆ, ಚೊಕ್ಕಂಡಹಳ್ಳಿ, ಗೂಲಹಳ್ಳಿ, ದೇವಗಾನಹಳ್ಳಿ, ಅರಿಕರೆ, ಸಂಜೀವಪುರ, ಕೋಲಮಿ ಹೊಸೂರು, ಎದ್ದಲ ತಿಪ್ಪೇನಹಳ್ಳಿ, ತೊಟ್ಟಗಾನಹಳ್ಳಿ ಸೇರಿದಂತೆ 13 ಹಳ್ಳಿಗಳ ವ್ಯಾಪ್ತಿಯಲ್ಲಿ 2823 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಭೂಸ್ವಾಧೀನಕ್ಕೆ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
ರೈತರ ನಿರಂತರ ಹೋರಾಟದ ಫಲವಾಗಿ ಸರ್ಕಾರ 552 ಎಕರೆ ಭೂಸ್ವಾಧೀನದ ಆದೇಶ ವನ್ನು ಕೈ ಬಿಟ್ಟಿದ್ದು, ಉಳಿದ 2271 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಆದರೆ, ಸರ್ಕಾರ ಕೈಬಿಟ್ಟಿರುವ 552 ಎಕರೆ ಜಮೀನಿನ ಮಾಲೀಕರೇ ಹೋರಾಟದ ಮುಂಚೂಣಿ ಯಲ್ಲಿದ್ದು, ಉಳಿದ ರೈತರ ಜಮೀನನ್ನು ಏಕೆ ಬಿಟ್ಟಿಲ್ಲ ಎಂಬುದು ವಿಪರ್ಯಾಸದ ಸಂಗತಿ ಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಭೂಮಿಯ ಹೆಸರಿನಲ್ಲಿ ಈ ಹಿಂದೆ ಬೇರೆಡೆ ನೂರಾರು ಎಕರೆ ಭೂಪರಿವರ್ತನೆ (ಲೇ ಔಟ್)ಆಗಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕಳೆದ 75 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಈವರೆಗೂ ರೈತರ ಅಹವಾಲು ಆಲಿಸಿಲ್ಲ ಎಂದು ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗ ಈ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಯಲಿದ್ದು,ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಹುಸೇನ್ ಸಾಬಿ, ನಾಗರಾಜು, ಶ್ರೀರಾಮಪ್ಪ, ನಾರಾಯಣ ಸ್ವಾಮಿ, ರಮೇಶ್, ಪ್ರಭುಗೌಡ, ಈರಪ್ಪ, ನಾಗಣ್ಣ, ಬೈರೆಡ್ಡಿ, ಶ್ರೀನಿವಾಸ್ ರೆಡ್ಡಿ, ನರಸಿಂಹಪ್ಪ, ಅಸ್ಲಾಂ ಪಾಷಾ ಸೇರಿದಂತೆ ಮತ್ತಿತರರು ಇದ್ದರು.